Maharashtra Political Crisis: ಇಂದು ವಿಶ್ವಾಸ ಮತಯಾಚನೆ ಮಾಡಲಿರುವ ಸಿಎಂ ಏಕನಾಥ ಶಿಂಧೆ; 'ಮಹಾ' ಕ್ಲೈಮ್ಯಾಕ್ಸ್​​​

ಮಹಾರಾಷ್ಟ್ರ ವಿಧಾನಸಭೆಯು ಒಟ್ಟು 288 ಶಾಸಕರನ್ನು ಹೊಂದಿದ್ದು ಬಹುಮತ ಸಾಬೀತು ಪಡಿಸಲು ಅಗತ್ಯ ಇರುವ ಶಾಸಕರ ಸಂಖ್ಯೆ (ಮ್ಯಾಜಿಕ್ ನಂಬರ್) 145. ಶಿವಸೇನೆಯಿಂದ ಬಂಡೆದ್ದು ಬಂದಿರುವ ಶಿವಸೇನೆಯ ಗುಂಪು, ಬಿಜೆಪಿ ಹಾಗೂ ಈ ಜೋಡಿಗೆ ಬೆಂಬಲ ಘೋಷಿಸಿರುವ ಪಕ್ಷೇತರರು 164.

ಏಕನಾಥ ಶಿಂಧೆ

ಏಕನಾಥ ಶಿಂಧೆ

  • Share this:
ನವದೆಹಲಿ, ಜು. 4: ಇತ್ತೀಚೆಗೆ ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ನಡೆದ ಕ್ಷಿಪ್ರ ಕ್ರಾಂತಿಯಿಂದಾಗಿ ಈಗ ಅಲ್ಲಿನ‌ ಚಿತ್ರಣವೇ ಬದಲಾಗಿದೆ. 15 ದಿನಗಳ ಹಿಂದೆ ಯಾರೂ ಊಹಿಸದೇ ಇದ್ದ ಶಿವಸೇನೆಯ ಬಂಡಾಯ ನಾಯಕ  ಏಕನಾಥ್ ಶಿಂಧೆ (Ekanath Shindhe) ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ. ಶಿವಸೇನೆಯ (Shivasene) ಶಾಸಕಾಂಗ ಪಕ್ಷದ ನಾಯಕನ್ನಾಗಿ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ.‌ ಇಂದು ಮಹಾರಾಷ್ಟ್ರ ವಿಧಾನದಭೆಯಲ್ಲಿ ಅವರು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಸದ್ಯ ಶಿವಸೇನೆಯ ಬಂಡಾಯಗಾರರ ಗುಂಪು, ಬಿಜೆಪಿ ಮತ್ತು ಪಕ್ಷೇತರ ಶಾಸಕರ ಬೆಂಬಲ ಹೊಂದಿರುವ ಏಕನಾಥ ಶಿಂಧೆ ಸುಲಭವಾಗಿ ಬಹುಮತ ಸಾಬೀತು ಪಡಿಸಲಿದ್ದಾರೆ.

ಶಿಂಧೆ ದಾರಿ ಬಲು ಸುಲಭ
ಮಹಾರಾಷ್ಟ್ರ ವಿಧಾನಸಭೆಯು ಒಟ್ಟು 288 ಶಾಸಕರನ್ನು ಹೊಂದಿದ್ದು ಬಹುಮತ ಸಾಬೀತು ಪಡಿಸಲು ಅಗತ್ಯ ಇರುವ ಶಾಸಕರ ಸಂಖ್ಯೆ (ಮ್ಯಾಜಿಕ್ ನಂಬರ್) 145 ಆಗಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಬಂಡೆದ್ದು ಬಂದಿರುವ ಶಿವಸೇನೆಯ ಗುಂಪು, ಬಿಜೆಪಿ ಹಾಗೂ ಈ ಜೋಡಿಗೆ ಬೆಂಬಲ ಘೋಷಿಸಿರುವ ಪಕ್ಷೇತರರು ಸೇರಿದರೆ 164 ಶಾಸಕರಾಗುತ್ತಾರೆ. ಈ ಮೂಲಕ ಏಕನಾಥ ಶಿಂಧೆ ಬಹಳ ಸುಲಭವಾಗಿ ಬಹುಮತ ಸಾಬೀತುಪಡಿಸಬಹುದಾಗಿದೆ. ಇನ್ನೊಂದೆಡೆ ಪ್ರತಿಪಕ್ಷಗಳ ಪಾಳೆಯದಲ್ಲಿ ಇರುವ ಶಾಸಕರ ಸಂಖ್ಯೆ ಕೇವಲ 112. ಅಲ್ಲದೆ ತಟಸ್ಥವಾಗಿ ಉಳಿದಿರುವ ಶಾಸಕರ ಸಂಖ್ಯೆ ಕೇವಲ 12.

ಠಾಕ್ರೆಗೆ ಸಡ್ಡು ಹೊಡೆದ ಶಿಂಧೆ
ಸೋಮವಾರ ನೂತನ ಸಿಎಂ ಏಕನಾಥ್ ಶಿಂಧೆ ಬಹುಮತ ಸಾಬೀತು ಮಾಡಲು ತಯಾರಾಗುತ್ತಿದ್ದಂತೆ ಮೊನ್ನೆ ದಿಢೀರನೆ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಕಿತ್ತು ಹಾಕಲಾಗಿತ್ತು.‌ ಶಿವಸೇನೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ಈ ನಿರ್ಧಾರ ಮಾಡಿದ್ದರು. ಇದಾದ ಬಳಿಕ ತಮ್ಮದೇ ಗುಂಪಿನ ಶಾಸಕರ ಸಭೆ ಮಾಡಿ, ಅದೇ ನಿಜವಾದ ಶಿವಸೇನೆಯ ಶಾಸಕಾಂಗ ಪಕ್ಷದ ಸಭೆ, ಈ ಸಭೆ ತಮ್ಮನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯ ಸಚಿವಾಲಯಕ್ಕೆ ಏಕನಾಥ ಶಿಂಧೆ ಪತ್ರ ನೀಡಿದ್ದರು. ಇದೀಗ ಮಹಾರಾಷ್ಟ್ರ ವಿಧಾನಸಭೆಯ ಸಚಿವಾಲಯ ಏಕನಾಥ ಶಿಂಧೆ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಎಂದು ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ: Udaipur Murder: ಉದಯಪುರ ಹತ್ಯೆಯ ಆರೋಪಿ ಜೊತೆ ಬಿಜೆಪಿ ಮುಖಂಡ! ಫೊಟೊ ವೈರಲ್, ಇದೇನು ಹೊಸ ಟ್ವಿಸ್ಟ್?

 ಠಾಕ್ರೆ ಶಿವಸೇನೆಯಿಂದ ಶಿಂಧೆ ಉಚ್ಛಾಟನೆ
ಶಿವಸೇನೆ ನಾಯಕನ ಸ್ಥಾನದಿಂದ ಅವರನ್ನು ಉಚ್ಛಾಟನೆ ಮಾಡಿ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ. ಏಕನಾಥ್ ಶಿಂಧೆ ಅವರು ಸ್ವಯಂಪ್ರೇರಣೆಯಿಂದ ತಮ್ಮ ಸದಸ್ಯತ್ವವನ್ನು ತ್ಯಜಿಸಿದ್ದಾರೆ  ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಂತ ಆರೋಪಿಸಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಹೊಸ ಸ್ಪೀಕರ್ ಆಯ್ಕೆ
ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ರಾಹುಲ್ ನರ್ವೇಕರ್ ವಿಧಾನಸಭಾ ಸ್ಪೀಕರ್  ಆಗಿ ಶನಿವಾರ ಆಯ್ಕೆಯಾಗಿದ್ದಾರೆ. ಇದು ಕೂಡ ಏಕನಾಥ್ ಶಿಂಧೆ ಬಹುಮತ ಸಾಬೀತು ಪಡಿಸಲು ಪೂರಕವಾಗಿದೆ.

ಬಹುಮತ ಸಾಬೀತಿಗೂ ಮುನ್ನವೇ ರಾಜೀನಾಮೆ
ಕಳೆದ ವಾರ ಸುಪ್ರೀಂ ಕೋರ್ಟ್ ಅವಿಶ್ವಾಸ ಮತ ಸಾಬೀತು ಪಡಿಸಲು ಆದೇಶ ನೀಡಿದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ರಾಜೀನಾಮೆ ನೀಡಿದ್ದರು.‌ ಫೇಸ್‌ಬುಕ್‌ ಮೂಲಕ ಮಹಾರಾಷ್ಟ್ರದ ಜನತೆ ಉದ್ದೇಶಿಸಿ ಮಾತನಾಡಿದ್ದ ಉದ್ಧವ್ ಠಾಕ್ರೆ ಫೇಸ್‌ಬುಕ್‌ ಲೈವ್‌ನಲ್ಲೇ ಉದ್ಧವ್ ರಾಜೀನಾಮೆ ಘೋಷಿಸಿದ್ದರು.

"ನನಗೆ ನನ್ನ ಆಡಳಿತದ ಬಗ್ಗೆ ತೃಪ್ತಿಯಿದೆ"
ರಾಜೀನಾಮೆ ಘೋಷಿಸುವ ಮುನ್ನ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ನಾವು ಅಧಿಕೃತವಾಗಿ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಓಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಿದ್ದೇವೆ ಎಂದು ನನಗೆ ತೃಪ್ತಿ ಇದೆ ಎಂದು ತಿಳಿಸಿದ್ದರು. ಇನ್ನು ನನ್ನ ಆಡಳಿತ ನನಗೆ ತೃಪ್ತಿ ತಂದಿದೆ. ನಾವು ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದೇವೆ ಅಂತ ಹೇಳಿದ್ದರು.
Published by:Kavya V
First published: