Maharashtra Political Crisis: ಸರ್ಕಾರ ರಚನೆಗೆ ಅವಕಾಶ ಕೇಳಲಿರುವ ಬಿಜೆಪಿ, ನಾಳೆಯೇ ಪ್ರಮಾಣವಚನ?

ಎಲ್ಲವೂ ಅಂದುಕೊಂಡಂತೆ ಆದರೆ ನಾಳೆಯೇ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂತರ ಎರಡು ಮೂರು ದಿನಗಳಲ್ಲಿ ವಿಧಾನಸಭೆಯ ಅಧಿವೇಶನ ಕರೆದು ವಿಶ್ವಾಸಮತಯಾಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ದೇವೇಂದ್ರ ಫಡ್ನವೀಸ್​

ದೇವೇಂದ್ರ ಫಡ್ನವೀಸ್​

  • Share this:
ನವದೆಹಲಿ, ಜೂ. 30: ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra Chief Minister) ಸ್ಥಾನಕ್ಕೆ ಉದ್ಧವ್ ಠಾಕ್ರೆ (Uddhav Thackery) ಬುಧವಾರ ರಾತ್ರಿ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಬಿಜೆಪಿ (BJP) ಸರ್ಕಾರ ರಚನೆಯ ಕಸರತ್ತು ನಡೆಸಿದೆ. ಇಂದು ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ (Devendra Fadnavies) ರಾಜ್ಯಪಾಲ (Governor) ಭಗತ್ ಸಿಂಗ್ ಕೋಶಿಯಾರಿ (Bhagat Singh Kosiayri) ಅವರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರ ರಚನೆಯ ಹಕ್ಕನ್ನು ಪ್ರತಿಪಾದಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಾಳೆಯೇ ಪ್ರಮಾಣವಚನ?
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿರುವ ಮತ್ತು ಇದೀಗ ಬಂಡಾಯ ನಾಯಕ ಏಕನಾಥ್ ಶಿಂಧೆ ಬಣದ ಬೆಂಬಲವನ್ನೂ ಹೊಂದಿರುವ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡುವಂತೆ ಕೇಳಿಕೊಳ್ಳಲಿದ್ದಾರೆ. ಅಗತ್ಯ ಬಿದ್ದರೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಏಕನಾಥ್ ಶಿಂಧೆ ಬಣ ಬಿಜೆಪಿಗೆ ನೀಡಿರುವ ಬೆಂಬಲ ಪತ್ರವನ್ನು ಕೊಡಲಿದ್ದಾರೆ. ಅಲ್ಲದೆ ನಾಳೆಯೇ ಪ್ರಮಾಣವಚನ ಬೋಧಿಸುವಂತೆಯೇ ಕೇಳಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: Uddhav Thackery Resign: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ! ಎರಡೂವರೆ ವರ್ಷಕ್ಕೆ ಮಹಾ ಅಘಾಡಿ ಸರ್ಕಾರ ಪತನ

ದೇವೇಂದ್ರ ಫಡ್ನವಿಸ್ ನೂತನ‌ ಸಿಎಂ?
ಇಂದು ಎಲ್ಲವೂ ಅಂದುಕೊಂಡಂತೆ ಆದರೆ ನಾಳೆಯೇ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂತರ ಎರಡು ಮೂರು ದಿನಗಳಲ್ಲಿ ವಿಧಾನಸಭೆಯ ಅಧಿವೇಶನ ಕರೆದು ವಿಶ್ವಾಸಮತಯಾಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಏಕನಾಥ್ ಶಿಂಧೆ ಡಿಸಿಎಂ
ಶಿವಸೇನೆಯ 55 ಶಾಸಕರ ಪೈಕಿ 38 ಶಾಸಕರನ್ನು ತನ್ನತ್ತ ಸೆಳೆದಿರುವ ಹಾಗೂ 9 ಮಂದಿ ಪಕ್ಷೇತರ ಶಾಸಕರ ವಿಶ್ವಾಸವನ್ನೂ ಹೊಂದಿರುವ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏಕನಾಥ್ ಶಿಂಧೆ ಬಣಕ್ಕೆ 12 ಸಚಿವ ಸ್ಥಾನ ಮತ್ತು ಪ್ರಮುಖ ಖಾತೆಗಳು ಸಿಗಲಿವೆ ಎಂದು ಗೊತ್ತಾಗಿದೆ. ಒಂದು ವಾರದಿಂದ ಅಸ್ಸಾಂನ‌ ಗೌಹಾಟಿಯಲ್ಲಿ ಬೀಡು ಬಿಟ್ಟಿದ್ದ ಏಕನಾಥ್ ಶಿಂಧೆ ಬಣ ಸದ್ಯ ಗೋವಾದಲ್ಲಿ ಇದ್ದು ನಾಳೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬರಲಿದೆ. ಅಥವಾ ವಿಶ್ವಾಸಮತ ಯಾಚನೆ ವೇಳೆ ನೇರವಾಗಿ ಮಹಾರಾಷ್ಟ್ರ ವಿಧಾನಸಭೆಗೆ ಆಗಮಿಸಲಿದೆ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಲಿದೆ.

ಬಹುಮತ ಸಾಬೀತಿಗೂ ಮುನ್ನವೇ ರಾಜೀನಾಮೆ
ಸುಪ್ರೀಂ ಕೋರ್ಟ್ ಅವಿಶ್ವಾಸ ಮತ ಸಾಬೀತು ಪಡಿಸಲು ಆದೇಶ ನೀಡಿದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ನಾಳೆ (ಜೂನ್ 30) ಬೆಳಗ್ಗೆ 11 ಗಂಟೆಗೆ ನಡೆಯಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಉದ್ಧವ್ ರಾಜೀನಾಮೆ ಸಲ್ಲಿಸಿದ್ದಾರೆ.

ಫೇಸ್‌ಬುಕ್‌ ಲೈವ್‌ನಲ್ಲಿ ರಾಜೀನಾಮೆ ಘೋಷಣೆ
ಸುಪ್ರೀಂಕೋರ್ಟ್ ನಾಳೆ ಬಹುಮತ ಪರೀಕ್ಷೆ ಮಾಡಲು ಆದೇಶ ನೀಡಿದ್ದ ನಂತರ ಉದ್ಧವ್ ಠಾಕ್ರೆ ರಾತ್ರಿ 9:30ಕ್ಕೆ ಫೇಸ್​ಬುಕ್ ಲೈವ್ ಮೂಲಕ ಮಾತನಾಡುವುದಾಗಿ ಶಿವಸೇನೆ ಮೂಲಗಳು ತಿಳಿಸಿದ್ದವು.  ಆದರೆ ಫೇಸ್‌ಬುಕ್‌ ಲೈವ್‌ನಲ್ಲೇ ಉದ್ಧವ್ ರಾಜೀನಾಮೆ ಘೋಷಿಸಿದ್ದಾರೆ.

"ನನಗೆ ನನ್ನ ಆಡಳಿತದ ಬಗ್ಗೆ ತೃಪ್ತಿಯಿದೆ"
ರಾಜೀನಾಮೆ ಘೋಷಿಸುವ ಮುನ್ನ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ನಾವು ಅಧಿಕೃತವಾಗಿ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಓಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಿದ್ದೇವೆ ಎಂದು ನನಗೆ ತೃಪ್ತಿ ಇದೆ ಎಂದು ತಿಳಿಸಿದ್ದರು. ಇನ್ನು ನನ್ನ ಆಡಳಿತ ನನಗೆ ತೃಪ್ತಿ ತಂದಿದೆ. ನಾವು ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದೇವೆ ಅಂತ ಹೇಳಿದ್ದಾರೆ.
Published by:Kavya V
First published: