Mahant Narendra Giri: ಮಹಂತ್ ನರೇಂದ್ರ ಗಿರಿ ಮರಣೋತ್ತರ ಪರೀಕ್ಷೆ ವೇಳೆ ಕುತ್ತಿಗೆ ಮೇಲೆ ವಿ ಗುರುತು ಪತ್ತೆ!

ಡೆತ್ ನೋಟ್ ಆಧಾರದ ಮೇಲೆ ಸ್ವಾಮಿ ಆನಂದ ಗಿರಿ ಮತ್ತು ಆದ್ಯ ತಿವಾರಿ ಅವರನ್ನು ಬಂಧಿಸಿರುವ ಎಸ್​ಐಟಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆದರೆ, ಅವರು ಸಾವಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಹಂತ್ ನರೇಂದ್ರ ಗಿರಿ

ಮಹಂತ್ ನರೇಂದ್ರ ಗಿರಿ

  • Share this:
    ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ, (Akhil  Bharatiya Akhada Parishad president Mahant Narendra Giri) ಸೋಮವಾರ ಉತ್ತರಪ್ರದೇಶದ ಪ್ರಯಾಗರಾಜ್‌ನ ಬಘಂಬರಿ ಮಠದ ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮಹಂತ್ ನರೇಂದ್ರ ಗಿರಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಲಾಗಿದೆ. ಅಲ್ಲದೇ, ಅವರ ಕುತ್ತಿಗೆ ಮೇಲೆ ವಿ ಎಂಬ ಗುರುತು ಬಿದ್ದಿರುವುದಾಗಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ವಿಸೇರಾ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ, ಎಸ್‌ಐಟಿ ತನ್ನ ತನಿಖೆಯನ್ನು ಮುಂದುವರಿಸುತ್ತದೆ. ಬುಧವಾರ ಬೆಳಿಗ್ಗೆ, ಐದು ವೈದ್ಯರ ತಂಡವು ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿತು. ಮರಣೋತ್ತರ ಪರೀಕ್ಷೆ ಸಂಪೂರ್ಣ ಕಾರ್ಯವಿಧಾನ, ಪ್ರಕ್ರಿಯೆನ್ನು ವಿಡಿಯೋ ಮಾಡಿಕೊಳ್ಳಲಾಗಿದೆ. ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

    ಸೋಮವಾರ ಸಂಜೆ 5: 30 ರ ಸುಮಾರಿಗೆ ಮಹಂತ್ ನರೇಂದ್ರ ಗಿರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಸಾವಿಗೂ ಮುನ್ನ ಅವರು ಬರೆದಿದ್ದಾರೆ ಎನ್ನಲಾದ ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ ಅವರ ಮಾಜಿ ಶಿಷ್ಯ ಸ್ವಾಮಿ ಆನಂದ ಗಿರಿ, ಬೇಡ ಹನುಮಾನ್ ಮಂದಿರದ ಪ್ರಧಾನ ಅರ್ಚಕ ಆದ್ಯ ಪ್ರಸಾದ್ ತಿವಾರಿ ಮತ್ತು ಅವರ ಮಗ ಸಂದೀಪ್ ತಿವಾರಿ ನರೇಂದ್ರ ಗಿರಿ ಸಾವಿಗೆ ಕಾರಣ ಎಂದು ಬರೆಯಲಾಗಿದೆ.

    ಡೆತ್ ನೋಟ್ ಆಧಾರದ ಮೇಲೆ ಸ್ವಾಮಿ ಆನಂದ ಗಿರಿ ಮತ್ತು ಆದ್ಯ ತಿವಾರಿ ಅವರನ್ನು ಬಂಧಿಸಿರುವ ಎಸ್​ಐಟಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆದರೆ, ಅವರು ಸಾವಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    "ನನ್ನ ಸಾವಿಗೆ ಕಾರಣವಾಗಿರುವವರ ಹೆಸರನ್ನು  ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಅವರ ಬೆದರಿಕೆ ಹಾಗೂ ಒತ್ತಡದಿಂದ ನಾನು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾನು ಪ್ರಯಾಗರಾಜ್ ಪೋಲಿಸ್ ಮತ್ತು ಸ್ಥಳೀಯ ಆಡಳಿತಕ್ಕೆ ಮನವಿ ಮಾಡುತ್ತೇನೆ" ಎಂದು  ಮಹಂತ್ ನರೇಂದ್ರ ಗಿರಿ ಅವರು ಡೆತ್ ನೋಟ್​ನಲ್ಲಿ ಬರೆದಿದ್ದಾರೆ.

    ಭಾರತದ ಅತಿದೊಡ್ಡ ದಾರ್ಶನಿಕರ ಸಂಘಟನೆಯ ಅಧ್ಯಕ್ಷರಾದ ಮಹಂತ್ ನರೇಂದ್ರ ಗಿರಿ ಅವರು ಸೋಮವಾರ ಅಲಹಾಬಾದ್‌ನ ಬಘಂಬರಿ ಮಠದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆಗೂ ಮುನ್ನ ಅವರು ಏಳು- ಎಂಟು ಪುಟಗಳ ಆತ್ಮಹತ್ಯಾ  ಪತ್ರ ಬರೆದಿರುವುದು ಪತ್ತೆಯಾಗಿದೆ. ಆ ಪತ್ರದಲ್ಲಿ ತಾನು ಮಾನಸಿಕವಾಗಿ ತೊಂದರೆಗೆ ಈಡಾಗಿದ್ದೇನೆ ಮತ್ತು ತನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಬರೆದಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ, ಮೂರು ಜನರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ ಆನಂದ್ ಗಿರಿಯನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಡಿಜಿ ತಿಳಿಸಿದ್ದಾರೆ. "ಹೆಚ್ಚಿನ ತನಿಖೆಗಾಗಿ ಆತನನ್ನು ಅಲಹಾಬಾದ್‌ಗೆ ಕರೆತರಲಾಗುತ್ತಿದೆ ಮತ್ತು ಪ್ರಕರಣ ಸಂಬಂಧ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ." ಎಂದು ಅವರು ಹೇಳಿದರು.

    ಇದನ್ನು ಓದಿ: Pak Spy| ಮಹಿಳೆಯರನ್ನು ಮೆಚ್ಚಿಸಲು ಸೇನೆ ಸಮವಸ್ತ್ರ ಧರಿಸಿ ಬೆಂಗಳೂರಲ್ಲಿದ್ದ ಪಾಕ್‌ ಪರ ಗೂಢಚಾರಿ!

    ಉತ್ತರ ಪ್ರದೇಶ ಪೊಲೀಸರು ಹರಿದ್ವಾರದಿಂದ ಮಹಂತ ನರೇಂದ್ರ ಗಿರಿಯ ಶಿಷ್ಯ ಆನಂದ ಗಿರಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಆನಂದ್ ಗಿರಿಯನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
    Published by:HR Ramesh
    First published: