ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ ಮೊದಲ ಬಾರಿಗೆ ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸೋಲು ಕಂಡಿರುವ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಾರದಿತ್ತು ಎಂದು ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು. 1996ರ ಕೇರಳ ಚುನಾವಣೆಯಲ್ಲಿ ಎಲ್ಡಿಎಫ್ ಚುನಾವಣೆ ಗೆದ್ದಿತ್ತು, ಆದರೆ ಮುಖ್ಯಮಂತ್ರಿಯಾಗಿದ್ದ ವಿ.ಎಸ್ ಅಚ್ಯುತಾನಂದನ್ ತಮ್ಮ ಕ್ಷೇತ್ರದಲ್ಲಿ ಸೋತಿದ್ದರು. ನೈತಿಕ ಹೊಣೆ ಹೊತ್ತ ಅಚ್ಯುತಾನಂದನ್ ಅವರು ಆ ವೇಳೆ ಮುಖ್ಯಮಂತ್ರಿ ಆಗಲಿಲ್ಲ. ಅದೇ ರೀತಿ ದೀದಿ ಕೂಡ ನೈತಿಕವಾಗಿ ಸಿಎಂ ಆಗಬಾರದಿತ್ತು ಎಂದರು.
ಮಮತಾ ಬ್ಯಾನರ್ಜಿ ಅವರ ಹಳೆ ಶಿಷ್ಯ ಸುವೆಂದು ಅಧಿಕಾರಿ ಟಿಎಂಟಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಚುನಾವಣೆ ಎದುರಿಸಿದ್ದರು. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದ್ದರು ದೀದಿಯಿಂದ ಶಾಸಕ ಸ್ಥಾನ ಕಿತ್ತುಕೊಳ್ಳುವಲ್ಲಿ ಸುವೆಂದು ಅಧಿಕಾರಿ ಯಶಸ್ವಿಯಾಗಿದ್ದರು. ಈಗ 77 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯ ಶಾಸಕಾಂಗ ನಾಯಕನಾಗಿ ಅಧಿಕಾರಿ ಆಯ್ಕೆ ಆಗಿದ್ದಾರೆ. ಹಳೆ ಗುರು ದೀದಿ ಎದುರು ವಿಪಕ್ಷ ನಾಯಕನಾಗಿ ಸುವೆಂದು ಸದನದಲ್ಲಿ ಮುಖಾಮುಖಿಯಾಗಲಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ಮಾತನಾಡಿದ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಏಕೆ ಸೋತಿತು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರಿಸಲ್ಲ ಎಂದರು. ಮೊದಲು ದೆಹಲಿಯಲ್ಲಿ ಅಮಿತ್ ಶಾ, ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರು. ಇನ್ನು ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ ಬಂಗಾಳದಲ್ಲಿ ಶುರುವಾಗಿದೆ. ಆದರೆ ದೀದಿ ಸರ್ಕಾರ ರೈತರನ್ನು ತಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸದ್ಯ ಕೇವಲ 40 ಲಕ್ಷ ರೈತರು ಮಾತ್ರ ಫಲಾನುಭವಿಗಳಾಗಿದ್ದಾರೆ ಎಂದರು.
ಇನ್ನು ಈ ಬಾರಿ ವಿಪಕ್ಷ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಸದನದಲ್ಲಿ ಜನರ ದನಿಯಾಗಿರಲು ಪ್ರಯತ್ನಿಸುತ್ತೇನೆ. ಕಳೆದ 10 ವರ್ಷಗಳಿಂದಲೂ ಟಿಎಂಸಿಯಿಂದ ವಿಪಕ್ಷ ನಾಯಕರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಈ ಬಾರಿ ವಿಪಕ್ಷ ಸಕ್ರಿಯವಾಗಿ ಕೆಲಸ ಮಾಡಲಿದೆ. ಟಿಎಂಸಿ ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸುವುದು ಸುಲಭದ ಕೆಲಸ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕ್ಯಾಮರಾ ನೋಡಿಕೊಂಡು ಅಳುವುದು ಅದ್ಭುತ ನಟನೆ; ಪ್ರಧಾನಿ ಮೋದಿ ಕಣ್ಣೀರಿಗೆ ಕಾಂಗ್ರೆಸ್ ವ್ಯಂಗ್ಯ
ನಾರಾದ ಪ್ರಕರಣದಲ್ಲಿ ಸಚಿವ ಫರಾದ್ ಹಕ್ಕಿಂ ಅವರ ಸಿಬಿಐ ಬಂಧನದ ಸಂಬಂಧ ಬಿಜೆಪಿಯನ್ನು ಟಿಎಂಸಿ ದೂರುತ್ತಿರುವ ಬಗ್ಗೆಯೂ ಅಧಿಕಾರಿ ಉತ್ತರಿಸಿದರು. ಸರ್ಕಾರದ ರಚನೆಯ ಬೆನ್ನಲ್ಲೇ ಸಚಿವr ಬಂಧನ ನಡೆದಿದೆ, ಆದರೆ ಪ್ರಕರಣದ ಸಂಬಂಧ ನನ್ನನ್ನು ಏಕೆ ಬಂಧಿಸಿಲ್ಲ ಎಂದು ನಾನೇ ಉತ್ತರಿಸಲು ಬರುವುದಿಲ್ಲ. ತನಿಖೆ ಜಾರಿಯಲ್ಲಿರುವಾಗ, ಪ್ರಕರಣ ಕೋರ್ಟ್ನಲ್ಲಿರುವ ನಾನು ಏನನ್ನೂ ಉತ್ತರಿಸಲು ಸಾಧ್ಯವಿಲ್ಲ ಎಂದು ನುಣಿಚಿಕೊಂಡರು. ಚುನಾವಣಾ ಫಲಿತಾಂಶ ಬಳಿಕ ನಡೆದ ಹಿಂಸಾಚಾರದಲ್ಲಿ 30 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಸರ್ಕಾರದ ವಿರುದ್ಧ ಉನ್ನತಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ನಂದಿಗ್ರಾಮದಲ್ಲಿ ಸೋತಿರುವ ಮಮತಾ ಬ್ಯಾನರ್ಜಿ ಭವನಿಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಭವನಿಪುರದಲ್ಲಿ ಗೆದ್ದಿರುವ ಶೋಭಂದೆಬ್ ಚಟ್ಟೋಪಾಧ್ಯಯ ಪಕ್ಷದ ನಾಯಕಿಗಾಗಿ ರಾಜೀನಾಮೆ ನೀಡುವ ಮೂಲಕ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ