ಹೋರ್ಡಿಂಗ್​ ಬಿದ್ದು ಯುವತಿ ಸಾವು; ರಸ್ತೆಯಲ್ಲಿ ಇನ್ನೂ ಎಷ್ಟು ರಕ್ತ ಚೆಲ್ಲಬೇಕು?; ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್​ ತರಾಟೆ

ಯಾರು ಅನಧಿಕೃತ ಹೋರ್ಡಿಂಗ್​ಗಳನ್ನು ಹಾಕಲು ಅನುಮತಿ ನೀಡಿದ್ದರೋ ಅವರಿಂದಲೇ ಹಣ ವಸೂಲಿ ಮಾಡಿ ಸಂತ್ರಸ್ತೆಯ ಕುಟುಂಬಸ್ಥರಿಗೆ ನೀಡಬೇಕು. ಈ ರೀತಿಯ ಅನಧಿಕೃತ ಬ್ಯಾನರ್​ಗಳ ವಿರುದ್ಧ ಸರ್ಕಾರ ಆದಷ್ಟು ಬೇಗ ಸೂಕ್ತ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮದ್ರಾಸ್​ ಕೋರ್ಟ್​ ಆದೇಶಿಸಿದೆ.

Sushma Chakre | news18-kannada
Updated:September 13, 2019, 7:29 PM IST
ಹೋರ್ಡಿಂಗ್​ ಬಿದ್ದು ಯುವತಿ ಸಾವು; ರಸ್ತೆಯಲ್ಲಿ ಇನ್ನೂ ಎಷ್ಟು ರಕ್ತ ಚೆಲ್ಲಬೇಕು?; ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್​ ತರಾಟೆ
ಮೃತ ಯುವತಿ ಶುಭಶ್ರೀ
  • Share this:
ಚೆನ್ನೈ (ಸೆ. 12):  ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಅನಧಿಕೃತ ಹೋರ್ಡಿಂಗ್​ ಬಿದ್ದು ಮೃತಪಟ್ಟಿದ್ದ ಶುಭಶ್ರೀ ಎಂಬ ಯುವತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮದ್ರಾಸ್​ ಹೈಕೋರ್ಟ್​ ಸೂಚಿಸಿದೆ. ಇದೇವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೋರ್ಟ್​, ಇನ್ನೂ ಎಷ್ಟು ಜೀವಗಳು ಈ ಬ್ಯಾನರ್​ ಮತ್ತು ಹೋರ್ಡಿಂಗ್​ಗಳಿಗೆ ಬಲಿಯಾಗಬೇಕು? ಇನ್ನೂ ಕ್ರಮ ಕೈಗೊಳ್ಳಲಿಲ್ಲವೆಂದರೆ ಜನರಿಗೆ ಕಾನೂನಿನ ಮೇಲಿನ ನಂಬಿಕೆಯೇ ಹೋಗುತ್ತದೆ ಎಂದು ಅಸಮಾಧಾನ ಹೊರಹಾಕಿದೆ.

ನಿನ್ನೆ ಮಧ್ಯಾಹ್ನ ಪರೀಕ್ಷೆ ಮುಗಿಸಿಕೊಂಡು ಕಾಲೇಜಿನಿಂದ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದ 22 ವರ್ಷದ ಶುಭಶ್ರೀ ತಲೆಯ ಮೇಲೆ ಇದ್ದಕ್ಕಿದ್ದಂತೆ ಬ್ಯಾನರ್ ಬಿದ್ದ ಕಾರಣ ಆಕೆ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಳು. ಆಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ನೀರಿನ ಟ್ಯಾಂಕರ್ ಆಕೆಯ ಮೇಲೆ ಹಾದುಹೋಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

ಇಂದು ಈ ಪ್ರಕರಣದ ತುರ್ತು ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್, ನಿನ್ನೆ ನಡೆದ ಈ ಸಾವಿಗೆ ಯಾರು ಕಾರಣರೋ, ಅನಧಿಕೃತ ಹೋರ್ಡಿಂಗ್​ಗಳನ್ನು ಹಾಕಲು ಯಾರು ಅನುಮತಿ ನೀಡಿದ್ದರೋ ಅವರಿಂದಲೇ ಹಣ ವಸೂಲಿ ಮಾಡಿ ಸಂತ್ರಸ್ತೆಯ ಕುಟುಂಬಸ್ಥರಿಗೆ ನೀಡಬೇಕು. ಈ ರೀತಿಯ ಅನಧಿಕೃತ ಬ್ಯಾನರ್​ಗಳ ವಿರುದ್ಧ ಸರ್ಕಾರ ಆದಷ್ಟು ಬೇಗ ಸೂಕ್ತ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೆ ಯತ್ನ; ರಕ್ಷಣೆಗಾಗಿ ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಯುವತಿ

ತಮಿಳುನಾಡಿನ ರಸ್ತೆಗಳಲ್ಲಿ ಇನ್ನೂ ಎಷ್ಟು ಲೀಟರ್​ ರಕ್ತ ಚೆಲ್ಲಬೇಕೆಂದು ಬಯಸಿದ್ದೀರಿ? ಜೀವಗಳಿಗೆ ಬೆಲೆಯೇ ಇಲ್ಲವಾ? ಈ ದೇಶದಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ. ನನಗೆ ಮತ್ತು ಜನರಿಗೆ ಈ ಸರ್ಕಾರದ ಮೇಲೆ ನಂಬಿಕೆಯೇ ಸತ್ತು ಹೋಗಿದೆ ಎಂದು ನ್ಯಾಯಮೂರ್ತಿ ಎಂ. ಸತ್ಯನಾರಾಯಣ ಮತ್ತು ಎನ್. ಶೇಷಸಾಯಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಆಕ್ರೋಶ ಹೊರಹಾಕಿದೆ.

ತಮಿಳುನಾಡು ಸಿಎಂ ಇ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್​ ಸೆಲ್ವಂ,
ಮತ್ತು ಮಾಜಿ ಸಿಎಂ ಜಯಲಲಿತಾ ಫೋಟೋ ಇದ್ದ ಬೃಹತ್ ಹೋರ್ಡಿಂಗ್ ಶುಭಶ್ರೀ ಮೈಮೇಲೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷವಾದ ಡಿಎಂಕೆ ನಾಯಕರು ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ವಾಟರ್ ಟ್ಯಾಂಕರ್ ಡ್ರೈವರ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಬೇರಾವ ವ್ಯಕ್ತಿಗಳ ವಿರುದ್ಧವೂ ಕೇಸು ದಾಖಲಿಸಿಕೊಂಡಿಲ್ಲ. ಎಐಎಡಿಎಂಕೆ ಹಾಕಿದ್ದ ಅನಧಿಕೃತ ಬ್ಯಾನರ್​ನಿಂದಲೇ ಈ ಅವಘಡ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದರೂ ಸ್ಥಳೀಯ ನಾಯಕರ ವಿರುದ್ಧ ಯಾವ ಕೇಸನ್ನೂ ದಾಖಲಿಸಿಕೊಂಡಿಲ್ಲ.ಎಐಎಡಿಎಂಕೆ ಹೋರ್ಡಿಂಗ್​ಗೆ ಯುವತಿ ಬಲಿ; ಕೇಸಿನಿಂದ ಪ್ರಭಾವಿಗಳು ಬಚಾವ್

ಒಬ್ಬಳೇ ಮಗಳು ಇನ್ನಿಲ್ಲ:

ಶುಭಶ್ರೀಯ ಕುಟುಂಬಸ್ಥರು ತಮ್ಮ ಮಗಳನ್ನು ಕಳೆದುಕೊಂಡ ಆಘಾತದಿಂದ ಇನ್ನೂ ಹೊರಬಂದಿಲ್ಲ. ಮಗಳ ಸಾವಿಗೆ ಕಾರಣರಾದವರ ಬಗ್ಗೆ ಆಕ್ರೋಶ ಹೊರಹಾಕಿರುವ ಆಕೆಯ ತಂದೆ ರವಿ, 'ಈ ಬ್ಯಾನರ್​ ಸಂಸ್ಕೃತಿಯಿಂದ ನಾನು ನನ್ನ ಮಗಳನ್ನು ಕಳೆದುಕೊಳ್ಳುವಂತಾಯಿತು. ಬ್ಯಾನರ್ ನನ್ನ ಮಗಳ ಮೇಲೆ ಬಿದ್ದಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಅವಳು ಮುಂದಿನ ತಿಂಗಳು ಕೆನಡಾಗೆ ಹೋಗಲು ಪ್ಲಾನ್ ಮಾಡಿದ್ದಳು. ಆದರೀಗ ನಮ್ಮನ್ನೆಲ್ಲ ಬಿಟ್ಟು ಶಾಶ್ವತವಾಗಿ ದೂರ ಹೋಗಿದ್ದಾಳೆ ' ಎಂದು ಕಣ್ಣೀರು ಹಾಕಿದ್ದಾರೆ.

'ನಮಗೆ ಶುಭಶ್ರೀ ಒಬ್ಬಳೇ ಮಗಳು. ಆಕೆಯ ಬಗ್ಗೆ ನಾವು ನೂರಾರು ಕನಸುಗಳನ್ನು ಕಟ್ಟಿದ್ದೆವು. ನಮ್ಮ ರೀತಿ ಬೇರಾವ ತಂದೆ-ತಾಯಿಯೂ ಕಣ್ಣಿರು ಹಾಕುವಂತಾಗಬಾರದು. ಟ್ರಕ್ ಡ್ರೈವರ್ ಕೂಡ ಹೈಸ್ಪೀಡ್​ನಲ್ಲಿ ಬಂದು ನನ್ನ ಮಗಳ ಮೇಲೇ ಗಾಡಿ ಹತ್ತಿಸಿಬಿಟ್ಟ. ನಮ್ಮ ಮಗಳು ಶುಭಶ್ರೀ ನಮ್ಮ ಶಕ್ತಿಯಾಗಿದ್ದಳು. ಆಕೆಯ ಸಾವಿನ ರೀತಿ ಇನ್ನೊಂದು ಪ್ರಕರಣ ಸಂಭವಿಸದಂತೆ ಇನ್ನಾದರೂ ಸರ್ಕಾರ ಗಮನ ಹರಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಗಂಡ-ಹೆಂಡತಿ ಜಗಳಕ್ಕೆ ಪಕ್ಕದ ಮನೆಯವಳು ಬಲಿ; ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ!

ಹಲವು ಬಾರಿ ಆದೇಶ ನೀಡಿರುವ ಕೋರ್ಟ್​:

ಅನಧಿಕೃತ ಬ್ಯಾನರ್​ಗಳನ್ನು ತೆರವುಗೊಳಿಸಲು ಕೋರ್ಟ್​ ಈಗಾಗಲೇ ಹಲವು ಬಾರಿ ಸೂಚನೆ ನೀಡಿದೆ. ಆದರೆ, ಅದನ್ನು ಸಮಪರ್ಕವಾಗಿ ಕಾರ್ಯರೂಪಕ್ಕೆ ತರದ ಕಾರಣ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಈ ಯುವತಿಯ ಮೈಮೇಲೆ ಬಿದ್ದ ಬ್ಯಾನರ್​ ಕೂಡ ಅನಧಿಕೃತ ಎನ್ನಲಾಗಿದೆ. ಮದ್ರಾಸ್​ ಹೈಕೋರ್ಟ್​ ಅನಧಿಕೃತ ಬ್ಯಾನರ್, ಹೋರ್ಡಿಂಗ್ಸ್​ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರೂ ತಮಿಳುನಾಡಿನ ರಾಜಕೀಯ ಪಕ್ಷಗಳು ದಿನಕ್ಕೊಂದು ಕಡೆ ಬ್ಯಾನರ್​ಗಳನ್ನು ಹಾಕುತ್ತಿವೆ.

2017ರಲ್ಲಿ ಅಮೆರಿಕದಿಂದ ಕೊಯಮತ್ತೂರಿಗೆ ವಧುವನ್ನು ನೋಡಲು ಬಂದಿದ್ದ ಇಂಜಿನಿಯರ್ ಒಬ್ಬರು ಹೋರ್ಡಿಂಗ್ಸ್​ಗೆ ಬಲಿಯಾಗಿದ್ದರು. ಕಾರ್ಯಕ್ರಮವೊಂದಕ್ಕೆ ಸಿಎಂ ಕೆ. ಪಳನಿಸ್ವಾಮಿ ಅವರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಬೃಹತ್ ಹೋರ್ಡಿಂಗ್ಸ್​ಗೆ ಆ ಇಂಜಿನಿಯರ್​ನ ವಾಹನ ಡಿಕ್ಕಿ ಹೊಡೆದಿತ್ತು. ಆಗ ಹೋರ್ಡಿಂಗ್ಸ್​​ ಅವರ ಗಾಡಿಯ ಮೇಲೆ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಳೆದ ವರ್ಷ ಪುಣೆಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಭಾರೀ ಪ್ರಮಾಣದ ಬ್ಯಾನರ್​​ ನೆಲಕ್ಕೆ ಉರುಳಿದ ಕಾರಣ ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading