ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಮಂದಿ ಕೋವಿಡ್ಗೆ (Covid19) ತುತ್ತಾಗಿದ್ದರು. ಕೆಲವರು ಮಾಹಾಮಾರಿ ಕೋವಿಡ್ನಿಂದ ಸಾವನ್ನಪ್ಪಿದ್ದರೆ, ಹಲವಾರು ಮಂದಿ ಅದರ ಪರಿಣಾಮಗಳನ್ನು, (Effect) ಲಕ್ಷಣಗಳನ್ನು ಇನ್ನೂ ಸಹ ಎದುರಿಸುತ್ತಲೇ ಇದ್ದಾರೆ. ಈ ಲಾಂಗ್ ಕೋವಿಡ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ಕೂಡ ಕಳವಳ ವ್ಯಕ್ತಪಡಿಸಿದೆ.
ಲಾಂಗ್ ಕೋವಿಡ್ ಎಂದರೇನು?
ಕೋವಿಡ್ನಿಂದ ಗುಣಮುಖರಾದ ನಂತರವೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದಕ್ಕೆ ಲಾಂಗ್ ಕೋವಿಡ್ ಎನ್ನಲಾಗುತ್ತದೆ. ಕೋವಿಡ್ನಿಂದ ಚೇತರಿಸಿಕೊಂಡ ಬಳಿಕವೂ ಅದರ ಪರಿಣಾಮ ಎದುರಿಸುತ್ತಿರುವ ಜನರಿಗೆ ವೈದ್ಯಕೀಯ ಸಹಾಯ ಪಡೆಯುವಂತೆ ಈಗಾಗ್ಲೇ ತಜ್ಞರು ಎಚ್ಚರಿಸಿದ್ದಾರೆ.
ಕಳಂಕಕ್ಕೆ ಗುರಿಯಾದ ಲಾಂಗ್ ಕೋವಿಡ್ ಜನರು
ದೀರ್ಘ ಕೋವಿಡ್ನಿಂದ ಬಳಲುತ್ತಿರುವವರು ಕೇವಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದಲ್ಲದೇ ಕಳಂಕ, ತಾರತಮ್ಯ, ನಿಂದನೆಗೂ ಸಹ ಒಳಗಾಗುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. LOS ONE ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಲಾಂಗ್ ಕೋವಿಡ್ನೊಂದಿಗೆ ವಾಸಿಸುವ ಹೆಚ್ಚಿನ ವ್ಯಕ್ತಿಗಳು ತಮ್ಮ ಸ್ಥಿತಿಗೆ ಸಂಬಂಧಿಸಿದ ಕೆಲವು ರೀತಿಯ ಕಳಂಕವನ್ನು ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಆಫೀಸ್ ಫಾರ್ ನ್ಯಾಶನಲ್ ಸ್ಟ್ಯಾಟಿಸ್ಟಿಕ್ಸ್ ಡೇಟಾದ ಪ್ರಕಾರ ಯುಕೆಯಲ್ಲಿ ಅಂದಾಜು 2.3 ಮಿಲಿಯನ್ ಜನರು ಲಾಂಗ್ ಕೋವಿಡ್ನಿಂದ ಬಳಲುತ್ತಿದ್ದಾರೆ ಮತ್ತು ಸೀಮಿತ ಚಿಕಿತ್ಸಾ ಆಯ್ಕೆಗಳಿಂದಾಗಿ ಕೋವಿಡ್ ಇಳಿಮುಖ ಕಾಣದೆ ಏರುತ್ತಲೇ ಇದೆ.
ಸಮೀಕ್ಷೆಯಲ್ಲಿ ಬಯಲಾಯ್ತು ಅಘಾತಕಾರಿ ವಿಚಾರ
ಸೌತಾಂಪ್ಟನ್ ವಿಶ್ವವಿದ್ಯಾನಿಲಯ ಮತ್ತು ಬ್ರೈಟನ್ ಮತ್ತು ಸಸೆಕ್ಸ್ ವೈದ್ಯಕೀಯ ಶಾಲೆಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 1100 ಕ್ಕೂ ಹೆಚ್ಚು ಜನರು ಭಾಗವಹಿಸಿದರು ಮತ್ತು ಈ ರೀತಿಯ ಕಳಂಕದ ಅವರ ಅನುಭವಗಳ ಬಗ್ಗೆ ಕೇಳಲಾಯಿತು.
ವ್ಯಕ್ತಿಗಳು ತಮ್ಮ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ತಾರತಮ್ಯ, ಕಳಂಕ, ನಿಂದನೆ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಲಾಂಗ್ ಕೋವಿಡ್ನಿಂದ ಬಳಲುತ್ತಿರುವವರನ್ನು ಕಳಪೆ ಎಂದು ಸಹ ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ತೊಂಬತ್ತೈದು ಪ್ರತಿಶತ ಜನರು ಕನಿಷ್ಠ ಒಂದು ರೀತಿಯ ಕಳಂಕವನ್ನು ಯಾವಗಲಾದರೂ ಒಮ್ಮೆ ಅನುಭವಿಸಿರುವುದಾಗಿ ಹೇಳಿಕೊಂಡರೆ, 76% ಜನರು ಯಾವಾಗಲೂ ನಿಂದನೆ, ಕಳಂಕವನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಅಧ್ಯಯನವು ಲಾಂಗ್ ಕೋವಿಡ್ನಿಂದ ಎದುರಿಸುತ್ತಿರುವ ಈ ಕಳಂಕವನ್ನು ಪ್ರಾಯೋಗಿಕವಾಗಿ ಅಳೆಯಲು ಮತ್ತು ಹರಡುವಿಕೆಯನ್ನು ಅಂದಾಜು ಮಾಡುವಲ್ಲಿ ಮೊದಲ ಪ್ರಯತ್ನವಾಗಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರು ಏನ್ ಹೇಳಿದ್ದಾರೆ?
ಅಧ್ಯಯನದಲ್ಲಿ, ಸುಮಾರು ಮೂರನೇ ಎರಡರಷ್ಟು (63%) ಜನರು ಕಳಂಕದ ಅನುಭವಗಳನ್ನು ವರದಿ ಮಾಡಿದ್ದಾರೆ. ಉದಾಹರಣೆಗೆ ಅಂಥವರನ್ನು ಗೌರವ ಕೊಡದೇ ನಡೆಸಿಕೊಳ್ಳುವುದು ಅಥವಾ ಅವರ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ಅವರನ್ನು ದೂರ ಇಟ್ಟು ಕಡೆಗಣಿಸಲಾಗುವುದು ಎಂದಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 86 ಪ್ರತಿಶತದಷ್ಟು ಜನರು ಲಾಂಗ್ ಕೋವಿಡ್ ಹೊಂದಿದ್ದಕ್ಕೆ ಸಂಬಂಧಿಸಿದಂತೆ ಹೆಚ್ಚು ಅವಮಾನವನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ.
ಅಧ್ಯಯನದಲ್ಲಿ, 61% ಜನರು ತಮ್ಮ ಸ್ಥಿತಿಯ ಬಗ್ಗೆ ಬಹಳ ಎಚ್ಚರಿಕೆಯಿಂದ ಯಾರಿಗೆ ಹೇಳಿಕೊಂಡರೆ ಉತ್ತಮ ಎಂದು ಯೋಚಿಸಿ ಹೇಳಿದ್ದಾರೆ. ಮತ್ತು ಸುಮಾರು ಮೂರನೇ ಒಂದು (34%) ಪ್ರತಿಕ್ರಿಯಿಸಿದವರು ಅದರ ಬಗ್ಗೆ ಜನರಿಗೆ ಹೇಳಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ, ಲಾಂಗ್ ಕೋವಿಡ್ನ ಲಕ್ಷಣಗಳಿಂದ ಕಳಂಕ ಹೊತ್ತು ಕೊಡಿರುವವರ ಸಂಖ್ಯೆಯೇ ಹೆಚ್ಚಾಗಿದೆ ಎನ್ನಬಹುದು.
ಅಧ್ಯಯನ ಲೇಖಕರು ಹೇಳಿದ್ದೇನು?
ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯದ ಪ್ರಾಧ್ಯಾಪಕ ಮತ್ತು ಅಧ್ಯಯನದ ಸಹ-ಮುಖ್ಯ ಲೇಖಕ ನಿಸ್ರೀನ್ ಅಲ್ವಾನ್ "ಲಾಂಗ್ ಕೋವಿಡ್ನ ಕ್ಲಿನಿಕಲ್ ರೋಗನಿರ್ಣಯವನ್ನು ಹೊಂದಿರುವ ಜನರು ಔಪಚಾರಿಕ ರೋಗನಿರ್ಣಯವಿಲ್ಲದ ಜನರಿಗಿಂತ ಕಳಂಕವನ್ನು ವರದಿ ಮಾಡುವ ಸಾಧ್ಯತೆಯಿದೆ ಎಂದು ಕಂಡು ನಮಗೆ ಆಶ್ಚರ್ಯವಾಯಿತು. ಇದು ಏಕೆ ಎಂದು ನಮಗೆ ಇವರೆಗೂ ತಿಳಿದಿಲ್ಲ. ಕಳಂಕವು ಹೇಗೆ ಮತ್ತು ಎಲ್ಲಿ ಪ್ರಕಟವಾಗುತ್ತದೆ ಎಂಬುದರ ಸಂಭಾವ್ಯ ಕಾರ್ಯವಿಧಾನಗಳ ಬಗ್ಗೆ ತಿಳಿಯಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ" ಎಂದು ತಿಳಿಸಿದರು.
ಲಾಂಗ್ ಕೋವಿಡ್ಗೆ ಅಂಟಿಕೊಂಡ ಕಳಂಕ ಭವಿಷ್ಯಕ್ಕೆ ಡೇಂಜರ್
"ಲಾಂಗ್ ಕೋವಿಡ್ಗೆ ಅಂಟಿಕೊಂಡ ಕಳಂಕವು ಲಾಂಗ್ ಕೋವಿಡ್ನೊಂದಿಗೆ ವಾಸಿಸುವ ಜನರಿಗೆ ಹಾನಿಯನ್ನುಂಟುಮಾಡುತ್ತಿದೆ ಮತ್ತು ನಮ್ಮ ಸಮಾಜ ಮತ್ತು ಆರೋಗ್ಯ ಸೇವೆಯ ನಿಬಂಧನೆಗಳ ಮೇಲೆ ವಿನಾಶಕಾರಿ ಗುರುತು ಬಿಡುವ ಸಾಧ್ಯತೆಯಿದೆ" ಎಂದು ಡಾ ಪ್ಯಾಂಟೆಲಿಕ್ ಹೇಳಿದ್ದಾರೆ.
ಇದನ್ನೂ ಓದಿ: Dhoni: ಫಿಫಾ ಫುಟ್ಬಾಲ್ ವಿಶ್ವಕಪ್ನಲ್ಲೂ ಧೋನಿಯದೇ ಹವಾ! ಇಲ್ಲಿದೆ ವೈರಲ್ ಫೋಟೋ
"ಇತರ ದೀರ್ಘಾವಧಿಯ ಪರಿಸ್ಥಿತಿಗಳಾದ ಆಸ್ಥಮಾ, ಖಿನ್ನತೆ, ಮತ್ತು ಎಚ್ಐವಿ ಕಳಂಕವು ಸಾರ್ವಜನಿಕ ಆರೋಗ್ಯದ ಮೇಲೆ ಭೀಕರ ಪರಿಣಾಮಗಳನ್ನು ಬೀರುತ್ತದೆ. ಕಳಂಕದ ಭಯವು ಜನರನ್ನು ಆರೋಗ್ಯ ಸೇವೆಗಳು ಮತ್ತು ಇತರ ಬೆಂಬಲದಿಂದ ದೂರವಿಡುವ ಸಾಧ್ಯತೆಯಿದೆ, ಇದು ಕಾಲಾನಂತರದಲ್ಲಿ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ" ಎನ್ನುತ್ತಾರೆ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ