HOME » NEWS » National-international » MAMATA BANERJEE ONLY HOPE FOR THE OPPOSITION PARTIES IN FIGHT AGAINST MODI IN 2024 ELECTIONS SNVS

Mamata vs Modi - 2024ರ ಚುನಾವಣೆಯಲ್ಲಿ ಮೋದಿ ಎದುರಿಸಲು ವಿಪಕ್ಷಗಳ ಏಕೈಕ ಆಶಾಕಿರಣ ದೀದಿ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಗೆಲುವು ಏನೆಲ್ಲಾ ರಾಜಕೀಯ ಬದಲಾವಣೆಗೆ ಎಡೆ ಮಾಡಿಕೊಡಬಹುದು. ಬಿಜೆಪಿಗೆ ಏನಿದೆ ಪಾಠ? ಬ್ರಜೇಶ್ ಕುಮಾರ್ ಸಿಂಗ್ ಅವರ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

news18-kannada
Updated:May 3, 2021, 12:24 PM IST
Mamata vs Modi - 2024ರ ಚುನಾವಣೆಯಲ್ಲಿ ಮೋದಿ ಎದುರಿಸಲು ವಿಪಕ್ಷಗಳ ಏಕೈಕ ಆಶಾಕಿರಣ ದೀದಿ
ಮಮತಾ ಬ್ಯಾನರ್ಜಿ
  • Share this:
ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಪಕ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಿದೆ. ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ವೈಯಕ್ತಿಕವಾಗಿ ಸೋತರೂ ಪಕ್ಷವನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಮೋದಿ ವಿರುದ್ಧದ ಹೋರಾಟಕ್ಕೆ ನಾಯಕತ್ವ ವಹಿಸಲು ಈಗ ರಾಷ್ಟ್ರೀಯ ವಿಪಕ್ಷಗಳು ಮಮತಾ ಅವರತ್ತ ದೃಷ್ಟಿ ನೆಟ್ಟಿವೆ. ನಾಯಕತ್ವ ವಹಿಸಿಕೊಳ್ಳಬೇಕಿದ್ದ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚುವ ಹಾದಿಯಲ್ಲಿದೆ. ಇದೊಂದು ವಿಷಯವಾದರೆ, ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ದಿನಗಳನ್ನ ಎದುರಿಸಬೇಕಾಗಬಹುದು. ಯಾಕೆಂದರೆ, ಇಲ್ಲಿ ಆಕೆಗೆ ವಿಪಕ್ಷವಾಗಿರುವುದು ಬಿಜೆಪಿ. ವಿಪಕ್ಷವಾಗಿ ಬಿಜೆಪಿಯಂತೂ ಸುಮ್ಮನೆ ಕೂರುವ ಸಾಧ್ಯತೆ ಇಲ್ಲ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಸ್ಸಾಮ್, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಬಂದ ಫಲಿತಾಂಶ ನಿರೀಕ್ಷಿತವೇ ಆಗಿದೆ. ಆದರೆ, ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಬಹಳ ಕುತೂಹಲ ಮೂಡಿಸಿದೆ. ಟಿಎಂಸಿ 200ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಆದರೆ, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ಚುನಾವಣೆ ಸೋತಿದ್ದಾರೆ. ಮಮತಾ ಬ್ಯಾನರ್ಜಿ ಅವರು 10 ವರ್ಷಗಳ ಹಿಂದೆ ಇದೇ ನಂದಿಗ್ರಾಮದಲ್ಲಿ ತಮ್ಮ ಹೋರಾಟಗಳನ್ನ ಪ್ರಾರಂಭ ಮಾಡಿ ಎಡರಂಗದ ಭದ್ರಕೋಟೆಯನ್ನ ಛಿದ್ರಗೊಳಿಸಿದ್ದರು.

ಗೆಲುವು ಎಂಬುದು ಒಂದು ರೀತಿಯ ವ್ಯಸನ. ಕೆಲ ಜನರಿಗೆ ಅದು ಅಸೀಮ ಶಕ್ತಿ ತಂದುಕೊಡುತತದೆ. ಮಮತಾ ಅವರಲ್ಲಿ ಇದು ದ್ಯೋತಕವಾಗಿದೆ. ನಂದಿಗ್ರಾಮದಲ್ಲಿ ತಮ್ಮದೇ ಕಾರಿನ ಡೋರ್​ಗೆ ಸಿಕ್ಕಿಕೊಂಡು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಆದರೆ, ತಮ್ಮ ಕಾಲಿನ ಗಾಯಕ್ಕೆ ಬಿಜೆಪಿ ಕಾರಣ ಎಂದು ದೂಷಿಸುತ್ತಾ, ಗಾಯದ ಕಾಲಿನೊಂದಿಗೆ ವ್ಹೀಲ್ ಚೇರ್​ನಲ್ಲಿ ಕೂತೇ ಒಂದಾದ ಮೇಲೊಂದರಂತೆ ಚುನಾವಣಾ ಸಮಾವೇಶಗಳಲ್ಲಿ ಭಾಗವಹಿಸಿದರು. ಜನರ ಅನುಕಂಪ ಗಿಟ್ಟಿಸುವಲ್ಲಿ ಯಶಸ್ವಿಯಾದರು. ಇವತ್ತು ಗೆಲುವು ದಕ್ಕಿದ ನಂತರ ಮಮತಾ ಬ್ಯಾನರ್ಜಿ ಅವರ ಕಾಲಿನಲ್ಲಿದ್ದ ಪ್ಲಾಸ್ಟರ್ ಮತ್ತು ವ್ಹೀಲ್ ಚೇರ್ ಮಾಯವಾಗಿವೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ಮಮತಾ ವರ್ಸಸ್ ಮೋದಿ ನಡುವಿನ ಹಣಾಹಣಿಯಾಗಿ ಬಿಂಬಿತವಾಗಿತ್ತು. ಮಮತಾ ಅವರು ಈ ಚುನಾವಣೆ ಗೆಲ್ಲುವುದು ಸ್ಪಷ್ಟ ಎಂಬ ಸುಳಿವು ಸಿಗುತ್ತಿದ್ದಂತೆಯೇ ವಿಪಕ್ಷಗಳಿಗೆ ಮೋದಿ ವಿರುದ್ಧ ಭವಿಷ್ಯದ ಹೋರಾಟಗಳಿಗೆ ಮಮತಾ ಅವರಿಗೇ ನಾಯಕತ್ವ ವಹಿಸುವ ಅವಕಾಶ ಕಾಣಿಸಿದೆ. ಆದರೆ, ನಂದಿಗ್ರಾಮದಲ್ಲಿ ಮಮತಾ ವೈಯಕ್ತಿಕವಾಗಿ ಸೋತಾಗ ಈ ಪಕ್ಷಗಳ ಉತ್ಸಾಹ ಸಾಕಷ್ಟು ಕುಗ್ಗಿದೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಡೆದಿರುವ ಗೆಲುವು ಎಷ್ಟು ಮುಖ್ಯ ಎಂಬುದು ಈಗಿನ ಪ್ರಶ್ನೆ. ಬಿಜೆಪಿ ದೃಷ್ಟಿಯಿಂದ ನೋಡುವುದಾದರೆ ಅಸ್ಸಾಮ್ ರಾಜ್ಯದದಲ್ಲಿ ಸಿಎಂ ಸರ್ವಾನಂದ ಸೋನೋವಾಲ್ ಮತ್ತು ಹಿಮಂತ್ ವಿಶ್ವ ಶರ್ಮಾ ಮಧ್ಯೆ ವೈಯಕ್ತಿಕ ಜಗಳದಿಂದ ಬಿಜೆಪಿಗೆ ಗೆಲುವು ಕಷ್ಟ ಎಂಬಂಥ ಸ್ಥಿತಿಯಲ್ಲೂ ಗೆದ್ದಿದೆ. ಪುದುಚೇರಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ. ಕೇರಳಕ್ಕೆ ಬಂದರೆ ಅಲ್ಲಿ ಗೆಲುವು ಸಾಧಿಸುವಷ್ಟು ತಯಾರಿ ಇರಲಿಲ್ಲ ಎಂಬುದು ಬಿಜೆಪಿಗೆ ಅರಿವಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಗೆಲುವಿಗೆ ಬಿಜೆಪಿ ಕಲ್ಲು ಹಾಕಲು ಮಾತ್ರ ಯಶಸ್ವಿಯಾಯಿತು. ಕಳೆದ 40 ವರ್ಷದಲ್ಲಿ ಇದೇ ಮೊದಲ ಬಾರಿಗೆ ಎಲ್​ಡಿಎಫ್​ನ 5 ವರ್ಷ ಆಡಳಿತದ ಬಳಿಕ ಯುಡಿಎಫ್ ಅಧಿಕಾರಕ್ಕೆ ಮರಳಲು ವಿಫಲವಾಗಿದೆ. ರಾಹುಲ್ ಗಾಂಧಿ ನಡೆಸಿದ ಪುಶಪ್, ಸ್ಮಿಮಿಂಗ್ ಕಸರತ್ತು ಕೇರಳದಲ್ಲಿ ಕಾಂಗ್ರೆಸ್​ಗೆ ಹೆಚ್ಚು ಮತ ತಂದುಕೊಡಲಿಲ್ಲ. ಕೇರಳಿಗರು ಎಲ್​ಡಿಎಫ್​ಗೆ ಮತ್ತೊಮ್ಮೆ ಮಣೆಹಾಕಿದರು.

ರಿಯಲ್ ಡ್ರಾಮಾ ನಡೆದದ್ದು ಪಶ್ಚಿಮ ಬಂಗಾಳದಲ್ಲಿ. ವಿಧಾನಸಭಾ ಚುನಾವಣೆ, ಲೋಕಸಭೆ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ, ಯಾವುದೇ ಇರಲಿ ಬಿಜೆಪಿ ತನ್ನೆಲ್ಲಾ ಬಲ ಉಪಯೋಗಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಗೆಲುವು ಸುಲಭವಲ್ಲ ಎಂಬ ಅರಿವು ಬಿಜೆಪಿಯ ಅಗ್ರ ನಾಯಕರಿಗೆ ಇತ್ತು. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದು, ರಾಜ್ಯದಲ್ಲಿ ಪಕ್ಷಕ್ಕೆ ಸರಿಯಾದ ರಚನೆ ಇರಲಿಲ್ಲ. ತಳಮಟ್ಟದಲ್ಲಿ ಎಲ್ಲೆಡೆ ಕೆಲಸ ಮಾಡುವಷ್ಟು ಪ್ರಮಾಣದಲ್ಲಿ ಕಾರ್ಯಕರ್ತರು ಇರಲಿಲ್ಲ. ಎರಡನೆಯದು, ರಾಜ್ಯದಲ್ಲಿ ಮುಸ್ಲಿಮ್ ಮತಗಳು ಗಣನೀಯ ಪ್ರಮಾಣದಲ್ಲಿವೆ. ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುಸ್ಲಿಮ್ ಮತಗಳೇ ನಿರ್ಣಾಯಕ ಎನಿಸಿವೆ. ಇವರು ಬಿಜೆಪಿಯನ್ನು ಸೋಲಿಸಲು ಸಮರ್ಥ ಇರುವ ಯಾವುದೇ ಪಕ್ಷವನ್ನು ಬೇಕಾದರೂ ಬೆಂಬಲಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇದೆ ಆಗಿದ್ದು. ಕಾಂಗ್ರೆಸ್ ಮ ತ್ತು ಎಡರಂಗಕ್ಕೆ ಬೆಂಬಲ ನೀಡುತ್ತಾ ಬಂದಿದ್ದ ಮುಸ್ಲಿಮರು ಇದೀಗ ಮಮತಾ ಪಾಳಯ ಸೇರಿಕೊಂಡರು. ಅವರಿಗೆ ಒಟ್ಟಾರೆ ಬಿಜೆಪಿ ಅಧಿಕಾರ ಏರುವುದರಿಂದ ತಡೆಯುವುದು ಬೇಕಿತ್ತು.

ಮಮತಾ ಬ್ಯಾನರ್ಜಿ ಅಧಿಕಾರ ಇದ್ದಾಗಲೇ ಹಲವು ಜನಪ್ರಿಯ ಯೋಜನೆಗಳನ್ನ ಘೋಷಿಸಿದ್ದರು. ಬಿಜೆಪಿಯಿಂದ ತನಗೆ ಅಪಾಯ ಇದೆ ಎಂಬುದು ಬಿಂಬಿತವಾಗುವ ರೀತಿಯಲ್ಲಿ ಆಕೆಯ ವ್ಹೀಲ್ ಚೇರ್​ನಲ್ಲಿ ಕೂತೇ ಸಾರ್ವಜನಿಕವಾಗಿ ತಿರುಗಾಡಿದ್ದರು. ಹಾಗೆಯೇ, ಒಳಗಿನವರು, ಹೊರಗಿನವರು ಎಂಬ ವಿಚಾರದಲ್ಲಿ ಬಹಳ ಸೂಕ್ಷ್ಮ ಇರುವ ಬಂಗಾಳೀ ಮನೋಭಾವ ಇಲ್ಲಿ ಕೆಲಸ ಮಾಡಿತು. ಬಂಗಾಳಿಗಳಿಗೆ ಮಮತಾ ತಮ್ಮವರೇ ಎನಿಸಿತು.ದೇಶದ ಅಭಿವೃದ್ಧಿಗೆ ಬಂಗಾಳ ದಾರಿದೀಪ ಆಗಿದೆ ಎಂದು ಹೇಳಿದರೂ ಪಶ್ಚಿಮ ಬಂಗಾಳ ಯಾಕೆ ಹಿಂದುಳಿದಿದೆ ಎಂಬುದನ್ನು ಅರಿತುಕೊಳ್ಳಲು ಬಂಗಾಳಕ್ಕೆ ಸಾಧ್ಯವಾಗಿಲ್ಲ. ಇದೇನೇ ಆದರೂ ರಾಜ್ಯದ ದೊಡ್ಡ ವರ್ಗದ ಜನರಿಗೆ ಬಿಜೆಪಿ ಈ ರಾಜ್ಯಕ್ಕೆ ಒಳ್ಳೆಯದು ಮಾಡಲು ಪ್ರಯತ್ನಿಸುತ್ತಿದೆ ಎಂದು ಅರಿತಿದೆ. ಪ್ರಗತಿಯ ಪೈಪೋಟಿಯಲ್ಲಿ ಹಿಂದುಳಿದಿರುವ ವರ್ಗಗಳು ಹಾಗೂ ಗ್ರಾಮೀಣ ಭಾಗದ ಬಡವರು ಮತ್ತು ದಲಿತರಲ್ಲಿ ಬಿಜೆಪಿ ಬಗ್ಗೆ ಭರವಸೆ ಮೂಡಿತ್ತು. ಇವರಿಗೆ ಈ ಭರವಸೆ ಇಲ್ಲದಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 25 ಪಟ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಮಮತಾ ಬ್ಯಾನರ್ಜಿ ಅವರಿಗೆ ಬಂಗಾಳದಲ್ಲಿ ಸವಾಲುಗಳ ಮೇಲೆ ಸವಾಲುಗಳಿವೆ. ನಿತ್ರಾಣಗೊಂಡಿರುವ ಎಡರಂಗ ಮತ್ತು ಕಾಂಗ್ರೆಸ್ ಪಕ್ಷದ ಬದಲು ಬಿಜೆಪಿ ಈಗ ಬಂಗಾಳದಲ್ಲಿ ವಿಪಕ್ಷವಾಗಿರುತ್ತದೆ. ಬಂಗಾಳದ ಬಿಜೆಪಿ ಘಟಕಕ್ಕೆ ಕೇಂದ್ರ ಸರ್ಕಾರ ಹಾಗೂ ಪಕ್ಷದ ರಚನಾತ್ಮಕ ಶಕ್ತಿ ಸಿಗುತ್ತದೆ. 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಬಹಳ ಬೇಗ ತಯಾರಿ ನಡೆಸುವುದರಿಂದ ಬಂಗಾಳದಲ್ಲೂ ತಂತ್ರಗಾರಿಕೆ ನಡೆಸುತ್ತದೆ. 2026 ಬಂಗಾಳ ಚುನಾವಣೆಗೆ ಬೇಕಾದ ಕಾರ್ಯತಂತ್ರವನ್ನು ಬಹಳ ಬೇಗ ರೂಪಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ, ಟಿಎಂಸಿಯ ಅನೇಕ ಮುಖಂಡರ ಮೇಲೆ ಭ್ರಷ್ಟಾಚಾರ ಪ್ರಕರಣಗಳು ಇದ್ದು, ಅವುಗಳ ತನಿಖೆಯಿಂದ ದೀದಿಗೆ ಇನ್ನಷ್ಟು ತೊಡಕುಗಳು ಸೃಷ್ಟಿಯಾಗುತ್ತದೆ.

ಕಾಂಗ್ರೆಸ್​ಗೆ ಏನಾಗಲಿದೆ ಎಂಬುದು ಈಗ ಬಹುದೊಡ್ಡ ಪ್ರಶ್ನೆ. ಸ್ವಾತಂತ್ರ್ಯ ಬಂದು ಕೆಲವಾರು ದಶಕಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷ ಈಗ ಮಮತಾ ಗೆದ್ದಿರುವುದಕ್ಕೆ ಸಂತೃಪ್ತವಾಗುವ ಮಟ್ಟಕ್ಕೆ ಬಂದಿದೆ. ಚುನಾವಣೆಯಲ್ಲಿ ಸೋಲಿಗೆ ಹೊಣೆಗಾರಿಕೆ ಮಾಡುವ ಸಂಪ್ರದಾಯ ಕಾಂಗ್ರೆಸ್​ನಲ್ಲಿ ಬೆಳೆದು ಬಂದೇ ಇಲ್ಲ. ಚುನಾವಣೆಯಲ್ಲಿ ಪಕ್ಷ ಸೋತರೆ ಎಲ್ಲರೂ ಅದರ ಹೊಣೆ ಹೊರುತ್ತಾರೆ. ಗೆದ್ದರೆ ಮಾತ್ರ ಗಾಂಧಿ ಕುಟುಂಬಕ್ಕೆ ಅದರ ಶ್ರೇಯಸ್ಸು ಹೋಗುತ್ತದೆ. ಅದೇ ಸಂಪ್ರದಾಯ ಈಗಲೂ ಮುಂದುವರಿಯುತ್ತದೆ. ಕೆಲ ದಿನಗಳ ಬಳಿಕ ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ತಯಾರಿ ಪ್ರಾರಂಭವಾಗುತ್ತದೆ.

ಕೊನೆಯದಾಗಿ ಒಂದು ವಿಚಾರ ಹೇಳಬೇಕು. ಇವತ್ತು ಟಿಎಂಸಿ ಪಡೆದಿರುವ ಗೆಲುವು 2024ರ ಲೋಕಸಭೆ ಚುನಾವಣೆಯಲ್ಲಿ ಮಮತಾ ವರ್ಸಸ್ ಮೋದಿ ಹಣಾಹಣಿಯಾಗಿ ಬಿಂಬಿತವಾಗುತ್ತದಾ ಎಂಬ ಪ್ರಶ್ನೆ ಮೂಡಬಹುದು. ಈಗ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳಿಗೆ ಮಮತಾ ದಾರಿದೀಪವಾಗಿ ಕಂಡಿದ್ದಾರೆ. ಮೋದಿ ವಿರುದ್ಧದ ಹೋರಾಟಕ್ಕೆ ನಾಯಕತ್ವ ವಹಿಸಲು ಈ ಹಿಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಮತ್ತು ರಾಹುಲ್ ಗಾಂಧಿ ಅವರು ಸರಿಯಾದವರೆಂದು ಭಾವಿಸಲಾಗಿತ್ತು. ಈಗ ಮಮತಾ ಬ್ಯಾನರ್ಜಿ ಅವರತ್ತ ಮುಖ ಮಾಡಿದ್ದಾರೆ. ಮೋದಿ ವಿರುದ್ಧ ಹೋರಾಡಲು ಕಾಂಗ್ರೆಸ್​ನಲ್ಲಿ ಚೈತನ್ಯ ಉಳಿದಿಲ್ಲವಾದ್ದರಿಂದ ಮಮತಾ ಬ್ಯಾನರ್ಜಿ ಅವರ ನಾಯತ್ವವನ್ನು ಕಾಂಗ್ರೆಸ್ ಒಪ್ಪಿಕೊಂಡರೂ ಒಪ್ಪಬಹುದು. ಮಮತಾ ಮಾತ್ರವಲ್ಲ ಯಾರೇ ಮುಂದಾಳತ್ವ ವಹಿಸಿದರೂ ಕಾಂಗ್ರೆಸ್ ಬೆಂಬಲಕ್ಕೆ ಸಿದ್ಧವಿರುತ್ತದೆ. ಬಿಜೆಪಿಗೂ ಇದೇ ಬೇಕಾಗಿದ್ದು. ಮುಸ್ಲಿಮರ ಓಲೈಕೆ ಮತ್ತು ಹಿಂಸಾಚಾರ ರಾಜಕಾರಣಕ್ಕೆ ಮಮತಾ ಹೆಸರುವಾಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯೊಂದಿಗೆ ಚುನಾವಣೆ ಎದುರಿಸುವುದು ಬಿಜೆಪಿಗೆ ಸುಲಭವಾಗಲಿದೆ. ಬಂಗಾಳದಲ್ಲಿ ಈಗ ಟಿಎಂಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಅಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿ ಉಳಿಯುವ ಸಾಧ್ಯತೆ ಇದೆ. ನಿಜವಾದ ಯುದ್ಧ ಇರುವುದು ಕೊರೋನಾ ವಿರುದ್ಧದ ಹೋರಾಟದಲ್ಲಿ. ಆದರೆ, ಮೋದಿಯನ್ನು ವಿರೋಧಿಸುವ ಪಕ್ಷಗಳು ಬಂಗಾಳದಲ್ಲಿ ‘ಜಾತ್ಯತೀತತೆ’ಯನ್ನ ಸಂಭ್ರಮಿಸುತ್ತಿವೆ.

- ಬ್ರಜೇಶ್ ಕುಮಾರ್ ಸಿಂಗ್
Published by: Vijayasarthy SN
First published: May 3, 2021, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories