news18-kannada Updated:January 28, 2021, 4:44 PM IST
ಹಾಸ್ಯನಟ ಮುನಾವರ್ ಫಾರೂಕಿ.
ಇಂದೋರ್ (ಜನವರಿ 28); ಹಿಂದೂ ದೇವತೆಗಳನ್ನು ಅಪಮಾನಿಸುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅಲ್ಲದೆ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನೂ ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಜನವರಿ 1 ರಂದು ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ, ಕಲಂ 298, 269 , 188 ಮತ್ತು 34 ಈ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಲಭ್ಯವಾಗದ ಕಾರಣ ಮುನಾವರ್ ಫಾರೂಕಿ ಹೈಕೋರ್ಟ್ನಲ್ಲಿ ಜಾಮೀನಿಗಾಗಿ ಮನವಿ ಮಾಡಿದ್ದರು. ಆದರೆ, ಈ ಕುರಿತು ಇಂದು ವಿಚಾರಣೆ ನಡೆಸಿರುವ ಮಧ್ಯಪ್ರದೇಶ ಹೈಕೋರ್ಟ್ ಸ್ಟಾಂಡ್ಅಪ್ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಮತ್ತು ಸಹ ಆರೋಪಿ ನಳಿನ್ ಯಾದವ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಇಂದೋರ್ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಮಗ ಏಕ್ಲವ್ಯ ಗೌರ್ ನೀಡಿದ ದೂರಿನ ಆಧಾರದ ಮೇಲೆ, ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಡಿಯಲ್ಲಿ ಮುಂಬೈ ಮೂಲದ ಖ್ಯಾತ ಹಾಸ್ಯನಟ(ಕಾಮಿಡಿಯನ್) ಮುನಾವರ್ ಫಾರೂಕಿ ಮತ್ತು ಅವರ ನಾಲ್ವರು ಸಹಚರರನ್ನು ಜನವರಿ 1 ರಂದು ಬಂಧಿಸಲಾಗಿತ್ತು. ಆದರೆ, ಬಂಧಿಸಿ ಎರಡು ದಿನಗಳಾದ ಬಳಿಕ, ಹಿಂದೂ ಧರ್ಮದ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಹೇಳಿರುವ ಯಾವುದೇ ವಿಡಿಯೋ ಸಾಕ್ಷ್ಯಾಧಾರಗಳಿಲ್ಲ ಎಂದು ಇಂದೋರ್ ಪೊಲೀಸರು ತಿಳಿಸಿದ್ದರು.
ಆದರೂ ಸಹ ಅವರು ಇತರ ನಾಲ್ವರು ಸಹ ಆರೋಪಿಗಳೊಂದಿಗೆ ಜನವರಿ 2 ರಿಂದ ಜೈಲಿನಲ್ಲಿದ್ದಾರೆ. ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಜನವರಿ 25 ರಂದು ವಿಚಾರಣೆ ನಡೆಸಿದ್ದು ಆದೇಶವನ್ನು ಕಾಯ್ದಿರಿಸಿತ್ತು.
ಇದನ್ನೂ ಓದಿ: Farmers Protest: ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ದುರದೃಷ್ಟಕರ, ಆದರೆ ರೈತ ಹೋರಾಟ ನಿಲ್ಲುವುದಿಲ್ಲ; ಅರವಿಂದ ಕೇಜ್ರಿವಾಲ್
ಆದರೆ, ಇಂದು ಮುನಾವರ್ ಫಾರೂಕಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ರೋಹಿತ್ ಆರ್ಯ ಅವರ ಏಕ-ನ್ಯಾಯಪೀಠವು, "ಆರೋಪಿಗಳ ವಿರುದ್ದ ಇನ್ನೂ ಹೆಚ್ಚು ದೋಷಾರೋಪಣೆ ಸಂಗ್ರಹಿಸುವ ಸಾಧ್ಯತೆ ಇದೆ. ಅಲ್ಲದೆ ಪ್ರಕರಣದಲ್ಲಿ ಇತರ ವ್ಯಕ್ತಿಗಳ ಪಾತ್ರವನ್ನು ಕೂಡಾ ಕಡೆಗಣಿಸಲಾಗುವುದಿಲ್ಲ" ಎಂದು ಹೇಳಿದ್ದಾರೆ.
ಮುನಾವರ್ ಫಾರೂಕಿಯ ವಕೀಲ ಅನ್ಶುಮಾನ್ ಶ್ರೀವಾಸ್ತವ, "ನಾವು ನಮ್ಮ ಕಾನೂನು ಮತ್ತು ನ್ಯಾಯಾಂಗವನ್ನು ನಂಬುತ್ತೇವೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ" ಎಂದು ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Published by:
MAshok Kumar
First published:
January 28, 2021, 4:44 PM IST