ಮಧ್ಯಪ್ರದೇಶ: ಹದಿಹರೆಯದಲ್ಲಿ (Adolescent) ಪ್ರೀತಿ, ಪ್ರೇಮದ (Love) ನಶೆ ತಲೆಗೇರಿದರೆ ಎಂತಹ ಕೃತ್ಯಕ್ಕೂ ಹೇಸುವುದಿಲ್ಲ ಎಂಬುದನ್ನು ಇಲ್ಲೊಬ್ಬಳು ಸಾಬೀತು ಮಾಡಿದ್ದಾಳೆ. ಪ್ರೀತಿ ಮಾಡುವುದು ತಪ್ಪಲ್ಲ, ಪ್ರೇಮದ ಅಮಲಲ್ಲಿ ಹೆತ್ತವರನ್ನೇ (Parents) ಮೃತ್ಯುಕೂಪಕ್ಕೆ ತಳ್ಳುವಂತಹ ಹೇಯ ಕೃತ್ಯ ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಕೊಲೆ ಪ್ರಕರಣಗಳಿಗೆ (Murder Cases) ಯಾವುದೇ ಕಡಿವಾಣವೇ ಇಲ್ಲದಂತಾಗಿದೆ. ಕೆಲವು ಪ್ರಕರಣಗಳು ಆಸ್ತಿ ವಿಚಾರದಲ್ಲಿ, ಹಣದ ವಿಚಾರದಲ್ಲಿ, ದ್ವೇಷ, ಪ್ರೀತಿ ಇಂತಹ ಹಲವು ವಿಷಯಗಳಲ್ಲಿ ಸಲೀಸಾಗಿ ಒಬ್ಬರು ಮತ್ತೊಬ್ಬರನ್ನು ಹತ್ಯೆಗೈಯುತ್ತಾರೆ. ಇಂತವರಿಗೆಲ್ಲಾ ಕಾನೂನಿನ ಭಯವೇ ಇಲ್ಲದಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತೆ ಮಗಳೇ ತನ್ನ ತಾಯಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದಾಳೆ.
ಪ್ರೇಮದ ಅಮಲಿಗಾಗಿ ಹೆತ್ತ ತಾಯಿಯನ್ನೇ ಕೊಂದ ಮಗಳು
ಹೆತ್ತು ಹೊತ್ತು ಸಾಕಿದ ತಾಯಿಯನ್ನ ಕೇವಲ ಪ್ರೇಮದ ಅಮಲಿಗಾಗಿ ಹತ್ಯೆ ಮಾಡಿದ್ದಾಳೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಹೇಯ ಕೃತ್ಯ ನಡೆದಿದೆ. ಹದಿನೇಳು ವರ್ಷದ ಹುಡುಗಿ ತನ್ನ ತಾಯಿಯನ್ನೇ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.
ಪ್ರೀತಿಯಲ್ಲಿ ಅಂಧಳಾಗಿದ್ದ ಹದಿನೇಳು ವರ್ಷದ ಹುಡುಗಿ, ಹೆತ್ತು ಹೊತ್ತು ಸಾಕಿದ ತನ್ನ ತಾಯಿ ಎಂಬುದನ್ನು ಲೆಕ್ಕಿಸದೇ ಕೊಲೆ ಮಾಡಿದ್ದಾಳೆ. ಪ್ರೀತಿಯ ನಶೆಗೆ ತಾನು ಯಾರನ್ನು ಕೊಲೆ ಮಾಡುತ್ತಿದ್ದೇನೆ ಎಂಬ ಅರಿವಿರದ ಹುಡುಗಿ ತಾಯಿಯ ರಕ್ತ ಹರಿಸಿದ್ದಾಳೆ.
ಪ್ರೀತಿ ಮತ್ತು ಪ್ರಿಯತಮನಿಗಾಗಿ ಹದಿನೇಳರ ಹರೆಯದ ಹುಡುಗಿ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ತಾಯಿಯನ್ನು ಚಾಕುವಿನಿಂದ ಹಲವು ಬಾರಿ ಇರಿದಿದ್ದಾಳೆ. ನಂತರ ಜನ್ಮ ನೀಡಿದ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈ ಸುದ್ದಿ ಈಗ ಸಮಾಜದಲ್ಲಿ ಭಯ ಹುಟ್ಟಿಸಿದೆ.
ಚಿಕ್ಕ ವಯಸ್ಸಿನಲ್ಲಿ ಪ್ರಿಯತಮನ ಜೊತೆ ಸೇರಿ ತಾಯಿಯನ್ನೇ ಮಗಳು ಕೊಂದಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಆರೋಪಿಯಾದ ಮಗಳು ಮತ್ತು ಆಕೆಯ ಪ್ರಿಯತಮ ಪೊಲೀಸರ ಅತಿಥಿಯಾಗಿದ್ದಾರೆ.
ಕೊಲೆಗೈದ ಮಗಳು ಮತ್ತು ಆಕೆಯ ಪ್ರಿಯತಮನನ್ನು ಬಂಧಿಸಿದ ಪೊಲೀಸರು
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ಭಾನುವಾರ ಪೊಲೀಸರಿಗೆ ತಿಳಿದು ಬಂದಿದೆ. ಸದ್ಯ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆಕೆಯ 25 ವರ್ಷದ ಪ್ರಿಯಕರನನ್ನು ಕೂಡ ಅರೆಸ್ಟ್ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಎರಡು ತಿಂಗಳ ಹಿಂದೆ ಹುಡುಗಿ, ಆಕೆಯ ಪ್ರಿಯತಮನ ಜೊತೆಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಈ ವೇಳೆ ಆಕೆಯನ್ನು ತಡೆದು, ಮನೆಗೆ ಕರೆದು ತರಲಾಗಿತ್ತು. ಇತ್ತ ಆಕೆಯ ಪ್ರೇಮಿಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಈ ವೇಳೆ ಯುವಕನನ್ನು ಬಂಧಿಸಿದ್ದ ಪೊಲೀಸರು, ಬಳಿಕ ಯುವಕನಿಗೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು.
ಆದರೆ ಭಾನುವಾರ ಬಾಲಕಿ ಮತ್ತು ಆಕೆಯ ಪ್ರಿಯಕರ ಪ್ಲಾನ್ ಮಾಡಿ ಬಾಲಕಿಯ ತಾಯಿಯನ್ನು ಕೊಲೆ ಮಾಡಿದ್ದಾರೆ. ಹತ್ಯೆಗೀಡಾದ ಮಹಿಳೆ 38 ವರ್ಷ ವಯಸ್ಸಿನವರು. ಭಿಂಡ್ ಜಿಲ್ಲೆಯ ನಿವಾಸಿಯಾಗಿದ್ದರು. ಸದ್ಯ ಆರೋಪಿ ಮಗಳ ಜೊತೆ ಹಜಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಯಾಪುರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರು.
ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆ
ಭಾನುವಾರ ಮಹಿಳೆ ಮನೆಯ ಬಾಗಿಲು ತೆರೆದಿಲ್ಲ ಎಂಬ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಯೊಳಗೆ ಹೋಗಿ ನೋಡಿದಾಗ ಅಲ್ಲಿ ಮಹಿಳೆಯ ರಕ್ತದ ಕಲೆಗಳು ಕಂಡು ಬಂದಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ.
ಈ ವೇಳೆ ಬಾಲಕಿ ಮನೆಯಲ್ಲಿ ಇರಲಿಲ್ಲ. ನಂತರ ಪೊಲೀಸರು ಬಾಲಕಿಯನ್ನು ಹುಡುಕಿದಾಗ ಆಕೆ ಭಾನುವಾರ ಸಂಜೆ ಆಕೆಯ ಪ್ರಿಯತಮನ ಜೊತೆ ಸಿಕ್ಕಿದ್ದಾಳೆ. ಇಬ್ಬರೂ ಸೇರಿ ಮಹಿಳೆಯನ್ನು ತರಕಾರಿ ಕೊಚ್ಚುವ ಚಾಕುವಿನಿಂದ ಇರಿದು, ನಂತರ ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 2022ರಲ್ಲಿ ಮಹಿಳೆಯರ ವಿರುದ್ದ 31,000 ಅಪರಾಧ ಪ್ರಕರಣಗಳು ದಾಖಲು; ರಾಷ್ಟ್ರೀಯ ಮಹಿಳಾ ಆಯೋಗ
ಕೊಲೆ ಮಾಡಿ ಇಬ್ಬರೂ ತಲೆಮರೆಸಿಕೊಳ್ಳಲು ಯೋಜನೆ ಮಾಡಿದ್ದರು. ಬಾಲಕಿಯ ತಾಯಿ ಪ್ರೇಮ ಸಂಬಂಧವನ್ನು ಒಪ್ಪಿರಲಿಲ್ಲ. ಹೀಗಾಗಿ ತಾಯಿಯನ್ನು ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ