ಮಲ್ಲಿಕಾ ಶ್ರೀನಿವಾಸನ್ - ಪಿಇಎಸ್​ಬಿಗೆ ಇದೇ ಮೊದಲ ಬಾರಿಗೆ ಖಾಸಗಿ ವಲಯದ ವ್ಯಕ್ತಿ ಅಧ್ಯಕ್ಷರಾಗಿ ಆಯ್ಕೆ

ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಉನ್ನತ ಹಂತದ ಹುದ್ದೆಗಳ ನೇಮಕಾತಿ ಜವಾವ್ದಾರಿ ಹೊಂದಿರುವ ಪಿಇಎಸ್​ಬಿಗೆ ಅಧ್ಯಕ್ಷೆಯಾಗಿ ಮಲ್ಲಿಕಾ ಶ್ರೀನಿವಾಸನ್ ಅವರನ್ನ ಆರಿಸಲಾಗಿದೆ. ಖಾಸಗಿ ವಲಯದ ವ್ಯಕ್ತಿಯೊಬ್ಬರು ಪಿಇಎಸ್​ಬಿ ಚುಕ್ಕಾಣಿ ಹಿಡಿಯುತ್ತಿರುವುದು ಇದೇ ಮೊದಲು.

ಮಲ್ಲಿಕಾ ಶ್ರೀನಿವಾಸನ್

ಮಲ್ಲಿಕಾ ಶ್ರೀನಿವಾಸನ್

  • News18
  • Last Updated :
  • Share this:
ನವದೆಹಲಿ(ಏ. 02): ಸಾರ್ವಜನಿಕ ವಲಯ ಉದ್ದಿಮೆಗಳ ಆಯ್ಕೆ ಮಂಡಳಿಗೆ (Public Enterprises Selection Board) ಅಧ್ಯಕ್ಷೆಯಾಗಿ ಮಲ್ಲಿಕಾ ಶ್ರೀನಿವಾಸನ್ (Mallika Srinivasan) ಅವರ ನೇಮಕಾತಿಗೆ ಅನುಮೋದನೆ ಸಿಕ್ಕಿದೆ. ಮಲ್ಲಿಕಾ ಶ್ರೀನಿವಾಸನ್ ಅವರು ವಿಶ್ವದ ಮೂರನೇ ಅತಿದೊಡ್ಡ ಟ್ರಾಕ್ಟರ್ ತಯಾರಕರಾದ TAFE (Tractor and Farm Equipment Ltd) ಸಂಸ್ಥೆಯ ಅಧ್ಯಕ್ಷೆ ಮತ್ತು ಎಂಡಿಯಾಗಿದ್ಧಾರೆ. ಇದೀಗ ಅವರನ್ನು ಮೂರು ವರ್ಷಗಳ ಅವಧಿಗೆ ಪಿಇಎಸ್​ಬಿ (PESB) ಮುಖ್ಯಸ್ಥರಾಗಿರಲು ಕೇಂದ್ರದ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಖಾಸಗಿ ವಲಯದ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ಪಿಎಸ್​ಇಬಿಯ ಅಧ್ಯಕ್ಷರಾದಂತಾಗಿದೆ. ಕೇಂದ್ರೀಯ ಸಾರ್ವಜನಿಕ ವಲಯ ಉದ್ದಿಮೆಗಳಲ್ಲಿನ (CPSE) ಉನ್ನತ ಹಂತದ ಮ್ಯಾನೇಜ್ಮೆಂಟ್ ಹುದ್ದೆಗಳ ನೇಮಕಾತಿಯ ಹೊಣೆಗಾರಿಗೆ ಹೊಂದಿರುವ ಪಿಇಎಸ್​ಬಿಯ ಚುಕ್ಕಾಣಿಯನ್ನು ಖಾಸಗಿ ತಜ್ಞರೊಬ್ಬರಿಗೆ ವಹಿಸಿರುವುದು ಗಮನಾರ್ಹ ಹೆಜ್ಜೆ ಎನಿಸಿದೆ. ಮಲ್ಲಿಕಾ ಅವರು ಮುಂದಿನ ಮೂರು ವರ್ಷ ತಮ್ಮ ಹೊಸ ಜವಾಬ್ಧಾರಿಯನ್ನು ನಿಭಾಯಿಸುವ ಅವಕಾಶ ಹೊಂದಿದ್ಧಾರೆ.

ಬಹಳ ಮುಖ್ಯ ಹೊಣೆಗಾರಿಕೆ ಹೊಂದಿರುವ ಪಿಇಎಸ್​ಬಿಯು ಅಧ್ಯಕ್ಷರು ಹಾಗೂ ಸದಸ್ಯರಿಲ್ಲದೇ ಕಾರ್ಯನಿರ್ವಹಿಸುತ್ತಿರುವುದನ್ನು ಸಂಸದೀಯ ಸ್ಥಾಯಿ ಸಮಿತಿಯೊಂದು ಪತ್ತೆ ಹಚ್ಚಿ ಅಚ್ಚರಿ ಪಟ್ಟಿತ್ತು. ಹಾಗೆಯೇ, ಸಾರ್ವಜನಿಕ ವಲಯ ಸಂಸ್ಥೆಗಳ ಟಾಪ್ ಮ್ಯಾನೇಜ್ಮೆಂಟ್ ಪೋಸ್ಟ್​ಗಳಿಗೆ ಶಿಫಾರಸು ಆದ ಮಹಿಳೆಯರ ಪ್ರಮಾಣ ತೀರಾ ನಗಣ್ಯವಾಗಿರುವುದಕ್ಕೂ ಸ್ಥಾಯಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಮರುಸ್ಥಾಪನೆಗೊಳ್ಳುವ ಹೊತ್ತಲ್ಲೇ ಉಲ್ಟಾ ಹೊಡೆದ ಪಾಕಿಸ್ತಾನ

“ಸಾರ್ವಜನಿಕ ವಲಯ ಸಂಸ್ಥೆಗಳ ಉನ್ನತ ಮಟ್ಟದ ಹುದ್ದೆಗಳಲ್ಲಿ ಪುರುಷರು ಮತ್ತು ಮಹಿಳೆಯರ ಸಂಖ್ಯೆಯಲ್ಲಿರುವ ಅಂತರಕ್ಕೆ ಕಾರಣ ಏನು? ಸಾಮರ್ಥ್ಯ ಇರುವ ಮಹಿಳೆಯರ ಕೊರತೆಯಾ ಅಥವಾ ಅಘೋಷಿತ ತಾರತಮ್ಯ ನೀತಿ (Glass Ceiling Effect) ಕಾರಣವಾ ಎಂಬುದನ್ನು ಪಿಎಸ್​ಇಬಿ ಆಳವಾಗಿ ಅಧ್ಯಯನ ಮಾಡಿ ಪರಿಶೀಲನೆ ನಡೆಸಬೇಕೆಂದು ಸಮಿತಿ ಶಿಫಾರಸು ಮಾಡುತ್ತದೆ. ಮಹಿಳೆಯರಿಗೆ ಸಮಾನ ಅವಕಾಶ ಇರುವ ಕೆಲಸದ ವಾತಾವರಣ ನಿರ್ಮಿಸುವ ಅಗತ್ಯತೆ ಇರುವುದನ್ನು ನಮ್ಮ ಸಮಿತಿ ಮನಗಂಡಿದೆ. ಈ ನಿಟ್ಟಿನಲ್ಲಿ ಪಿಇಎಸ್​ಬಿ ಹೆಜ್ಜೆ ಇಡಬೇಕು” ಎಂದು ಸಿಬ್ಬಂದಿ, ಸಾರ್ವಜನಿಕ ದೂರು, ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿಯು ಕಳೆದ ತಿಂಗಳು ಸಂಸತ್​ನಲ್ಲಿ ಮಂಡನೆ ಮಾಡಿದ್ದ ತನ್ನ 106ನೇ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಇದೀಗ ಪಿಇಎಸ್​ಬಿಗೆ ಮಹಿಳೆಯೇ ಮುಖ್ಯಸ್ಥೆಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹೊಸ ಬದಲಾವಣೆಯ ದಾರಿ ಸುಗಮವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇವರಷ್ಟೇ ಅಲ್ಲ, ಸಾರ್ವಜನಿಕ ಉದ್ದಿಮೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಶೈಲೇಶ್ ಅವರನ್ನು ಪಿಇಎಸ್​ಬಿಯ ಸದಸ್ಯರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಈಗಾಗಲೇ ಪಿಎಸ್​ಇಬಿಗೆ ಎಂಕೆ ಗುಪ್ತಾ ಮತ್ತು ನಿವೃತ್ತ ನೌಕಾಪಡೆ ಅಧಿಕಾರಿ ಶೇಖರ್ ಮಿತಲ್ ಅವರು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ. ಈಗ ಶೈಲೇಶ್ ಸೇರ್ಪಡೆಯೊಂದಿಗೆ ಪಿಇಎಸ್​ಬಿ ಸದಸ್ಯರ ಪಟ್ಟಿಯಲ್ಲಿ ಮೂವರಿದ್ದಂತಾಗಿದೆ.
Published by:Vijayasarthy SN
First published: