• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Farmers Protest: ಕೇಂದ್ರ ಕೃಷಿ ಕಾನೂನನ್ನು ಬೆಂಬಲಿಸಿ ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್; ಮಹಾರಾಷ್ಟ್ರ ಸರ್ಕಾರದಿಂದ ತನಿಖೆಗೆ ಆದೇಶ

Farmers Protest: ಕೇಂದ್ರ ಕೃಷಿ ಕಾನೂನನ್ನು ಬೆಂಬಲಿಸಿ ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್; ಮಹಾರಾಷ್ಟ್ರ ಸರ್ಕಾರದಿಂದ ತನಿಖೆಗೆ ಆದೇಶ

ಲತಾ ಮಂಗೇಶ್ಕರ್​- ಸಚಿನ್ ತೆಂಡೂಲ್ಕರ್​.

ಲತಾ ಮಂಗೇಶ್ಕರ್​- ಸಚಿನ್ ತೆಂಡೂಲ್ಕರ್​.

ರೈತರ ಹೋರಾಟದ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸಿ ಟ್ವೀಟ್ ಮಾಡುವಂತೆ ಕೇಳುವ ಮೂಲಕ ಕೇಂದ್ರ ಸರ್ಕಾರವು ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರತಿಷ್ಠೆಯನ್ನು ಕಸಿದುಕೊಳ್ಳಬಾರದಿತ್ತು ಎಂದು ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
 • Share this:

  ಮುಂಬೈ (ಫೆಬ್ರವರಿ 08); ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಸೇರಿದಂತೆ ಸೇರಿದಂತೆ ಒಂದೇ ಥರದ ಟ್ವೀಟ್ ಮಾಡಿದ್ದ ಎಲ್ಲಾ ಸೆಲೆಟ್ರಿಟಿಗಳ ಟ್ವೀಟ್​ಗಳ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ. ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 74 ದಿನಗಳಿಂದ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಒಂದೆಡೆ ಮಾತುಕತೆಗೆ ಆಹ್ವಾನಿಸುತ್ತಿರುವಂತೆ ಹೇಳಿಕೆ ನೀಡುತ್ತಲೇ ಮತ್ತೊಂದಡೆ ರೈತರ ಹೋರಾಟ ತಡೆಯಲು ಇಂಟರ್ನೆಟ್ ಕಡಿತ, ರಸ್ತೆಗಳಲ್ಲಿ ತಂತಿ-ಮೊಳೆಗಳನ್ನು ನೆಡುವ ಕೆಲಸದಲ್ಲಿ ನಿರತವಾಗಿದೆ. ಇದನ್ನು ವಿರೋಧಿಸಿ ಅಮೆರಿಕದ ಖ್ಯಾತ ಪಾಪ್ ತಾರೆ ರಿಹಾನಾ ಕೇವಲ ಆರು ಪದಗಳಲ್ಲಿ ಟ್ವೀಟ್ ಮಾಡಿದ್ದರು. ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್​‌ ಕೂಡ ರೈತ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ಇಬ್ಬರ ಟ್ವೀಟ್ ಇಡೀ ವಿಶ್ವಾದಾದ್ಯಂತ ವೈರಲ್ ಆಗಿ ಭಾರತ ಸರ್ಕಾರಕ್ಕೆ ಮುಜುಗರ ತಂದಿತ್ತು.


  ಈ ಬೆಳವಣಿಗೆಯ ಬೆನ್ನಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡುವ ಮೂಲಕ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದ ಕೇಂದ್ರ ಸರ್ಕಾರ, "ಇದು ಭಾರತದ ಆಂತರಿಕ ವಿಷಯ. ಈ ವಿಚಾರದಲ್ಲಿ ವಿದೇಶಿಗರು ತಲೆಹಾಕಬಾರದು" ಎಂದು ಖಾರವಾಗಿ ಪ್ರತಿಕ್ರಿಯಿಸಿತ್ತು. ಅಲ್ಲದೆ, ‘ಪ್ರೊಪಗಂಡಾ ವಿರುದ್ದ ಭಾರತ’ ಎಂಬ ಹ್ಯಾಷ್‌ಟ್ಯಾಗ್‌ ಅನ್ನು ನೀಡಿತ್ತು.


  sachin tweet
  ಒಂದೇ ರೀತಿಯಲ್ಲಿರುವ ಸೆಲೆಬ್ರಿಟಿಗಳ ಟ್ವೀಟ್​ಗಳು.


  ಕೇಂದ್ರ ಸರ್ಕಾರದ ಬೆನ್ನಿಗೆ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ವಿರಾಟ್​ ಕೊಹ್ಲಿ, ಆರ್​.ಪಿ. ಸಿಂಗ್, ಗೌತಮ್ ಗಂಭೀರ್​ ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳಾದ ಲತಾ ಮಂಗೇಶ್ಕರ್​, ಅಕ್ಷಯ್ ಕುಮಾರ್, ಅಜಯ್​ ದೇವಗನ್​, ಕಂಗನಾ ರಣಾಔತ್​ ಸೇರಿದಂತೆ ಹಲವರು ಒಂದೇ ರೀತಿಯ ಟ್ವೀಟ್​ ಪೋಸ್ಟ್​ ಮಾಡಿದ್ದರು. ಅಲ್ಲದೆ, ಒಂದೇ ಹ್ಯಾಷ್​ಟ್ಯಾಗ್ ಬಳಸಿದ್ದರು. ಈ ಟ್ವೀಟ್​ಗಳು ಒಂದೇ ರೀತಿಯಲ್ಲಿದ್ದ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರ ಜೊತೆಗೆ ಹಲವಾರು ವಿವಾದಕ್ಕೂ ಚರ್ಚೆಗೂ ಕಾರಣವಾಗಿತ್ತು.


  ಈ ಕುರಿತು ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್ ಮಾತನಾಡಿದ್ದು, "ಭಾರತದ ಸೆಲೆಬ್ರಿಟಿಗಳು ಈ ರೀತಿ ಒಂದೇ ಥರನಾಗಿ, ಒಂದೇ ಹ್ಯಾಷ್‌ಟ್ಯಾಗ್‌ ಬಳಸಿ ಟ್ವೀಟ್ ಮಾಡುವಂತೆ ಕೇಂದ್ರ ಸರ್ಕಾರ ಅವರ ಮೇಲೆ ಒತ್ತಡ ಹೇರಿತ್ತೇ? ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದ್ದರು. ಈ ಒತ್ತಾಯಕ್ಕೆ ಮಣಿದಿರುವ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್ ಕೊರೋನಾ ಸೋಂಕಿನ ಕಾರಣಕ್ಕಾಗಿ ಕ್ವಾರಂಟೈನ್‌ನಲ್ಲಿದ್ದು ಜೂಮ್ ಮೂಲಕ ನಡೆದ ಮಾತುಕತೆಯಲ್ಲಿ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.


  "ನೀವು ಎತ್ತಿರುವ ಆಕ್ಷೇಪಗಳಿಗೆ ನಮ್ಮ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸುತ್ತೇವೆ ಎಂದು ದೇಶ್ಮುಖ್ ಹೇಳಿದ್ದಾರೆ. ಆ ಟ್ವೀಟ್‌ಗಳಲ್ಲಿ ಯಾವುದೇ ಪದಗಳ ವ್ಯತ್ಯಾಸವಿರಲಿಲ್ಲ. ಎಲ್ಲರ ವಾಕ್ಯಗಳು ಒಂದೇ ರೀತಿ ಇದ್ದವು. ಒಂದೇ ಸಮಯದಲ್ಲಿ ಟ್ವೀಟ್ ಮಾಡಲಾಗಿದೆ. ಇದು ಗಂಭೀರ ವಿಷಯ" ಎಂದು ಅವರು ಹೇಳಿದ್ದಾರೆ.


  ಸಚಿನ್ ಸಾವಂತ್ ಮಾತನಾಡಿ, "amicable ಎಂಬ ಪದವನ್ನು ಈ ಎಲ್ಲಾ ಸೆಲೆಬ್ರಿಟಿಗಳು ಸಹ ಬಳಸಿದ್ದಾರೆ. ಬಿಜೆಪಿ ಅವರ ಮೇಲೆ ಈ ರೀತಿ ಟ್ವೀಟ್​ ಮಾಡುವಂತೆ ಒತ್ತಡ ಹೇರಿತ್ತೆ? ಅವರೆಲ್ಲರಿಗೂ ಈಗ ರಕ್ಷಣೆ ನೀಡಬೇಕಾಗಿದೆ" ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Narendra Modi: ಎಂಎಸ್​ಪಿ ಇತ್ತು, ಇದೆ, ಮುಂದೆಯೂ ಇರಲಿದೆ; ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ


  "ರೈತರ ಹೋರಾಟದ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸಿ ಟ್ವೀಟ್ ಮಾಡುವಂತೆ ಕೇಳುವ ಮೂಲಕ ಕೇಂದ್ರ ಸರ್ಕಾರವು ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರತಿಷ್ಠೆಯನ್ನು ಕಸಿದುಕೊಳ್ಳಬಾರದಿತ್ತು" ಎಂದು ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ದೊಡ್ಡ ವ್ಯಕ್ತಿಗಳು. ಆದರೆ ಅವರೀಗ ಕೇಂದ್ರ ಹೇಳಿದಂತೆ ಟ್ವೀಟ್ ಮಾಡಿದ್ದರಿಂದ ಸಾಕಷ್ಟು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು‌ ಅವರು ಶನಿವಾರ ದೂರಿದ್ದರು.


  ಭಾನುವಾರ ಮಾತನಾಡಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ "ಮಾತನಾಡುವ ಮುನ್ನ ಅದರ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಚಿನ್‌ಗೆ ಸಲಹೆ ನೀಡುತ್ತೇನೆ" ಎಂದು ತಿಳಿಸಿದ್ದರು.

  Published by:MAshok Kumar
  First published: