ಮಾಲಿ(ಆ. 19): ಪಶ್ಚಿಮ ಆಫ್ರಿಕಾದಲ್ಲಿರುವ ಮಾಲಿ ದೇಶ ಅಧ್ಯಕ್ಷ ಇಬ್ರಾಹಿಂ ಬೋಬಾಕರ್ ಕೇಟಾ ರಾಜೀನಾಮೆ ನೀಡಿದ್ದಾರೆ. ತಿಂಗಳುಗಳಿಂದ ಇಲ್ಲಿ ನಡೆಯುತ್ತಿರುವ ಜಟಾಪಟಿಗೆ ಇವತ್ತು ಮತ್ತೊಂದು ತಿರುವು ಬಂದಿದೆ. ಬಂಡುಕೋರ ಸೈನಿಕರ ಪಡೆ ನಿನ್ನೆ ದಿಢೀರ್ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ಕೇಟಾ ಮತ್ತು ಪ್ರಧಾನಿ ಬೌಬೌ ಸಿಸ್ಸೆ ಅವರನ್ನು ಬಂಧಿಸಿ ಕಾಟಿ ಪಟ್ಟಣದ ಮಿಲಿಟರಿ ನೆಲೆಯಲ್ಲಿ ಇರಿಸಿದ್ದರು. ಇದಾದ ಕೆಲ ಗಂಟೆಗಳ ಬಳಿಕ ಅಧ್ಯಕ್ಷ ಕೇಟಾ ಅವರು ರಾಜೀನಾಮೆ ನೀಡಿದ್ದಾರೆ.
ಸರ್ಕಾರದ ದೂರದರ್ಶನ ವಾಹಿನಿಯಲ್ಲಿ ಮಾತನಾಡಿದ ಕೇಟಾ, ತನ್ನ ಸರ್ಕಾರ ಮತ್ತು ಸಂಸತ್ತನ್ನು ವಿಸರ್ಜಿಸಿರುವುದಾಗಿಯೂ, ಹಾಗೂ ಈಗಿಂದೀಗಲೇ ರಾಜೀನಾಮೆ ನೀಡುತ್ತಿರುವುದಾಗಿಯೂ ಘೋಷಣೆ ಮಾಡಿದ್ದಾರೆ.
“ನಮ್ಮ ಸೇನೆಯ ಕೆಲ ಶಕ್ತಿಗಳಿಗೆ ತೃಪ್ತಿ ಆಗುವುದಾದರೆ ನಾನು ರಾಜೀನಾಮೆ ನೀಡದೇ ಏನು ಮಾಡಲಿ? ನನಗೆ ಮತ್ಯಾವುದೇ ರಕ್ತಪಾತ ಆಗುವುದು ಬೇಕಾಗಿಲ್ಲ” ಎಂದೂ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ನಿನ್ನೆ ರಾಷ್ಟ್ರಾಧ್ಯಕ್ಷ ಮತ್ತು ಪ್ರಧಾನಿ ಬಂಧನವಾಗುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ್ದರು.
ಇದೇ ವೇಳೆ, ಜಾಗತಿಕವಾಗಿ ಈ ಬೆಳವಣಿಗೆಯನ್ನು ಗಂಭೀರವಾಗಿ ನೋಡಲಾಗುತ್ತಿದೆ. ದಂಗೆ ಮೂಲಕ ಅಧಿಕಾರ ಹಸ್ತಾಂತರ ಆಗುತ್ತಿರುವುದಕ್ಕೆ ಫ್ರಾನ್ಸ್ ಮೊದಲಾದ ನೆರೆ ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿಶ್ವಸಂಸ್ಥೆ ಕೂಡ ಮಾಲಿ ಅಧ್ಯಕ್ಷ ಮತ್ತು ಪ್ರಧಾನಿಗಳನ್ನ ತತ್ಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ