President Rule in Maharashtra: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಅಧಿಕೃತ ಆದೇಶ: ರಾಷ್ಟ್ರಪತಿ ಅಂಕಿತ

Maharashtra President Rule: ಸರ್ಕಾರ ರಚನೆಗೆ ಎನ್​ಸಿಪಿಗೆ ಇವತ್ತು ರಾತ್ರಿ 8:30ರವರೆಗೆ ಗಡುವು ನೀಡಿದ್ದರೂ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದೆ. ಇತ್ತ ರಾಜ್ಯಪಾಲರು ಮತ್ತು ಕೇಂದ್ರ ಸಚಿವ ಸಂಪುಟ ನೀಡಿರುವ ಶಿಪಾರಸನ್ನು ಪರಿಗಣಿಸಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಸಿರು ನಿಶಾನೆ ತೋರಿದ್ಧಾರೆ.

Sharath Sharma Kalagaru | news18-kannada
Updated:November 12, 2019, 6:12 PM IST
President Rule in Maharashtra: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಅಧಿಕೃತ ಆದೇಶ: ರಾಷ್ಟ್ರಪತಿ ಅಂಕಿತ
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ
  • Share this:
President Rule in Maharashtra:  ಮುಂಬೈ(ನ. 12): ಅಧಿಕಾರ ರಚನೆಗೆ ಹಾವು ಏಣಿ ಆಟ ನಡೆಯುತ್ತಿರುವಂತೆಯೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಮತ್ತು ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿತ್ತು. ಅದರಂತೆ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಪತ್ರಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಸಿರು ನಿಶಾನೆ ಸೂಚಿಸಿದ್ದಾರೆ.

ಸರ್ಕಾರ ರಚನೆಗೆ ಎನ್​ಸಿಪಿಗೆ ಇವತ್ತು ರಾತ್ರಿ 8:30ರವರೆಗೆ ಗಡುವು ನೀಡಿದ್ದರೂ ರಾಜ್ಯಪಾಲರು ಏಕಾಏಕಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಿದ್ದನ್ನು ಸ್ವತಃ ರಾಜ್ಯಪಾಲರು ಪತ್ರಿಕಾ ಪ್ರಕಟಣೆಯಲ್ಲಿ ಖಚಿತಪಡಿಸಿದ್ದರು. ಜತೆಗೆ ಇದರ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿ, ರಾಷ್ಟ್ರಪತಿಗಳಿಗೆ ಶಿಫಾರಸು ಪತ್ರ ಕಳಿಸಿಕೊಟ್ಟಿತ್ತು. 

ಯಾವುದೇ ಪಕ್ಷದಿಂದಲೂ ಸರ್ಕಾರ ರಚಿಸುವ ಪ್ರಯತ್ನ ಕಂಡುಬರದ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆನ್ನಲಾಗಿದೆ. ರಾಜ್ಯಪಾಲರ ಶಿಫಾರಸು ಪತ್ರ ಕೇಂದ್ರ ಸರ್ಕಾರವನ್ನು ತಲುಪಿದ್ದು, ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಮೂಲಕ ಬಿಜೆಪಿ, ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ನಡುವಿನ ಹಗ್ಗಜಗ್ಗಾಟಕ್ಕೆ ರಾಷ್ಟ್ರಪತಿ ಅಂಕುಶದ ಅಂತ್ಯ ಸಿಕ್ಕಿದ್ದು, ಮುಂದಿನ ಬೆಳವಣಿಗೆಯ ಬಗ್ಗೆ ಇನ್ನೂ ಹೆಚ್ಚು ಕುತೂಹಲ ಮನೆ ಮಾಡುವಂತಾಗಿದೆ.

ಸರ್ಕಾರ ರಚನೆಗೆ ಬೆಂಬಲ ಪತ್ರದೊಂದಿಗೆ ಹಕ್ಕುಮಂಡನೆ ಮಾಡಲು ಎನ್​ಸಿಪಿಗೆ ಇವತ್ತು ರಾತ್ರಿಯವರೆಗೂ ನೀಡಲಾದ ಗಡುವು ಇನ್ನೂ ಅಂತ್ಯವಾಗುವ ಮುನ್ನವೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲು ಹೇಗೆ ಸಾಧ್ಯ ಎಂದು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರಶ್ನಿಸಿದ್ದಾರೆ.

Maharashtra Governor Recommends President Rule as deadlock situation continues
ರಾಜ್ಯಪಾಲರು ರಾಷ್ಟ್ರತಿ ಆಳ್ವಿಕೆಗೆ ಶಿಫಾರಸು ಮಾಡಿದ ಪ್ರತಿ


ರಾಜ್ಯಪಾಲರಿಂದ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ ಮೊರೆ ಹೋಗಿರುವ ಶಿವಸೇನೆ, ಎನ್​ಸಿಪಿಗೆ ನೀಡಿದ ಗಡುವು ಮುಗಿಯುವುದರೊಳಗೆ ಹೇಗೆ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

 ಇದನ್ನೂ ಓದಿ: ದೆಹಲಿಯನ್ನು ಮತ್ತೆ ಕಾಡಿದ ವಿಷಕಾರಿ ಹೊಗೆ; ಕೈ ಮೀರಿದ ಪರಿಸ್ಥಿತಿಯಲ್ಲಿ ರಾಷ್ಟ್ರ ರಾಜಧಾನಿಇಂದು ರಾತ್ರಿ 8:30ರೊಳಗೆ ಎನ್​ಸಿಪಿ ಪಕ್ಷ ಸರ್ಕಾರ ರಚನೆಗೆ ಬೆಂಬಲ ಪತ್ರ ತರಲು ರಾಜ್ಯಪಾಲ ಕೋಶಿಯಾರಿ ಸೂಚಿಸಿದ್ದರು. ನಿನ್ನೆ ಸಂಜೆ 7:30ರೊಳಗೆ ರಾಜ್ಯಪಾಲರಿಗೆ ಶಿವಸೇನಾ ಬೆಂಬಲ ಪತ್ರ ಕೊಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಎನ್​ಸಿಪಿಗೆ ಅವಕಾಶ ಸಿಕ್ಕಿತ್ತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿರ್ಧಾರವೇ ಈಗ ನಿರ್ಣಾಯಕವಾಗಿತ್ತು. ಶಿವಸೇನಾ ಪಕ್ಷದವರು ಸಿಎಂ ಆಗಲು ಕಾಂಗ್ರೆಸ್​ನೊಳಗೆ ವಿರೋಧವಿದೆ. ಎನ್​ಸಿಪಿಯವರೇ ಸಿಎಂ ಆಗಲಿ ಎಂಬುದು ಕಾಂಗ್ರೆಸ್ಸಿಗರ ಅಭಿಪ್ರಾಯವಾಗಿತ್ತು ಎಂದು ಕೆಲ ಮೂಲಗಳು ಹೇಳುತ್ತಿವೆ. ಮುಂಬೈನಲ್ಲಿ ಕಾಂಗ್ರೆಸ್ ಮತ್ತು ಎನ್​ಸಿಪಿ ಸಭೆ ನಡೆಯಲಿದ್ದು ಇಲ್ಲಿ ಸಿಎಂ ಸ್ಥಾನ ಇತ್ಯಾದಿಗಳ ಚರ್ಚೆಯಾಗಲಿತ್ತು. ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್ ಮೊದಲಾದ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳುತ್ತಿರುವ ಈ ಸಭೆಯಲ್ಲಿ ಯಾವುದಾದರೂ ನಿರ್ಧಾರ ಹೊರಬರುವ ಮುನ್ನವೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.

ಎನ್​ಸಿಪಿ ಮೂಲಗಳ ಪ್ರಕಾರ, ಶಿವಸೇನಾದವರೇ ಸಿಎಂ ಆಗಲಿ ಎಂಬುದು ಎನ್​ಸಿಪಿಯ ಇಚ್ಛೆಯಾಗಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ ಬಾಹ್ಯ ಬೆಂಬಲ ನೀಡುವ ಬದಲು ಶಿವಸೇನಾ, ಎನ್​ಸಿಪಿ ಜೊತೆ ಸೇರಿ ಸರ್ಕಾರದಲ್ಲಿ ಭಾಗಿಯಾಗಬೇಕು ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. ಅಹ್ಮದ್ ಪಟೇಲ್, ಅಶೋಕ್ ಚವಾಣ್ ಮೊದಲಾದ ಮುಖಂಡರೂ ಕೂಡ ಸೋನಿಯಾ ಗಾಂಧಿ ಅವರ ಮನವೊಲಿಸಿದ್ದರೆನ್ನಲಾಗಿತ್ತು. ಆದರೆ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮುಖಂಡರು ಒಮ್ಮತದ ನಿರ್ಧಾರಕ್ಕೆ ಬಂದು ರಾಜ್ಯಪಾಲರನ್ನು ಭೇಟಿ ಮಾಡುವ ಮುನ್ನವೇ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಿದೆ.

ಇದನ್ನೂ ಓದಿ: ಎಐಎಡಿಎಂಕೆ ಧ್ವಜಸ್ಥಂಬ ತಪ್ಪಿಸಲು ಹೋಗಿ ಮಹಿಳೆಗೆ ಅಪಘಾತ, ಗಂಭೀರ ಗಾಯ

ರಾಜ್ಯಪಾಲರು ನೀಡಿರುವ ಗಡುವು ಮುಗಿದು ರಾಷ್ಟ್ರಪತಿ ಆಳ್ವಿಕೆಯಾದರೂ ಪರವಾಗಿಲ್ಲ, ಮೂರೂ ಪಕ್ಷಗಳು ಕೂತು ಚರ್ಚಿಸಿ ಎಲ್ಲಾ ರೂಪುರೇಶೆಗಳನ್ನು ಮಾಡುವುದು ಒಳ್ಳೆಯದು. ಭವಿಷ್ಯದಲ್ಲಿ ಯಾವುದೇ ಲೋಪ ಮತ್ತು ಅಪಸ್ವರ ಎದುರಾಗದಂತೆ ಈಗಲೇ ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿ ಸರ್ಕಾರ ರಚನೆಗೆ ಕೈಹಾಕಬೇಕು. ಇದಕ್ಕೆ ಹಲವು ದಿನಗಳು ಹಿಡಿದಿರೂ ಪರವಾಗಿಲ್ಲ. ರಾಜ್ಯಪಾಲರಿಗೆ ಯಾವಾಗ ಬೇಕಾದರೂ ಸರ್ಕಾರ ರಚನೆಯ ಪ್ರಸ್ತಾವಿಡಬಹುದು ಎಂಬುದು ಎನ್​ಸಿಪಿ ಲೆಕ್ಕಾಚಾರವಾಗಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ