ಮುಂಬೈ: ಮಹಾರಾಷ್ಟ್ರದಲ್ಲೊಂದು (Maharshtra) ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದ ಬೀಡ್‌ನ (Beed) ಸೌಂದನಾ ಗ್ರಾಮದ 27 ವರ್ಷದ ವಿವಾಹಿತ ಮಹಿಳೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ, ಆಕೆಗೆ ಚಿತ್ರಹಿಂಸೆ ನೀಡಿ ಮಹಿಳೆಯ (Woman) ಮುಟ್ಟಿನ ರಕ್ತವನ್ನು (Menstrual Blood) ವಾಮಾಚಾರದ ಆಚರಣೆಗೆ 50,000 ರೂ.ಗೆ ಮಾರಾಟ ಮಾಡಿರುವಂತಹ ಘೋರ ಘಟನೆ ನಡೆದಿದೆ. ಈ ಬಗ್ಗೆ ಶಿವಸೇನಾ (ಯುಬಿಟಿ) ಎಂಎಲ್‌ಸಿ ಮನೀಶಾ ಕಯಾಂಡೆ (Shiv Sena (UBT) MLC Manisha Kayande) ಅವರು ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ (Vidhan Parishat) ಈ ವಿಷಯವನ್ನು ಪ್ರಸ್ತಾಪಿಸಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಘಟನೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day) ಒಂದು ದಿನಕ್ಕೂ ಮುಂಚಿತವಾಗಿ ನಡೆದಿದೆ.
ಏಳು ಆರೋಪಿಗಳ ವಿರುದ್ಧ ಎಫ್‌ಐಆರ್
ಸಂತ್ರಸ್ತ ಮಹಿಳೆಯ ತಾಯಿಯ ದೂರಿನ ಅನ್ವಯ ಪುಣೆಯ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಪತಿ ಮತ್ತು ಅವರ ಪೋಷಕರು ಸೇರಿದಂತೆ ಏಳು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸಂತ್ರಸ್ತ ಮಹಿಳೆಗೆ ಅವಳ ಮುಟ್ಟಿನ ಅವಧಿಯಲ್ಲಿ ಊಟವನ್ನೂ ನೀಡದೆ ಹಿಂಸಿಸಿದ್ದಾರೆ. ಅಲ್ಲದೇ ಆಕೆಯ ಮುಟ್ಟಿನ ರಕ್ತವನ್ನು ಸಂಗ್ರಹಿಸಿ ಮಾಟಮಂತ್ರ ಉದ್ದೇಶಗಳಿಗಾಗಿ 50,000 ರೂ.ಗೆ ಮಾರಾಟ ಮಾಡಲಾಗಿದೆ ಎಂದು ತನ್ನ ದೂರಿನಲ್ಲಿ ಮಹಿಳೆ ತಿಳಿಸಿರುವುದಾಗಿ ಮನೀಶಾ ಕಯಾಂಡೆ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಮುಟ್ಟಿನ ರಕ್ತ 50 ಸಾವಿರ ರೂ.ಗೆ ಮಾರಾಟ
ಸಂತ್ರಸ್ತೆ ಮಹಿಳೆ 2019ರಲ್ಲಿ ವಿವಾಹವಾಗಿದ್ದರು. ಪತಿಯ ಕುಟುಂಬದಿಂದ ಯಾವುದೇ ವರದಕ್ಷಿಣೆ ಕಾಟ ಅಥವಾ ಬೇರೆ ಯಾವುದೇ ನಿಖರ ಕಾರಣಗಳಿಲ್ಲದಿದ್ದರೂ, ಪತಿ ಮತ್ತು ಅತ್ತೆ ನನಗೆ ಈ ರೀತಿಯಾಗಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ನನ್ನ ಮುಟ್ಟಿನ ಅವಧಿಯಲ್ಲಿ ನನ್ನನ್ನು ಕಟ್ಟಿಹಾಕಿ ಮುಟ್ಟಿನ ರಕ್ತವನ್ನು ಹತ್ತಿಯನ್ನು ಬಳಸಿ ಸಂಗ್ರಹಿಸಿ ವಾಮಾಚಾರ ಮಾಡುವವರಿಗೆ 50,000 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ಕಠಿಣ ಕ್ರಮ ಜಾರಿಗೊಳಿಸುವಂತೆ ಆಗ್ರಹ
ಪುಣೆ ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಕಟ್ಟುನಿಟ್ಟಾದ ಮಹಾರಾಷ್ಟ್ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಮತ್ತು ಇತರ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬಿಜೆಪಿಯ ಪುಣೆ ಗಾರ್ಡಿಯನ್ ಸಚಿವ ಚಂದ್ರಕಾಂತ್ ಪಾಟೀಲ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಮನೀಶ್ ಕಯಾಂಡೆ "ಹಲವು ಬಾರಿ, ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ, ಮಾಟಮಂತ್ರದ ಜೊತೆಗೆ ಇಂತಹ ಅಮಾನವೀಯ ಪದ್ಧತಿಗಳು ಮತ್ತು ಅನಾಗರಿಕ ಆಚರಣೆಗಳು ಜೀವಂತವಾಗಿವೆ. ಆರೋಪಿಗಳ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದರು.
ಕಳೆದ ಎರಡು ತಿಂಗಳಲ್ಲಿ ನಡೆಯುತ್ತಿರುವ ಎರಡನೇ ಪೈಶಾಚಿಕ ಘಟನೆ
ಮಹಾರಾಷ್ಟ್ರದಲ್ಲಿ ಕಳೆದ ಎರಡು ತಿಂಗಳಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆಯುತ್ತಿರುವುದು ಎರಡನೇ ಬಾರಿಗೆ. ಜನವರಿಯಲ್ಲಿ, 28 ವರ್ಷದ ಮಹಿಳೆಯನ್ನು ಸ್ಮಶಾನದಲ್ಲಿ ಬಲವಂತವಾಗಿ ವಿಲಕ್ಷಣ ಆಚರಣೆಗಳಿಗೆ ಬಲವಂತವಾಗಿ ಹಿಂಸಿಸಲಾಗಿತ್ತು.
ಮಹಿಳೆಗೆ ಸ್ಮಶಾನದಲ್ಲಿಯೇ ಸ್ನಾನ ಮಾಡಿಸಿ ಗರ್ಭಾವಸ್ಥೆಯನ್ನು ಸಕ್ರಿಯಗೊಳಿಸಲು ಉದ್ದೇಶಿಸಿರುವ ಕೆಲವು ವಿಧಿಗಳ ಭಾಗವಾಗಿ ಪುಡಿಮಾಡಿದ ಮಾನವ ಮೂಳೆಗಳು ಮತ್ತು ಚಿತಾಭಸ್ಮವನ್ನು ಬೆರೆಸಿದ ದ್ರವವನ್ನು ಕುಡಿಯಲು ಒತ್ತಾಯಿಸಲಾಯಿತು ಎಂದು ಸಂತ್ರಸ್ತೆ ಸಿನ್ಹಗಡ್ ಪೊಲೀಸರಿಗೆ ತಿಳಿಸಿದ್ದರು.
ಇದನ್ನೂ ಓದಿ: Bengaluru: ಗೆಳೆಯನ ಭೇಟಿಗಾಗಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ ಸಾವು; ರಾತ್ರಿ ಇಬ್ಬರ ಮಧ್ಯೆ ನಡೆದಿದ್ದಾದ್ರೂ ಏನು?
ಮಹಿಳೆಯ ದೂರಿನ ಮೇರೆಗೆ ಘೋರ ಅಪರಾಧಕ್ಕಾಗಿ ಮಹಿಳೆಯ ಪತಿ, ಅವರ ಪೋಷಕರು, ಅವರ ಸಹೋದರ ಮತ್ತು ಇತರ ಮೂವರನ್ನು ಬಂಧಿಸಲು ಸಿನ್ಹಗಡ್ ಪೊಲೀಸರು ತೆರಳಿದ್ದರು. ಆದರೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಪೊಲೀಸರಿಂದ ತನಿಖೆಯ ವರದಿಯನ್ನು ಕೇಳಿದ್ದು, ಕೇಸ್ ಇನ್ನೂ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ