ನವ ದೆಹಲಿ (ಮಾರ್ಚ್ 08); ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತೈಲ ಬೆಲೆ ಏರಿಕೆಯ ಪರಿಣಾಮದಿಂದಾಗಿ ದಿನನಿತ್ಯದ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಬೆಲೆ ಏರಿಕೆ ಎಂಬುದು ಪ್ರಸ್ತುತ ಇಡೀ ದೇಶದಾದ್ಯಂತ ಚರ್ಚಾಸ್ಪದ ವಿಚಾರವಾಗಿದೆ. ಆದರೆ, ಈ ಕುರಿತು ವಿಸ್ಕೃತ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಈವರೆಗೆ ಸಂಸತ್ನಲ್ಲಿ ಅವಕಾಶ ನೀಡಿಲ್ಲ. ಹೀಗಾಗಿ ಇಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಬೆಲೆ ಏರಿಕೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ, ಅವರಿಗೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಇಂದು ಕಾಂಗ್ರೆಸ್ ಸಂಸದರು ರಾಜ್ಯಸಭೆಯಲ್ಲಿ ಸತತವಾಗಿ ಏರುತ್ತಿರುವ ಇಂಧನ ಬೆಲೆಗಳ ಕುರಿತು ಚರ್ಚೆ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪರಿಣಾಮ ಪ್ರಶ್ನಾವಳಿ ಅವಧಿ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ರಾಜ್ಯಸಭೆಯನ್ನು ಮುಂದೂಡಿದ ಪ್ರಸಂಗವೂ ನಡೆಯಿತು.
ತೈಲ ಬೆಲೆ ಮತ್ತು ದಿನನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೊಂದೆಡೆ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಎಲ್‌ಪಿಜಿ ಬೆಲೆ ಸಾವಿರದ ಹತ್ತಿರ ಸುಳಿಯುತ್ತಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸದನದ ಶಾಸಕಾಂಗ ವ್ಯವಹಾರವನ್ನು ಸ್ಥಗಿತಗೊಳಿಸಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕುರಿತು ಚರ್ಚಿಸಲು ಸೆಕ್ಷನ್ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದರು.
ಅಲ್ಲದೆ, "ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ 100 ರೂ ಮತ್ತು 80 ರೂ ತಲುಪಿದೆ. ಎಲ್‌ಪಿಜಿ ಬೆಲೆ ಸಹ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಮಧ್ಯಮ ವರ್ಗದ ಜನರ ಬದುಕು ದುಸ್ಥರವಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ, ಮಲ್ಲಿಕಾರ್ಜುನ ಖರ್ಗೆ ನೀಡಿದ ನೋಟಿಸ್ ಅನ್ನು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಸ್ವೀಕರಿಸಲಿಲ್ಲ ಮತ್ತು ಸ್ವಾಧೀನ ಮಸೂದೆ ಕುರಿತು ಚರ್ಚೆಯ ಸಂದರ್ಭದಲ್ಲಿ ಈ ವಿಷಯವನ್ನು ಎತ್ತಬಹುದು, ಅಥವಾ ಬಜೆಟ್ ಅಧಿವೇಶನದಲ್ಲಿಈ ವಿಷಯದ ಬಗ್ಗೆ ಚರ್ಚಿಸಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿ ರಾಜ್ಯ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ.
ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಸಂಸದರು, "ಅಬಕಾರಿ ಸುಂಕ/ಸೆಸ್ ವಿಧಿಸುವ ಮೂಲಕ ಕೇಂದ್ರ ಸರ್ಕಾರ 21 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಇದರಿಂದಾಗಿ ರೈತರು ಸೇರಿದಂತೆ ಇಡೀ ರಾಷ್ಟ್ರವೇ ಸಂಕಷ್ಟಕ್ಕೆ ಸಿಲುಕಿದೆ" ಎಂದು ಆರೋಪಿಸಿದರು. ಅಲ್ಲದೆ, ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಸಂಸದರು ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು.
ಇದನ್ನೂ ಓದಿ: Karnataka Budget 2021 – ಯಾವುದಿವೆ ಪ್ರಮುಖ ಯೋಜನೆಗಳು? ಕರ್ನಾಟಕ ಬಜೆಟ್ ಮುಖ್ಯಾಂಶಗಳು
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಕಾಂಗ್ರೆಸ್ ಸಂಸದರನ್ನುದ್ದೇಶಿಸಿ, "ಮೊದಲ ದಿನವೇ ತೀವ್ರವಾದ ಕ್ರಮಕೈಗೊಳ್ಳಲು ಇಚ್ಛಿಸುವುದಿಲ್ಲ" ಎಂದು ಎಚ್ಚರಿಸಿದರು. ಆದರೂ ಕಾಂಗ್ರೆಸ್ ಸಂಸದರು ಅಧ್ಯಕ್ಷರ ಮಾತನ್ನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ