news18 Updated:January 19, 2021, 3:37 PM IST
ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್
- News18
- Last Updated:
January 19, 2021, 3:37 PM IST
ಮುಂಬೈ(ಜ. 19): ಕರ್ನಾಟಕದ ಭಾಗದಲ್ಲಿರುವ ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಭಾಗಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಶಿವಸೇನೆ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೊತ್ತಿಸಿದ ಬೆಂಕಿಗೆ ಅಲ್ಲಿನ ಕಾಂಗ್ರೆಸ್ ಪಕ್ಷ ಕೂಡ ತುಪ್ಪ ಸುರಿಯುವ ಕೆಲಸ ಮಾಡಿದೆ. ಕರ್ನಾಟಕದಲ್ಲಿರುವ ವಿವಾದಿತ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ವಾಪಸ್ ಕೊಡಬೇಕು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್ ಹೇಳಿದ್ದಾರೆ. ಮಹಾರಾಷ್ಟ್ರದ ಕ್ಯಾತೆಗೆ ಕರ್ನಾಟಕದ ಕಾಂಗ್ರೆಸ್ ನಾಯಕರು ತೀವ್ರ ರೀತಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ನಡುವೆಯೇ ಮಹಾರಾಷ್ಟ್ರದ ಕಾಂಗ್ರೆಸ್ಸಿಗರು ತದ್ವಿರುದ್ಧದ ನಿಲುವು ತಳೆದಿರುವುದು ಕಂಡುಬಂದಿದೆ.
ಈ ಬಗ್ಗೆ ಸಾವಂತ್ ಅವರನ್ನು ಪ್ರಶ್ನಿಸಿದಾಗ ಅವರು, ಮಹಾರಾಷ್ಟ್ರ ಕಾಂಗ್ರೆಸ್ನ ಬದ್ಧತೆ ತಮ್ಮ ರಾಜ್ಯದ ಜನತೆಗಾಗಿ ಇದೆ ಎಂದು ಸ್ಪಷ್ಟಪಡಿಸಿದ್ಧಾರೆ. “ಮಹಾರಾಷ್ಟ್ರದ ಜನರಿಗಾಗಿ ನಮ್ಮ ಬದ್ಧತೆ ಇರುವುದು. ಈ ಭೂ ವಿವಾದ ಬಹಳ ಕಾಲದಿಂದ ಹಾಗೇ ಇತ್ಯರ್ಥವಾಗದೆ ಉಳಿದಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಮೊದಲಾದ ಪ್ರದೇಶಗಳಲ್ಲಿ ಮರಾಠಿ ಭಾಷಿಕ ಜನಸಂಖ್ಯೆಯೇ ಹೆಚ್ಚಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಈ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕಿದೆ” ಎಂದು ಸಚಿನ್ ಸಾವಂತ್ ಮಂಗಳವಾರ ಹೇಳಿದ್ದಾರೆ.
ಇದನ್ನೂ ಓದಿ: Bharat Biotech – ವ್ಯಾಕ್ಸಿನ್ ಅಡ್ಡಪರಿಣಾಮ; ಯಾರಿಗೆ ಬೇಡ ಲಸಿಕೆ? - ಭಾರತ್ ಬಯೋಟೆಕ್ನಿಂದ ಪಟ್ಟಿ
ಮೊನ್ನೆಯಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಕರ್ನಾಟಕದ ವಿವಾದಿತ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದರು. ಉಪ ಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖಂಡ ಅಜಿತ್ ಪವಾರ್ ಕೂಡ ಅದಕ್ಕೆ ಧ್ವನಿಗೂಡಿಸಿದ್ದರು. ಮಹಾರಾಷ್ಟ್ರದ ಆಡಳಿತ ಪಕ್ಷಗಳ ಮುಖಂಡರು ನೀಡಿದ ಈ ಹೇಳಿಕೆಯನ್ನು ಕರ್ನಾಟಕದ ರಾಜಕೀಯ ನಾಯಕರು ಪಕ್ಷಭೇದವಿಲ್ಲದೆ ಖಂಡಿಸಿದ್ದಾರೆ. ರಾಜ್ಯದ ಒಂದಿಂಚೂ ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆ ಇಲ್ಲ ಎಂದು ಕರ್ನಾಟಕದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಗುಡುಗಿದ್ದಾರೆ. ಕನ್ನಡ ಪರ ಸಂಘಟನೆಗಳು ರಕ್ತಪಾತಕ್ಕೂ ಸಿದ್ಧವಿರುವುದಾಗಿ ವೀರಾವೇಶ ತೋರಿವೆ.
Published by:
Vijayasarthy SN
First published:
January 19, 2021, 3:37 PM IST