• Home
  • »
  • News
  • »
  • national-international
  • »
  • ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ನಡುರಸ್ತೆಯಲ್ಲೇ ಹೊತ್ತಿ ಉರಿದಿದ್ದ ಶಿಕ್ಷಕಿ ಸಾವು

ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ನಡುರಸ್ತೆಯಲ್ಲೇ ಹೊತ್ತಿ ಉರಿದಿದ್ದ ಶಿಕ್ಷಕಿ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Murder News: ಕಳೆದ ವಾರ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ 27 ವರ್ಷದ ನಗ್ರಾಲೆ ಎಂಬ ವ್ಯಕ್ತಿ 24 ವರ್ಷದ ಕಾಲೇಜು ಶಿಕ್ಷಕಿ ಅಂಕಿತಾ ಮೇಲೆ ಪೆಟ್ರೋಲ್ ಸುರಿದು ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ್ದ.

  • Share this:

ನಾಗಪುರ್ (ಫೆ. 10): ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನೊಬ್ಬ ನಡುರಸ್ತೆಯಲ್ಲೇ ಶಿಕ್ಷಕಿಗೆ ಬೆಂಕಿ ಹಚ್ಚಿದ್ದ ಘಟನೆ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ನಡೆದಿತ್ತು. ದೇಹದ ಬಹುತೇಕ ಭಾಗ ಸುಟ್ಟುಹೋಗಿದ್ದ ಕಾರಣ 1 ವಾರಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಆ ಕಾಲೇಜು ಶಿಕ್ಷಕಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.


ಕಳೆದ ವಾರ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗನ್​ ಘಾಟ್​ನ 27 ವರ್ಷದ ನಗ್ರಾಲೆ ಎಂಬ ವ್ಯಕ್ತಿ 24 ವರ್ಷದ ಕಾಲೇಜು ಶಿಕ್ಷಕಿ ಅಂಕಿತಾ ಪಿಸುಡ್ಡೆ ಮೇಲೆ ಪೆಟ್ರೋಲ್ ಸುರಿದು ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ್ದ. ಶಿಕ್ಷಕಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಆ ವ್ಯಕ್ತಿ ತನ್ನನ್ನು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಆಕೆ ಅದಕ್ಕೆ ಒಪ್ಪದ ಕಾರಣ ಫೆ. 3ರಂದು ಬೆಂಕಿ ಹಚ್ಚಿದ್ದ. ಘಟನೆ ನಡೆದು 1 ಗಂಟೆಯೊಳಗೆ ಆತನನ್ನು ಬಂಧಿಸಲಾಗಿತ್ತು.


ಇದನ್ನೂ ಓದಿ: ಅಕ್ರಮ ಸಂಬಂಧದ ಶಂಕೆ; ಗಂಡನ ಗುಂಡೇಟಿಗೆ ಬಲಿಯಾದ ಬಿಜೆಪಿ ನಾಯಕಿ


ರಸ್ತೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಸ್ಥಳೀಯರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ದೇಹದ ಶೇ. 40ರಷ್ಟು ಭಾಗ ಸುಟ್ಟುಹೋಗಿದ್ದರಿಂದ ಆಕೆಯನ್ನು ನಾಗ್ಪುರದ ಆಸ್ಪತ್ರೆಗೆ ಸೇರಿಸಲಾಗಿತ್ತು. 1 ವಾರ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಯುವತಿ ಇಂದು ಮುಂಜಾನೆ 6.55ಕ್ಕೆ ಸಾವನ್ನಪ್ಪಿದ್ದಾರೆ. ಅಂಕಿತಾ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಆಕೆಯ ಸಂಬಂಧಿಕರು ಆಕೆಯ ಸಾವಿಗೆ ನ್ಯಾಯ ಕೊಡಿಸಬೇಕೆಂದು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ಆಸ್ಪತ್ರೆ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್​ ವಹಿಸಲಾಗಿದೆ.


ಈ ಘಟನೆ ಬಗ್ಗೆ ಎನ್​ಸಿಪಿ ನಾಯಕಿ ಮತ್ತು ಶರದ್ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಟ್ವೀಟ್ ಮಾಡಿದ್ದು, ಮೃತ ಶಿಕ್ಷಕಿಯ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಮೃತ ಯುವತಿಯ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ.



ಇದನ್ನೂ ಓದಿ: ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದ ಹೆಂಡತಿ!


ಅಂಕಿತಾಳ ಸಂಬಂಧಿಕರು ನೀಡಿದ ಮಾಹಿತಿ ಪ್ರಕಾರ, ನಗ್ರಾಲೆ ಹಲವು ತಿಂಗಳಿಂದ ಅಂಕಿತಾಗೆ ಕಿರುಕುಳ ನೀಡುತ್ತಿದ್ದ. ಆತನ ವರ್ತನೆಯಿಂದ ಆಕೆ ಮಾನಸಿಕವಾಗಿ ಬಹಳ ನೊಂದಿದ್ದಳು. ಮೊದಲಿನಿಂದಲೂ ಪರಿಚಿತರಾಗಿದ್ದ ಕಾರಣ ತನ್ನನ್ನು ಮದುವೆಯಾಗುವಂತೆ ನಗ್ರಾಲೆ ಒತ್ತಾಯಿಸುತ್ತಿದ್ದ. ಆದರೆ, ಆತನ ವರ್ತನೆ ಸರಿಯಿಲ್ಲದ ಕಾರಣ ಅಂಕಿತಾ ಮದುವೆಗೆ ಒಪ್ಪಿರಲಿಲ್ಲ. ಅದೇ ಕೋಪದಲ್ಲಿ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಅಂಕಿತಾಳ ಮೃತದೇಹವನ್ನು ಮರಣೋತ್ತರ ಚಿಕಿತ್ಸೆಗೆ ಕಳುಹಿಸಲಾಗಿದೆ.

Published by:Sushma Chakre
First published: