• Home
  • »
  • News
  • »
  • national-international
  • »
  • Mallikarjun Kharge: ಕಾಂಗ್ರೆಸ್​ ಸಾರಥ್ಯ ವಹಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಅಧಿಕಾರ ಹಸ್ತಾಂತರಿಸಿದ ಸೋನಿಯಾ ಗಾಂಧಿ!

Mallikarjun Kharge: ಕಾಂಗ್ರೆಸ್​ ಸಾರಥ್ಯ ವಹಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಅಧಿಕಾರ ಹಸ್ತಾಂತರಿಸಿದ ಸೋನಿಯಾ ಗಾಂಧಿ!

ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

Congress President Mallikarjun Kharge: ದೆಹಲಿಯಲ್ಲಿರುವ ಕಾಂಗ್ರೆಸ್​ ಪ್ರಧಾನ ಕಚೇರಿಯಲ್ಲಿ ಸೋನಿಯಾ ಗಾಂಧಿ, ಖರ್ಗೆಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಕಳೆದ ವಾರ ನಡೆದ ಚುನಾವಣೆಯಲ್ಲಿ ಖರ್ಗೆ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್​ರನ್ನು ಸೋಲಿಸಿ ಕಾಂಗ್ರೆಸ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ(ಅ.26): ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಂಗ್ರೆಸ್​ ಅಧ್ಯಕ್ಷರಾಗಿ (Congress President) ಅಧಿಕಾರ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿರುವ ಕಾಂಗ್ರೆಸ್​ ಪ್ರಧಾನ ಕಚೇರಿಯಲ್ಲಿ ಸೋನಿಯಾ ಗಾಂಧಿ (Sonia Gandhi), ಖರ್ಗೆಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಕಳೆದ ವಾರ ನಡೆದ ಚುನಾವಣೆಯಲ್ಲಿ ಖರ್ಗೆ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್​ರನ್ನು (Shashi Tharoor) ಸೋಲಿಸಿ ಕಾಂಗ್ರೆಸ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇಂದು ಪ್ರಮಾಣವಚನ ಸ್ವೀಕರಿಸಿ ಅವರು ಈ ಹುದ್ದೆಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. ಇನ್ನು ಅಧಿಕಾರ ಸ್ವೀಕರಿಸುವ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್'ಘಾಟ್'ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿದ್ದಾರೆ.



ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ


ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ 1939, 1950, 1977, 1997 ಮತ್ತು 2000 ರಲ್ಲಿ ಚುನಾವಣೆಗಳು ನಡೆದಿತ್ತು. ಈ ಚುನಾವಣೆಯಿಂದ 24 ವರ್ಷಗಳ ನಂತರ ಗಾಂಧಿ ಕುಟುಂಬದ ಹೊರಗಿನ ನಾಯಕರೊಬ್ಬರು ದೇಶದ ಅತ್ಯಂತ ಹಳೆಯ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಮೊದಲು ಸೀತಾರಾಮ್ ಕೇಸರಿ ಅವರು ಗಾಂಧಿಯೇತರ ಅಧ್ಯಕ್ಷರಾಗಿದ್ದರು.


ಇದನ್ನೂ ಓದಿ: Congress President Polls Result: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನೂತನ ಅಧ್ಯಕ್ಷ, 7,897 ಮತಗಳೊಂದಿಗೆ ಗೆಲುವು!


ಕನ್ನಡಿಗ ಖರ್ಗೆ


ಖರ್ಗೆಯವರು ದಕ್ಷಿಣ ಭಾರತದ ಕರ್ನಾಟಕದ ಕಲಬುರಗಿಯವರು. ಕನ್ನಡಿಗನಾಗಿದ್ದರೂ ಅವರು ಚೆನ್ನಾಗಿ ಹಿಂದಿ ಮಾತನಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಸತತ ಒಂಬತ್ತು ಬಾರಿ ಶಾಸಕರಾಗಿದ್ದಾರೆ. ಅಷ್ಟೇ ಅಲ್ಲ, 2014ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ದಿಗ್ಗಜರು ಸೋತಾಗಲೂ ಖರ್ಗೆ ವಿಜಯ ಪತಾಕೆ ಹಾರಿಸಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದರು.


ವಕೀಲರಾಗಿದ್ದ ಮಲ್ಲಿಕಾರ್ಜುನ ಖರ್ಗೆ


21 ಜುಲೈ 1942 ರಂದು ಜನಿಸಿದ ಮಲ್ಲಿಕಾರ್ಜುನ ಖರ್ಗೆ ರಾಜಕೀಯಕ್ಕೆ ಸೇರುವ ಮೊದಲು ವಕೀಲ ವೃತ್ತಿ ಮಾಡಿಕೊಂಡಿದ್ದರು. ಅವರು ಕರ್ನಾಟಕದ ಬಡ ಕುಟುಂಬದಲ್ಲಿ ಜನಿಸಿದರು ಮತ್ತು ಪದವಿ ಶಿಕ್ಷಣ ಪೂರೈಸಿದರು. ಬಳಿಕ ಕಾನೂನಿನ ಪದವಿ ಗಳಿಸಿದರು. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಎರಡನೇ ವ್ಯಕ್ತಿ. ಈ ಹಿಂದೆ ಕರ್ನಾಟಕದ ಎಸ್. ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.


ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಖರ್ಗೆ


ಸತತ 9 ಬಾರಿ ಶಾಸಕರಾಗಿದ್ದ 80 ವರ್ಷದ ಮಲ್ಲಿಕಾರ್ಜುನ ಖರ್ಗೆ 50 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಗಾಂಧಿ-ನೆಹರೂ ಅವರ ನಿಷ್ಠಾವಂತ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಹಾದಲಿತ ಸಮುದಾಯಕ್ಕೆ ಸೇರಿದವರು. ಅವರ ರಾಜಕೀಯದ ವನದ ಬಗ್ಗೆ ಹೇಳುವುದಾದರೆ, ಅವರು ಮೊದಲು ಕೇವಲ ವಕೀಲ ವೃತ್ತಿ ಮಾಡಿಕೊಂಡಿದ್ದರು. ಕಾಂಗ್ರೆಸ್ ಸೇರುವ ಮುನ್ನ ಖರ್ಗೆಯವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಪ್ರೇರಿತರಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ)ಗೆ ಸೇರಿದ್ದರು.


ವಿದ್ಯಾರ್ಥಿ ಸಂಘ ಪ್ರಾರಂಭ


ಆದರೆ, ಖರ್ಗೆಯವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದು ವಿದ್ಯಾರ್ಥಿ ಸಂಘದ ನಾಯಕರಾಗಿ. ಅಲ್ಲಿ ಕಲಬುರಗಿ (ಗುಲ್ಬರ್ಗ)ಯ ಸರ್ಕಾರಿ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 1969 ರಲ್ಲಿ, ಅವರು MSK ಮಿಲ್ಸ್ ಎಂಪ್ಲಾಯಿಸ್ ಯೂನಿಯನ್‌ನ ಕಾನೂನು ಸಲಹೆಗಾರರಾದರು. ಅವರು ಯುನೈಟೆಡ್ ಮಜ್ದೂರ್ ಸಂಘದ ಎಂಬ ಪ್ರಭಾವಿ ಕಾರ್ಮಿಕ ಸಂಘದ ನಾಯಕರಾಗಿದ್ದರು. ಈ ಮೂಲಕ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವ ಹಲವಾರು ಚಳುವಳಿಗಳನ್ನು ಮುನ್ನಡೆಸಿದರು. 1969 ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಮತ್ತು ಅಂದಿನ ಗುಲ್ಬರ್ಗಾ ಇಂದಿನ ಕಲಬುರಗಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.


ಖರ್ಗೆ ಸತತ ಒಂಬತ್ತು ಬಾರಿ ಶಾಸಕರಾದರು


ಖರ್ಗೆ ಅವರು 1972 ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೊದಲು ಗುರುಮಠಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. 1976 ರಲ್ಲಿ, ಅವರು ಪ್ರಾಥಮಿಕ ಶಿಕ್ಷಣ ರಾಜ್ಯ ಸಚಿವರಾಗಿ ನೇಮಕಗೊಂಡರು. 1978 ರಲ್ಲಿ, ಅವರು ಗುರುಮಠಕಲ್ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾಗಿ ನೇಮಕಗೊಂಡರು. 1980ರಲ್ಲಿ ಗುಂಡೂರಾವ್ ಸಂಪುಟದಲ್ಲಿ ಕಂದಾಯ ಸಚಿವರಾದರು. 1983 ರಲ್ಲಿ ಗುರುಮಠಕಲ್​ನಿಂದ ಕರ್ನಾಟಕ ವಿಧಾನಸಭೆಗೆ ಮೂರನೇ ಬಾರಿಗೆ ಆಯ್ಕೆಯಾದರು. 1985 ರಲ್ಲಿ, ಅವರು ಗುರುಮಠಕಲ್​ನಿಂದ ನಾಲ್ಕನೇ ಬಾರಿಗೆ ಗೆದ್ದು, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ನೇಮಕಗೊಂಡಿದ್ದರು.




ಹಿಂತಿರುಗಿ ನೋಡಲಿಲ್ಲ ಖರ್ಗೆ


1989ರಲ್ಲಿ ಗುರುಮಠಕಲ್​ನಿಂದ ಐದನೇ ಬಾರಿಗೆ ಗೆಲುವು ಸಾಧಿಸಿದರು. ಅದೇ ರೀತಿ 2004ರಲ್ಲಿ ಖರ್ಗೆ ಸತತ ಎಂಟನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು. 2005 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 2008ರಲ್ಲಿ ಚಿತಾಪುರದಿಂದ ಸತತ ಒಂಬತ್ತನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 2008ರಲ್ಲಿ ಖರ್ಗೆ ಎರಡನೇ ಬಾರಿಗೆ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡರು. 2009 ರಲ್ಲಿ, ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಸತತ ಹತ್ತನೇ ಚುನಾವಣೆಯಲ್ಲಿ ಗೆದ್ದರು.


ಮೋದಿ ಅಲೆಯಲ್ಲೂ ಸೋಲಲಿಲ್ಲ ಖರ್ಗೆ


ಮೋದಿ ಅಲೆಯ ನಡುವೆಯೂ ಖರ್ಗೆ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರು ತಮ್ಮ ಎದುರಾಳಿಯಾಗಿದ್ದ ಬಿಜೆಪಿ ಪ್ರತಿಸ್ಪರ್ಧಿಯನ್ನು 13,404 ಮತಗಳಿಂದ ಸೋಲಿಸಿದರು. ಜೂನ್‌ನಲ್ಲಿ ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನಾಗಿ ನೇಮಿಸಲಾಯಿತು. ಆದರೆ, 2019 ರಲ್ಲಿ ಖರ್ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅಂದು ಅವರುಸುಮಾರು 95 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಿ ಮಾಧವ್ ಅವರಿಂದ ಸೋತರು.


ಕರ್ನಾಟಕದಿಂದ ರಾಜ್ಯಸಭೆಗೆ


ಇದರ ನಂತರ, 12 ಜೂನ್ 2020 ರಂದು, ಖರ್ಗೆ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದರು. 2021ರ ಫೆಬ್ರವರಿಯಲ್ಲಿ ಖರ್ಗೆ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಯಿತು. ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಕಾರ್ಮಿಕ ಮತ್ತು ಉದ್ಯೋಗ, ರೈಲ್ವೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಗಳನ್ನು ಹೊಂದಿದ್ದರು.


ಇದನ್ನೂ ಓದಿ: Mallikarjun Kharge: ಸ್ವಂತ ಕಾರಿಲ್ಲ, ಆಯುಧವಿಲ್ಲ: ಕಾಂಗ್ರೆಸ್​ ನೂತನ ಸಾರಥಿ ಖರ್ಗೆ ಹೆಸರಲ್ಲಿದೆ ಇಷ್ಟು ಆಸ್ತಿ


ಯಾರ ಪ್ರಭಾವವಿಲ್ಲದೇ ತಮ್ಮದೇ ಪರಿಶ್ರಮದಿಂದ ರಾಜಕೀಯ ಕ್ಷೇತ್ರದಲ್ಲಿ ಬೆಳೆದು ನಿಂತ ಈ ಹಿರಿಯ ರಾಜಕಾರಣಿ ಕಳೆದ 12 ಚುನಾವಣೆಗಳಲ್ಲಿ 11 ಬಾರಿ ಗೆದ್ದಿದ್ದಾರೆ. ಅವರು ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಳೆದುಕೊಂಡಿದ್ದಾರೆ. ಅವರಿಗೆ 6 ಭಾಷೆಗಳ ಜ್ಞಾನವಿದೆ. ಖರ್ಗೆಯವರು 13 ಮೇ 1968 ರಂದು ರಾಧಾಬಾಯಿ ಅವರನ್ನು ವಿವಾಹವಾದರು ಮತ್ತು ಅವರಿಗೆ ಇಬ್ಬರು ಪುತ್ರಿಯರು ಮತ್ತು ಮೂವರು ಗಂಡು ಮಕ್ಕಳಿದ್ದಾರೆ.

Published by:Precilla Olivia Dias
First published: