ನವದೆಹಲಿ (ಜು. 28): 2024ರ ಲೋಕಸಭೆಗೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡುತ್ತಿವೆ. ಇದೇ ಹಿನ್ನಲೆ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಈ ಚರ್ಚೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ. ಇನ್ನು ಸಭೆ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, ಒಬ್ಬರಿಂದ ನಾವು ಏನು ಸಾಧ್ಯವಿಲ್ಲ. ನಾವು ಒಟ್ಟುಗೂಡಬೇಕು. ಕಾಂಗ್ರೆಸ್ ಅಧ್ಯಕ್ಷರ ಭೇಟಿ ಸಕಾರಾತ್ಮಕವಾಗಿದ್ದು, ಮುಂದಿನ ಭವಿಷ್ಯದಲ್ಲ ಸಕಾರಾತ್ಮಕವಾಗಿ ಏನಾದರೂ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐದು ದಿನಗಳ ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ಆನಂದ್ ಶರ್ಮಾ ಅವರನ್ನು ಭೇಟಿಯಾಗಿದ್ದರು. ಇಂದು ಸೋನಿಯಾ ಗಾಂಧಿ ಚಹಾ ಕೂಟದ ಆಹ್ವಾನದ ಮೇರೆ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದರು.
ಇದಕ್ಕೂ ಮುನ್ನ ಕೆಲ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತಮಗೆ ಪ್ರಧಾನಿಯಾಗುವ ಯಾವುದೇ ಅಭಿಲಾಷೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವ ಕೆಲಸಕ್ಕೆ ನಾನು ಸಹಾಯ ಮಾಡುತ್ತಿದ್ದೇನೆ. ನನಗೆ ನಾಯಕಿಯಾಗುವ ಯಾವುದೇ ಇಚ್ಛೆ ಇಲ್ಲ ಎಂದಿದ್ದಾರೆ.
ಇದನ್ನು ಓದಿ: ಪ್ರಧಾನಿ ನಿವಾಸಕ್ಕೆ ಮಮತಾ; ಕುತೂಹಲ ಮೂಡಿಸಿದ ಮೋದಿ- ಬ್ಯಾನರ್ಜಿ ಮಾತುಕತೆ
ನಾನು ರಾಜಕೀಯದ ಜೋತಿಷ್ಯಿಯಲ್ಲ. ಮುಂದಿನ ಘಟನೆಗಳು ಪರಿಸ್ಥಿತಿ ಆಧಾರದ ಮೇಲೆ ಇರುತ್ತದೆ. ಯಾರಾದರೂ ಮುನ್ನೆಡೆಸಿದರೆ ತಮಗೆ ತೊಂದರೆ ಇಲ್ಲ. ಈ ಕುರಿತು ಚರ್ಚಿಸಿದ ಬಳಿಕ ನಾವು ನಿರ್ಧರಿಸಬಹುದು. ಈ ಸಂಬಂಧ ಒತ್ತಡ ಹೇರಲು ಸಾಧ್ಯವಿಲ್ಲ ಎಂದರು.
ಸೋನಿಯಾ ಗಾಂಧಿ ಭೇಟಿ ಫಲಪ್ರದವಾಗಿದೆ. ನಾನು ಭೇಟಿಯಾಗುತ್ತಿರುವ ನಾಯಕರಲ್ಲಿ ಬಹುತೇಕರು ನನ್ನ ಹಳೆಯ ಸ್ನೇಹಿತರು, ನಾವು ಹೊಸ ಮತ್ತು ಹಳೆಯ ದಿನಗಳ ಕುರಿತು ಚರ್ಚಿಸಿದ್ದೇವೆ. ನಾಡಿದ್ದು, ಅರವಿಂದ್ ಕೇಜ್ರೀವಾಲ್ ಅವರನ್ನು ಭೇಟಿಯಾಗುತ್ತೇನೆ. ಜಾವೀದ್ ಅಖ್ತರ್ ಮತ್ತು ಶಬಾನಾ ಆಜ್ಮಿ ಕೂಡ ಸಮಯ ಕೇಳಿದ್ದಾರೆ, ಅವರನ್ನು ಕೂಡ ಭೇಟಿ ಮಾಡುತ್ತೇನೆ. ನಾಳೆ ಪಕ್ಷದ ಸಂಸದರನ್ನು ಭೇಟಿಯಾಗುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ