ಮುಂಬೈ; ನಿಧಿಯನ್ನು ಪಡೆಯುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ನರಬಲಿ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ (Maharashtra) ಜಲ್ನಾ ಜಿಲ್ಲೆಯ ಜಫ್ರಾಬಾದ್ ತಹಸಿಲ್‌ನಲ್ಲಿ ನಡೆದಿದೆ. ಮಹಿಳೆಯನ್ನು ಬಲಿ ನೀಡಿದರೆ ಅಪಾರ ನಿಧಿ ಸಿಗುತ್ತದೆ ಎಂಬ ಆಸೆಯಿಂದ ನರಬಲಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ, ನರಬಲಿ ನೀಡಲು ಮುಂದಾದ ಆರೋಪದಲ್ಲಿ ಪೊಲೀಸರು ಆಕೆಯ ಗಂಡ ಮತ್ತು ಮಹಿಳಾ ತಂತ್ರಿಕ್ಳನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನೂ ಸಹ ಮೌಜೆ ಡೊಂಗಾವ್ ಎಂಬ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಸಂತೋಷ್ ಪಿಂಪಲ್ (40), ಜೀವನ್ ಪಿಂಪಲ್ ಎಂದು ಗುರುತಿಸ ಲಾಗಿದೆ. ಈ ಇಬ್ಬರೂ ಡೊಂಗಾವ್ ನಿವಾಸಿಗಳು ಎಂದು ತಿಳಿದುಬಂದಿದೆ. ಇನ್ನೂ ಬಂಧಿತಳಾಗಿರುವ ತಂತ್ರಿಕ್ ಮಹಿಳೆಯಾಗಿದ್ದು, ಆಕೆ ಬುಲ್ಧಾನಾ ಜಿಲ್ಲೆಯ ದೇವಾಲ್ಗಾಂವ್ ರಾಜಾ ತಹಸಿಲ್ ಮೂಲದವರು ಎನ್ನಲಾಗಿದೆ. "ಆರೋಪಿ ಸಂತೋಷ್ ಕುಡಿತದ ಚಟಕ್ಕೆ ಒಳಗಾಗಿದ್ದ. ಅಲ್ಲದೆ, ಕುಡಿದು ಸ್ಮಶಾಸನಗಳಲ್ಲಿ ಅಲೆಯುತ್ತಿದ್ದ ಆತ ಹೆಚ್ಚಿನ ಸಮಯ ವನ್ನು ಅಲ್ಲೆ ಕಳೆಯುತ್ತಿದ್ದ. ಅಲ್ಲದೆ ತನ್ನ ಹೆಂಡತಿಯ ಬಳಿ ತಾನು ಶೀಘ್ರದಲ್ಲಿ ಕೆಲವು ಗುಪ್ತ ನಿಧಿಯನ್ನು ಕಂಡುಕೊಳ್ಳುತ್ತೇನೆ ಎಂದು ಹೇಳುತ್ತಿದ್ದನು" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರವೀಂದ್ರ ಠಾಕ್ರೆ ಮಾಹಿತಿ ನೀಡಿದ್ದಾರೆ.
"ಸೆಪ್ಟೆಂಬರ್ 22 ರ ರಾತ್ರಿ, ಸಂತೋಷ್ ತನ್ನ ಮನೆಯಲ್ಲಿ ಅಡಗಿದ್ದ ನಿಧಿಯನ್ನು ಪತ್ತೆ ಮಾಡಲು ಒಬ್ಬ ಮಹಿಳಾ ತಂತ್ರಿಯನ್ನು ಕರೆತಂದಿದ್ದ. ಅವಳು ಕೆಲವು ಪೂಜೆ ಆಚರಣೆಗಳನ್ನು ಮಾಡಿದಳು. ಮರುದಿನ, ಸಂತೋಷ್ ತನ್ನ ಹೆಂಡತಿ ಸೀಮಾಗೆ ತಾನು ನಿಧಿಗಾಗಿ ಆಕೆಯನ್ನೇ ನರಬಲಿ ಕೊಡುವುದಾಗಿ ತಿಳಿಸಿದ್ದ.
ಇದರಿಂದ ಭಯಗೊಂಡಿದ್ದ ಆಕೆ, ಈ ವಿಚಾರವನ್ನು ಇಡೀ ಗ್ರಾಮಸ್ಥರಿಗೆ ತಿಳಿಸಿದ್ದಳು. ಅಲ್ಲದೆ, ತಂದೆಯ ಸಮೇತ ಪೊಲೀಸ್ ಠಾಣೆ ಮಟ್ಟಿಲೇರಿ ದೂರನ್ನೂ ಸಹ ನೀಡಿದ್ದಳು. ಈ ದೂರಿನ ಅನ್ವಯ ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದ ನರಬಲಿ ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟ ಅಘೋರಿ ಪದ್ಧತಿಗಳು, ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ ಮತ್ತು ಇನ್ನು ಕೆಲವು ಐಪಿಸಿ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ