HOME » NEWS » National-international » MAHARASHTRA MAN PLEADING FOR A HOSPITAL BED FOR HIS AILING FATHER WHO SUFFER FORM COVID SESR

ಬೆಡ್ ಕೊಡಿ ಇಲ್ಲವೇ ಕೊಂದು ಬಿಡಿ; ಸೋಂಕಿತ ತಂದೆಯ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್​ನಲ್ಲಿ 2 ರಾಜ್ಯಗಳನ್ನು ಸುತ್ತಿದ ಮಗ..!

ನನ್ನ ತಂದೆಗೆ ಬೆಡ್ ನೀಡಿ, ಇಲ್ಲವೇ ಇಲ್ಲೇ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ. ಈ ಸ್ಥಿತಿಯಲ್ಲಿ ನಾನು ಅವರನ್ನು ಮನೆಗೆ ಕರೆದೊಯ್ಯಲಾರೆ. ಕಣ್ಣ ಮುಂದೆಯೇ ತಂದೆ ಪ್ರಾಣ ಬಿಡುವುದನ್ನು ನೋಡಲು ಆಗಲ್ಲ. ನೀವೇ ಕೊಂದು ಬಿಡಿ

news18-kannada
Updated:April 15, 2021, 3:09 PM IST
ಬೆಡ್ ಕೊಡಿ ಇಲ್ಲವೇ ಕೊಂದು ಬಿಡಿ; ಸೋಂಕಿತ ತಂದೆಯ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್​ನಲ್ಲಿ 2 ರಾಜ್ಯಗಳನ್ನು ಸುತ್ತಿದ ಮಗ..!
ತಂದೆ ಚಿಕಿತ್ಸೆಗೆ ಅಲೆದಾಡುತ್ತಿರುವ ಮಗ
  • Share this:
ಮುಂಬೈ (ಏ. 15): ಆಸ್ಪತ್ರೆಯಲ್ಲಿ ಬೆಡ್ ಕೊಡಿ, ಇಲ್ಲವೇ ನನ್ನ ತಂದೆಗೆ ಇಂಜೆಕ್ಷನ್ ಕೊಟ್ಟು ಕೊಂಡು ಬಿಡಿ.. ಬೆಡ್​ಗಾಗಿ ಅಲೆದಾಡಿದ ನೊಂದ ಪುತ್ರನೊಬ್ಬನ ಆಕ್ರೋಶದ ನುಡಿಗಳಿವು. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಇಂಥದೊಂದು ಕರುಣಾಜನಕ ಘಟನೆ ನಡೆದಿದೆ. ಚಂದ್ರಾಪುರದ ನಿವಾಸಿಯಾದ ಸಾಗರ್ ಕಿಶೋರ್ ಎಂಬುವರು ತಮ್ಮ ಸೋಂಕಿತ ತಂದೆಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಆಂಬ್ಯುಲೆನ್ಸ್​​ನಲ್ಲಿ ಅಲೆದಾಡಿದ್ದಾರೆ. ಮಹಾರಾಷ್ಟ್ರ ಮಾತ್ರವಲ್ಲದೇ ಆಂಧ್ರಪ್ರದೇಶಕ್ಕೂ ಕರೆದೊಯ್ದು ಆಸ್ಪತ್ರೆಗಳಲ್ಲಿ ಬೆಡ್​ಗಾಗಿ ಹುಡುಕಾಡಿದ್ದಾರೆ. ಅಲ್ಲಿಯೂ ಬೆಡ್ ಸಿಗದೆ ಮಹಾರಾಷ್ಟ್ರಕ್ಕೆ ಮರಳಿದ್ದಾರೆ.

ರಾಜಧಾನಿ ಮುಂಬೈನಿಂದ 850 ಕಿಲೋ ಮೀಟರ್ ದೂರವಿರುವ ಚಂದ್ರಾಪುರದ ನಿವಾಸಿಯಾದ ಸಾಗರ್ ಕಿಶೋರ್ ಅವರ ತಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಸೋಂಕಿನಿಂದ ಇಳಿವಯಸ್ಸಿನ ತಂದೆಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲು ಅವರ ಮಗ ಮೊದಲಿಗೆ ಚಂದ್ರಾಪುರದಲ್ಲಿರುವ ಆಸ್ಪತ್ರೆಗಳ ಕದ ತಟ್ಟಿದ್ದಾರೆ. ಬೆಡ್ ಇಲ್ಲ ಎಂಬ ಉತ್ತರವನ್ನೇ ಎಲ್ಲ ಸ್ಥಳೀಯ ಆಸ್ಪತ್ರೆಗಳ ಸಿಬ್ಬಂದಿ ಹೇಳಿದ್ದಾರೆ. ಆಂಬ್ಯುಲೆನ್ಸ್​ನಲ್ಲೇ ಖಾಸಗಿ ಆಸ್ಪತ್ರೆಗಳಿಗೂ ತೆರಳಿ ಚಿಕಿತ್ಸೆಗಾಗಿ ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ತೀವ್ರವಾಗಿ ಉಲ್ಬಣಿಸಿದ್ದು ಬಹುತೇಕ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್​ಗಳು ಸಿಗುತ್ತಿಲ್ಲ. ಇದನ್ನು ಅರಿತ ಮಗ ಆಂಬ್ಯುಲೆನ್ಸ್​ನಲ್ಲೇ ಪಕ್ಕದ ರಾಜ್ಯ ಆಂಧ್ರಪ್ರದೇಶಕ್ಕೆ ತಂದೆಯನ್ನು ಕರೆದೊಯ್ದಿದ್ದಾರೆ. ರಾತ್ರಿಯೀಡಿ ಆಂಧ್ರಕ್ಕೆ ಪ್ರಯಾಣಿಸಿ ಅಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅಲ್ಲೂ ಅದೇ ಕಥೆ, ಬೆಡ್ ಇಲ್ಲ ಅಂತೇಳಿ ಆಸ್ಪತ್ರೆಯಿಂದ ಆಸ್ಪತ್ರೆ ಅಲೆಸಿದ್ದಾರೆ. ರೋಸಿ ಹೋದ ಪುತ್ರ ಆಂಧ್ರಪ್ರದೇಶದಿಂದ ಮತ್ತೆ ಮಹಾರಾಷ್ಟ್ರದ ಚಂದ್ರಾಪುರಕ್ಕೆ ಮರಳಿದ್ದಾರೆ.

ಅಷ್ಟರಲ್ಲಾಗಲೇ ಆಂಬ್ಯುಲೆನ್ಸ್​ನಲ್ಲಿ ತಂದೆಗೆ ಹಾಕಿದ್ದ ಆಕ್ಸಿಜನ್ ಕೂಡ ಮುಗಿಯುವ ಹಂತಕ್ಕೆ ತಲುಪಿತ್ತು. ಬೆಡ್ ಸಿಗುವ ನಿರೀಕ್ಷೆಯಿಂದ ಬೆಳಗ್ಗೆಯಿಂದ ಆಸ್ಪತ್ರೆಯೊಂದರ ಎದುರು ಕಾದರೂ ಬೆಡ್ ಸಿಗಲಿಲ್ಲ. ಇಡೀ ಘಟನೆಯಿಂದ ಮನನೊಂದ ಪುತ್ರ ಆಸ್ಪತ್ರೆ ಎದುರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ‘ನನ್ನ ತಂದೆಗೆ ಬೆಡ್ ನೀಡಿ, ಇಲ್ಲವೇ ಇಲ್ಲೇ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ. ಈ ಸ್ಥಿತಿಯಲ್ಲಿ ನಾನು ಅವರನ್ನು ಮನೆಗೆ ಕರೆದೊಯ್ಯಲಾರೆ. ಕಣ್ಣ ಮುಂದೆಯೇ ತಂದೆ ಪ್ರಾಣ ಬಿಡುವುದನ್ನು ನೋಡಲು ಆಗಲ್ಲ. ನೀವೇ ಕೊಂದು ಬಿಡಿ’ ಎಂದು ಕಣ್ಣೀರು ಹಾಕಿದ್ದಾರೆ.

ದೇಶದಲ್ಲಿ ನಿತ್ಯ ಅತಿ ಹೆಚ್ಚು ಕೋವಿಡ್ ಕೇಸ್​ಗಳು ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿವೆ. ಬಹುತೇಕ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಸೋಂಕಿಗೆ ಕಡಿವಾಣ ಹಾಕಲು ನಿನ್ನೆಯಿಂದ ಸಿಎಂ ಉದ್ಧವ್ ಠಾಕ್ರೆ ರಾಜ್ಯಾದಾದ್ಯಂತ ಜನತಾ ಕರ್ಫ್ಯೂ ಹೇರಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 58,952 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 278 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

(ವರದಿ: ಕಾವ್ಯಾ. ವಿ)
Published by: Seema R
First published: April 15, 2021, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories