• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mamata Banerjee: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡ್ತೀವಿ, ಆದರೆ ಷರತ್ತು ವಿಧಿಸಿದ ಮಮತಾ ಬ್ಯಾನರ್ಜಿ!

Mamata Banerjee: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡ್ತೀವಿ, ಆದರೆ ಷರತ್ತು ವಿಧಿಸಿದ ಮಮತಾ ಬ್ಯಾನರ್ಜಿ!

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಬಿಜೆಪಿಯೇತರ ವಿಪಕ್ಷಗಳಲ್ಲಿ ಹೊಸದಾದ ಆತ್ಮವಿಶ್ವಾಸ ಪುಟಿದೆದ್ದಿದೆ. ಇದರ ಭಾಗವಾಗಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಮಟ್ಟ ಹಾಕಲು ಹೊಸದೊಂದು ಪ್ಲಾನ್ ಮುಂದಿಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

ಕೋಲ್ಕತ್ತಾ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ (Lokasabha Election) ದಿಕ್ಸೂಚಿ ಎಂದೇ ಬಿಂಬಿತವಾಗಿತ್ತು. ರಾಜ್ಯದ ಚುನಾವಣಾ ಫಲಿತಾಂಶ ಮುಂದಿನ ಚುನಾವಣೆಗಳಿಗೆ ಪರಿಣಾಮ ಬೀರಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಭರ್ಜರಿ ಜಯ ಸಾಧಿಸಿರುವುದರಿಂದ ಸಹಜವಾಗಿಯೇ ಬಿಜೆಪಿಯೇತರ ವಿಪಕ್ಷಗಳಲ್ಲಿ ದೊಡ್ಡದೊಂದು ಆತ್ಮವಿಶ್ವಾಸ ಪುಟಿದೆದ್ದಿದೆ. ಬಿಜೆಪಿ (BJP) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ರಾಷ್ಟ್ರಮಟ್ಟದ ವಿಪಕ್ಷಗಳ ನಾಯಕರು ಇದು ಬಿಜೆಪಿಯ ಅಂತ್ಯದ ಆರಂಭ ಅಂತಾನೂ ವಿಶ್ಲೇಷಿಸಿದ್ದರು. ವಿಶೇಷವಾಗಿ ಕರ್ನಾಟಕದ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಹಿನ್ನೆಲೆ ವಿಪಕ್ಷಗಳು ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಹೋರಾಡುವುದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.


ಇದಕ್ಕೆ ಪೂರಕ ಎಂಬಂತೆ ಯಾವಾಗಲೂ ಕಾಂಗ್ರೆಸ್‌ ಪಕ್ಷದ ಬಗ್ಗೆ ಕೆಂಡಕಾರುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಜೊತೆಯಾಗಿ ಹೋರಾಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು. ಆದರೆ ಈಗ ಬಿಜೆಪಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿಯೂ ಹೇಳಿದ್ದಾರೆ.


ಇದನ್ನೂ ಓದಿ: Narendra Modi: 396 ಲೋಕಸಭಾ ಕ್ಷೇತ್ರಗಳು, 51 ಸಮಾವೇಶ! 1 ತಿಂಗಳಲ್ಲಿ 1 ಲಕ್ಷ ಮನೆಗೆ ಮೋದಿ ಸಂದೇಶ ತಲುಪಿಸಲು ಬಿಜೆಪಿ ನಿರ್ಧಾರ


ಕರ್ನಾಟಕದ ತೀರ್ಪು ಬಿಜೆಪಿ ವಿರುದ್ಧದ ತೀರ್ಪು


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕಾರ್ಯಕಾರಿ ಸಮಿತಿ ರಚಿಸಿ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಎಲ್ಲೆಲ್ಲಿ ಪ್ರಬಲವಾಗಿವೆಯೋ ಅಲ್ಲಿ ಬಿಜೆಪಿ ಹೋರಾಡಲು ಸಾಧ್ಯವಿಲ್ಲ ಎಂದಿರುವ ಮಮತಾ ಬ್ಯಾನರ್ಜಿ, ಕರ್ನಾಟಕದ ತೀರ್ಪು ಬಿಜೆಪಿ ವಿರುದ್ಧದ ತೀರ್ಪು. ಬಿಜೆಪಿಯನ್ನು ಜನರು ವಿರೋಧಿಸುತ್ತಿದ್ದಾರೆ. ಬಿಜೆಪಿ ಇರುವ ಕಡೆ ದೌರ್ಜನ್ಯಗಳು ನಡೆಯುತ್ತಿವೆ. ಆರ್ಥಿಕತೆಯೂ ಹಾಳಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಮತ್ತು ಕುಸ್ತಿಪಟುಗಳನ್ನು ಸಹ ಉಳಿಸುತ್ತಿಲ್ಲ ಎಂದರು ಹೇಳಿದರು.


ದೀದಿ ಪ್ಲಾನ್ ಏನು?


ಬಿಜೆಪಿ ವಿರುದ್ಧ ಹೋರಾಡಲು ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿರುವ ಕಡೆಗಳಲ್ಲಿ ಅವರಿಗೆ ನಾವು ಬೆಂಬಲ ಕೊಡಬೇಕು ಎಂದು ಹೊಸ ಚಿಂತನೆಯನ್ನು ಮುಂದಿಟ್ಟಿರುವ ಮಮತಾ ಬ್ಯಾನರ್ಜಿ, ಯಾವ ಪಕ್ಷ ಯಾವ ಪ್ರದೇಶದಲ್ಲಿ ಬಲಿಷ್ಠವಾಗಿದೆಯೋ ಅವರಿಗೆ ನಾವೆಲ್ಲರೂ ಬೆಂಬಲಮ ಕೊಡೋಣ, ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ನಾವು (ತೃಣಮೂಲ) ಹೋರಾಡಬೇಕು, ದೆಹಲಿಯಲ್ಲಿ ಎಎಪಿ ಹೋರಾಡಬೇಕು. ಬಿಹಾರದಲ್ಲಿ ಅವರು ನಿತೀಶ್ ಕುಮಾರ್, ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್ ಸಮಬಲ ಇರೋದ್ರಿಂದ ಅವರು ಜತೆಯಾಗಿ ಮಾತನಾಡಿ ನಿರ್ಧಾರ ಮಾಡಬೇಕು, ಅದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ  ಎಂಕೆ ಸ್ಟಾಲಿನ್ ಅವರ ಡಿಎಂಕೆ ಮತ್ತು ಕಾಂಗ್ರೆಸ್, ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್, ಹೀಗೆ ಪಕ್ಷಗಳು ಪ್ರಾಬಲ್ಯ ಇರುವ ಕಡೆಗಳಲ್ಲಿ ಇತರ ಪಕ್ಷಗಳು ಬೆಂಬಲ ನೀಡಬೇಕು ಎಂದು ಹೇಳಿದರು.


ಆದಾಗ್ಯೂ, ಪ್ರಾದೇಶಿಕ ಪಕ್ಷಗಳು ತಮ್ಮ ಭದ್ರಕೋಟೆಗಳಲ್ಲಿ ಬಿಜೆಪಿಯನ್ನು ಎದುರಿಸಬೇಕು ಆದರೆ ಕಾಂಗ್ರೆಸ್ ತನ್ನದೇ ಆದ ಸ್ಥಾನಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು ಎಂದಿರುವ ಮಮತಾ ಬ್ಯಾನರ್ಜಿ, ಪ್ರಾದೇಶಿಕ ಪಕ್ಷಗಳು ಎಲ್ಲೆಲ್ಲಿ ಪ್ರಬಲವಾಗಿವೆಯೋ, ಅದು ಯುಪಿ, ಬಿಹಾರ ಅಥವಾ ಒಡಿಶಾ, ಬಂಗಾಳ, ಜಾರ್ಖಂಡ್, ಆಂಧ್ರಪ್ರದೇಶ ಅಥವಾ ತೆಲಂಗಾಣ ಹೀಗೆ ಹಲವಾರು ರಾಜ್ಯಗಳಿವೆ, ಅಲ್ಲಿ ಆ ಬಲಿಷ್ಠ ಪ್ರಾದೇಶಿಕ ಪಕ್ಷಕ್ಕೆ ಆದ್ಯತೆ ನೀಡಬೇಕು. ಮತ್ತು ಎಲ್ಲೆಲ್ಲಿ ಕಾಂಗ್ರೆಸ್ ಪ್ರಬಲವಾಗಿದೆಯೋ ಅಲ್ಲಿ ಅವರು ಹೋರಾಡಲಿ, ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.


ಇದನ್ನೂ ಓದಿ: Mallikarjun Kharge: ಪಿಎಫ್‌ಐ ಜೊತೆ ಭಜರಂಗದಳ ಹೋಲಿಕೆ, ಮಲ್ಲಿಕಾರ್ಜುನ ಖರ್ಗೆ ಕೋರ್ಟ್‌ನಿಂದ ಸಮನ್ಸ್!


ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಬೇಕು


ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಬ್ಯಾನರ್ಜಿ, ಆದರೆ ಅವರು ಬೇರೆ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಾರಾ ಎಂದು ಕಾದು ನೋಡಬೇಕು. ನಾನು ಕರ್ನಾಟಕದಲ್ಲಿ ನಿಮಗೆ ಬೆಂಬಲ ನೀಡುತ್ತೇನೆ. ಆದರೆ ನೀವು ನನ್ನ ವಿರುದ್ಧ ಪ್ರತಿದಿನ ಹೋರಾಡುತ್ತಿದ್ದೀರಿ. ಅದು ನೀತಿಯಾಗಬಾರದು, ಇದು ಎಲ್ಲರಿಗೂ ಅನ್ವಯವಾಗುತ್ತದೆ. ನಿಮಗೆ ನಾವು ಏನಾದರೂ ಒಳ್ಳೆಯದು ಬಯಸಿದರೆ, ನೀವು ಕೂಡ ಕೆಲವೊಂದು ಕಡೆಗಳಲ್ಲಿ ತ್ಯಾಗ ಮಾಡಬೇಕಾಗುತ್ತದೆ ಎಂದು 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದರು.




ಸದ್ಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂದಿಟ್ಟಿರುವ ಪ್ರಸ್ತಾಪವನ್ನು ಕಾಂಗ್ರೆಸ್‌ ಒಪ್ಪುತ್ತೋ ಬಿಡುತ್ತೋ ಅನ್ನೋದನ್ನು ಕಾದು ನೋಡಬೇಕಿದೆ.

First published: