ಮಹಾರಾಷ್ಟ್ರದಲ್ಲಿ ಬಿಜೆಪಿ ತೊರೆದು ಎನ್​ಸಿಪಿಯತ್ತ ಹೊರಟ ಏಕನಾಥ್ ಖಡಸೆ

ದೇವೇಂದ್ರ ಫಡ್ನವಿಸ್ ಅವರು ಪಕ್ಷ ನಿರ್ವಹಿಸುವ ಶೈಲಿ ಬಗ್ಗೆ ಅಸಮಾಧಾನಗೊಂಡ ಕೆಲ ನಾಯಕರಲ್ಲಿ ಏಕನಾಥ್ ಖಡ್ಸೆ ಕೂಡ ಒಬ್ಬರು. ಅದೇ ಕಾರಣಕ್ಕೆ ಅವರು ಬಿಜೆಪಿ ತೊರೆದು ಎನ್​ಸಿಪಿ ಸೇರುತ್ತಿದ್ದಾರೆನ್ನಲಾಗಿದೆ.

ಏಕನಾಥ್ ಖಡಸೆ

ಏಕನಾಥ್ ಖಡಸೆ

  • News18
  • Last Updated :
  • Share this:
ಮುಂಬೈ(ಅ. 21): ಮಹಾರಾಷ್ಟ್ರದ ಅಸಮಾಧಾನಿತ ಬಿಜೆಪಿ ಮುಖಂಡ ಏಕನಾಥ್ ಖಡಸೆ ತಾನು ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದಾಗಿ ತಿಳಿಸಿದ್ಧಾರೆ. ಇದರೊಂದಿಗೆ ಕೆಲ ದಿನಗಳಿಂದ ಅವರು ಬಿಜೆಪಿ ತೊರೆದು ಎನ್​ಸಿಪಿ ಸೇರಬಹುದು ಎಂದು ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗಿದೆ. ಆದರೆ, ಖಡಸೆ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಫಡ್ನವಿಸ್ ಅವನ್ನು ಮಾತ್ರ ದೂರಿದ್ದಾರೆ. “ನನ್ನನ್ನು ಬಿಜೆಪಿಯಿಂದ ಹೊರ ನೂಕಲಾಗಿದೆ. ಆ ಪಕ್ಷದಲ್ಲಿ ದೇವೇಂದ್ರ ಫಡ್ನವಿಸ್ ಬಿಟ್ಟು ಬೇರೆ ಯಾರೊಂದಿಗೂ ನನಗೆ ಅಸಮಾಧಾನ ಇಲ್ಲ. ನನಗೆ ಎನ್​ಸಿಪಿಯಲ್ಲಿ ಯಾವ ಭರವಸೆಯನ್ನ ನೀಡಿಲ್ಲ. ನಾನೊಬ್ಬನೇ ಆ ಪಕ್ಷ ಸೇರುತ್ತಿದ್ದೇನೆ. ಬೇರೆ ಬಿಜೆಪಿ ಶಾಸಕರಾಗಲೀ, ಸಂಸದರಾಗಲೀ ನನ್ನ ಜೊತೆ ಬರುತ್ತಿಲ್ಲ” ಎಂದು ಖಡಸೆ ಅವರು ನ್ಯೂಸ್18ಗೆ ತಿಳಿಸಿದ್ದಾರೆ.

ಏಕನಾಥ್ ಖಡಸೆ ಅವರು ಅ. 23, ಶುಕ್ರವಾರದಂದು ಎನ್​ಸಿಪಿ ಸೇರುವ ಸಾಧ್ಯತೆ ಇದೆ. ಈ ವಿಚಾರವನ್ನು ಎನ್​ಸಿಪಿ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಖಚಿತಪಡಿಸಿದ್ದಾರೆ. “ಖಡಸೆ ಅವರು ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಎನ್​ಸಿಪಿ ಸೇರುತ್ತಿದ್ದಾರೆ. ಅವರ ಆಗಮನದಿಂದ ನಮ್ಮ ಪಕ್ಷದ ಬಲ ಇನ್ನಷ್ಟು ಹೆಚ್ಚಾಗಲಿದೆ” ಎಂದು ಸಚಿವರೂ ಆಗಿರುವ ಜಯಂತ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವುದು ಹೇಗೆ?; ಇಲ್ಲಿದೆ ಮಾಹಿತಿ

ಫಡ್ನವಿಸ್ ಜೊತೆ ಖಡ್ಸೆ ಮುನಿಸಿಗೆ ಕಾರಣ?

ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದಾಗ ಏಕನಾಥ್ ಖಡಸೆ ಸಚಿವರಾಗಿದ್ದರು. 2016ರಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ಖಡಸೆ ಅವರನ್ನ ಸಚಿವ ಸ್ಥಾನದಿಂದ ಇಳಿಸಲಾಯಿತು. ಆಗಿನಿಂದಲೇ ಖಡಸೆ ಅಸಮಾಧಾನ ಆರಂಭವಾಗಿದ್ದು. 2019ರ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಕಳಂಕದ ಕಾರಣವೊಡ್ಡಿ ಖಡಸೆಗೆ ಟಿಕೆಟ್ ನೀಡಲಾಯಿತು. ಅವರ ಮಗಳು ರೋಹಿಣಿ ಖಡಸೆಗೆ ಟಿಕೆಟ್ ನೀಡಲಾಯಿತಾದರೂ ಅವರು ಹೀನಾಯವಾಗಿ ಸೋತರು. ತಮ್ಮ ಮಗಳ ಸೋಲಿಗೆ ಫಡ್ನವಿಸ್ ಸಂಚು ರೂಪಿಸಿದರು ಎಂಬುದು ಖಡಸೆಯ ಮುನಿಸು.

ದೇವೇಂದ್ರ ಫಡ್ನವಿಸ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರೂ ಹೌದು. ಅವರು ಪಕ್ಷವನ್ನು ನಿರ್ವಹಿಸುತ್ತಿರುವ ರೀತಿ ಬಗ್ಗೆ ಕೆಲವರಲ್ಲಿ ಅಸಮಾಧಾನ ಇದೆ. ನಾಯಕತ್ವಕ್ಕೆ ಪೈಪೋಟಿ ನೀಡಬಲ್ಲ ನಾಯಕರನ್ನ ಅವರು ಮೂಲೆಗುಂಪು ಮಾಡುತ್ತಾರೆ ಎಂದು ಈ ಅಸಮಾಧಾನಿತರು ಆರೋಪಿಸುತ್ತಾರೆ. ಅಂಥ ಅಸಮಾಧಾನಿತರಲ್ಲಿ ಏಕನಾಥ್ ಖಡ್ಸೆ ಪ್ರಮುಖರು. ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಯೊಳಗೆ ಬಿರುಕು ದೊಡ್ಡದಾಗತೊಡಗಿತು. ಏಕನಾಥ ಖಡಸೆ, ಪಂಕಜಾ ಮುಂಡೆ, ಪ್ರಕಾಶ್ ಮೆಹ್ತಾ ಮೊದಲಾದ ನಾಯಕರು ಪಕ್ಷದೊಳಗೆ ಆಂತರಿಕ ಭಿನ್ನಮತ ಹುಟ್ಟುಹಾಕುವ ಸಾಧ್ಯತೆ ಅರಿತ ಪಕ್ಷದ ನಾಯಕತ್ವ ಈ ಬಂಡಾಯವನ್ನು ಹತ್ತಿಕ್ಕುವ ಪ್ರಯತ್ನಗಳನ್ನ ಮಾಡಿತ್ತೆನ್ನಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 30 ಅಡಿ ಕಂದಕಕ್ಕೆ ಬಿದ್ದ ಬಸ್​; 5 ಮಂದಿ ಸಾವು, 34 ಜನರಿಗೆ ಗಾಯ

ಅಸೆಂಬ್ಲಿ ಎಲೆಕ್ಷನ್ ಬಳಿಕ ಬಿಜೆಪಿಯ ಹಿಂದುಳಿದ ವರ್ಗಗಳ ಮುಖಂಡರು ದೇವೇಂದ್ರ ಫಡ್ನವಿಸ್ ವಿರುದ್ಧ ನೇರವಾಗಿ ಆರೋಪ ಮಾಡಿದರು. ತಮಗೆ ಬೇಕಂತಲೇ ಟಿಕೆಟ್ ನಿರಾಕರಿಸಲಾಯಿತು. ಕೆಲವರಿಗೆ ಟಿಕೆಟ್ ನೀಡಿದರೂ ಚುನಾವಣೆಯಲ್ಲಿ ಸೋಲಾಗುವಂತೆ ಮಾಡಲಾಯಿತು ಎಂದು ಈ ಮುಖಂಡರು ತಮ್ಮ ಹತಾಶೆ ವ್ಯಕ್ತಪಡಿಸಿದ್ದರು. ಪಂಕಜಾ ಮುಂಡೆ ಹಾಗೂ ತಮ್ಮ ಮಗಳ ಸೋಲಿಗೆ ಬಿಜೆಪಿಯ ರಾಜ್ಯ ಘಟಕದ ಕೆಲ ನಾಯಕರೇ ಕಾರಣ. ನನ್ನ ರಾಜಕೀಯ ವೃತ್ತಿಜೀವನ ಅಂತ್ಯ ಹಾಡಲು ಅವರು ಚಿತಾವಣೆ ಮಾಡಿದ್ದರು ಎಂದು ಏಕನಾಥ್ ಖಡಸೆ ಕೂಡ ಈ ಹಿಂದೆ ದೂರಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಖಡಸೆ ಅವರು ಬಿಜೆಪಿ ತೊರೆಯುವ ಸಾಧ್ಯತೆ ದಟ್ಟವಾಗಿತ್ತು. ಈಗ ಅದು ನಿಜವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಒಬಿಸಿ ಮುಖಂಡರೂ ಕೂಡ ಖಡಸೆ ಹಾದಿ ತುಳಿಯುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Published by:Vijayasarthy SN
First published: