ಮರೀನಾ ಬೀಚ್​ನ ಅಣ್ಣಾ ಸ್ಕ್ವೇರ್​ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಅಸ್ತು

news18
Updated:August 8, 2018, 11:28 AM IST
ಮರೀನಾ ಬೀಚ್​ನ ಅಣ್ಣಾ ಸ್ಕ್ವೇರ್​ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಅಸ್ತು
news18
Updated: August 8, 2018, 11:28 AM IST
ನ್ಯೂಸ್ 18 ಕನ್ನಡ

ಚೆನ್ನೈ (ಆಗಸ್ಟ್ 8): ಎಲ್ಲೆಡೆ ತೀವ್ರ ಚರ್ಚೆಗೆ ಕಾರಣವಾಗಿದ್ದ ಕರುಣಾನಿಧಿ ಅವರ ಅಂತ್ಯಕ್ರಿಯೆ ಸ್ಥಳ ವಿವಾದವನ್ನು ಮದ್ರಾಸ್ ಹೈಕೋರ್ಟ್ ಬಗೆಹರಿಸಿದ್ದು, ಮರೀನಾ ಬೀಚ್​​ನ ಅಣ್ಣಾದೊರೈ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ನ್ಯಾಯಾಲಯ ಅವಕಾಶ ನೀಡಿದೆ.


ಹಾಲಿ ಸಿಎಂಗಳು ಮೃತಪಟ್ಟರೆ ಮಾತ್ರ ಮರೀನಾ ಬೀಚ್ನಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಉಂಟು. ಹೀಗಾಗಿ ಕರುಣಾನಿಧಿ ಅವರ ಸಮಾಧಿಗೆ ಮರೀನಾ ಬೀಚ್ ಬದಲಿಗೆ ಗಿಂಡಿಯ ಗಾಂಧಿ ಮಂಟಪದ ಬಳಿ ಅವಕಾಶ ಮಾಡಿಕೊಡಲಾಗುವುದು ಎಂದು ತಮಿಳುನಾಡು ಸರ್ಕಾರ ತಿಳಿಸಿತ್ತು. ಮರೀನಾ ಬೀಚ್​ನಲ್ಲೇ ಕರುಣಾನಿಧಿ ಅಂತ್ಯಕ್ರಿಯೆ ನಡೆಯಬೇಕು ಎಂದು ಡಿಎಂಕೆ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು.


ಮಂಗಳವಾರ ಮಧ್ಯರಾತ್ರಿಯೇ ವಿಚಾರಣೆ ಆರಂಭಿಸಿದ ಹೈಕೋ ರ್ಟ್​​ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಕನ್ನಡಿಗ ಹುಲುವಾಡಿ ಜಿ.ರಮೇಶ್ ಅವರು ಪ್ರಕರಣವನ್ನು ಮರುದಿನಕ್ಕೆ ಮುಂದೂಡಿದ್ದರು. ಬುಧವಾರ ಬೆಳಗ್ಗೆ 8 ಗಂಟೆಯಿಂದ ವಿಚಾರಣೆ ಆರಂಭಿಸಿದ ನ್ಯಾ.ಹುಲುವಾಡಿ ನೇತೃತ್ವದ ದ್ವಿಸದಸ್ಯ ಪೀಠ, ಮರೀನಾ ಬೀಚ್ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆ ನೆರವೇರಿಸಲು ಅವಕಾಶ ಕಲ್ಪಿಸಿ, ಆದೇಶ ನೀಡಿದೆ.ಸರ್ಕಾರದ ಪರ ವಾದ ಮಂಡಿಸಿದ ವಕೀಲ ವೈದ್ಯನಾಥನ್, ಮಾಜಿ ಸಿಎಂಗಳು, ಹಾಲಿ ಸಿಎಂಗಳು ಇಬ್ಬರು ಒಂದೇಯಲ್ಲ. ಇದೇ ಕರುಣಾನಿಧಿ ಅವರು 1996ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಂ.ಜಿ.ರಾಮಚಂದ್ರನ್ ಅವರ ಪತ್ನಿ ಜಾನಕಿ ಅವರು ಮೃತಪಟ್ಟಾಗ ಮರೀನಾ ಬೀಚ್ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿರಲಿಲ್ಲ. ಜಾನಕಿ ಅವರು ಕೂಡ 100 ದಿನ ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದರು. ಮಾಜಿ ಸಿಎಂ ಆಗಿದ್ದ ಅವರಿಗೆ ಅವಕಾಶ ಸಿಗಲಿಲ್ಲ ಎಂದ ಮೇಲೆ ಈಗ ಕರುಣಾನಿಧಿ ಅವರ ಅಂತ್ಯಕ್ರಿಯೆಗೆ ಏಕೆ ಅವಕಾಶ ಕೊಡಬೇಕು ಎಂದು ವಾದ ಮಂಡಿಸಿದ್ದರು.


ಇದಕ್ಕೆ ಪ್ರತಿವಾದ ಮಂಡಿಸಿದ ಡಿಎಂಕೆ ಪರ ವಕೀಲ ವಿಲ್ಸನ್, ಕರುಣಾನಿಧಿ ಅವರು 13 ಬಾರಿ ಶಾಸಕರಾಗಿದ್ದವರು. 5 ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಇಂತಹ ಹಿರಿಯ ಮುತ್ಸದ್ಧಿ ಅವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನೆರವೇರಿಸುವುದು ಸರ್ಕಾರದ ಕರ್ತವ್ಯ ಎಂದು ಕೋರ್ಟ್​ಗೆ ಅರಿಕೆ ಮಾಡಿದರು.


ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಮರೀನಾ ಬೀಚ್ನಲ್ಲಿ ಕರುಣಾನಿಧಿ ಅವರ ಅಂತ್ಯಕ್ರಿಯೆ ನೆರವೇರಿಸಿದರೆ ಯಾರಾದರೂ ನಿಮ್ಮನ್ನು ಪ್ರಶ್ನಿಸುತ್ತಾರೆಯೇ ಎಂದು ಸರ್ಕಾರದ ಪರ ವಕೀಲರಿಗೆ ಪ್ರಶ್ನೆ ಮಾಡಿ, ಮರೀನಾ ಬೀಚ್ನ ಅಣ್ಣಾದೊರೈ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡಿದರು.


Loading...

ಏನಿದು ವಿವಾದ?


ಹಾಲಿ ಮುಖ್ಯಮಂತ್ರಿಗಳನ್ನು ಮೃತಪಟ್ಟರೇ ಮಾತ್ರ ಚೆನ್ನೈನ ಮರೀನಾ ಬೀಚ್ನ ಅಣ್ಣಾಸ್ಕ್ವೇರ್ನಲ್ಲಿ ಸಮಾಧಿ ಮಾಡಲಾಗುತ್ತದೆ. ಅಣ್ಣಾದೊರೈ, ಎಂ.ಜಿ.ರಾಮಚಂದ್ರನ್ ಹಾಗೂ ಜೆ. ಜಯಲಲಿತಾ ಅವರು ನಿಧನರಾದಾಗ ಮುಖ್ಯಮಂತ್ರಿಗಳಾಗಿದ್ದರು. ಹೀಗಾಗಿ ಅವರ ಸಮಾಧಿಯನ್ನು ಮರೀನಾ ಬೀಚ್ನಲ್ಲಿ ಮಾಡಲಾಗಿದೆ. ಕೆ.ಕಾಮರಾಜ್, ರಾಜಾಜಿ ಅವರು ನಿಧನರಾದಾಗ ಮಾಜಿ ಮುಖ್ಯಮಂತ್ರಿಗಳಾಗಿದ್ದರು. ಹೀಗಾಗಿ ಇವರ ಸಮಾಧಿಯನ್ನು ಗಿಂಡಿಯಲ್ಲಿರುವ ಗಾಂಧಿ ಮಂಟಪದ ಬಳಿ ನೆರವೇರಿಸಲಾಗಿದೆ. ಕರುಣಾನಿಧಿ ಅವರು ಮಾಜಿ ಮುಖ್ಯಮಂತ್ರಿಗಳಾಗಿರುವುದರಿಂದ ಗಾಂಧಿ ಮಂಟಪದ ಬಳಿ ಸಮಾಧಿ ಮಾಡಲು ಅವಕಾಶ ಮಾಡಿಕೊಡಲಾಗುವುದು, ಇದಕ್ಕಾಗಿ ಎರಡು ಎಕರೆ ಜಾಗವನ್ನು ಮಂಜೂರು ಮಾಡಲಾಗುವುದು ಎಂದು ತಮಿಳುನಾಡು ರಾಜ್ಯ ಸರ್ಕಾರ ಹೇಳುತ್ತಿದೆ.


ಮರೀನಾ ಬೀಚ್​ನಲ್ಲಿ ಅಂತ್ಯಕ್ರಿಯೆ ಮಾಡುವುದರ ವಿರುದ್ಧ ಕಾನೂನು ಹೋರಾಟಗಳು ನಡೆಯುತ್ತಿವೆ. ಹೀಗಾಗಿ ಕಾನೂನಿನ ತೊಡಕು ಕೂಡ ಇದೆ ಎಂದು ಕರುಣಾನಿಧಿ ಸಾವಿನ ಸುದ್ದಿ ಪ್ರಕಟಣೆಗೂ ಮುನ್ನ ತಮ್ಮನ್ನು ಭೇಟಿಯಾಗಿದ್ದ ಕರುಣಾನಿಧಿ ಮಕ್ಕಳಾದ ಸ್ಟಾಲಿನ್, ಅಳಗಿರಿ, ಕನಿಮೋಳಿ ಅವರಿಗೆ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಸ್ಪಷ್ಟಪಡಿಸಿದ್ದರು. ಆದರೆ, ಪಳನಿಸ್ವಾಮಿ ವಾದವನ್ನು ಡಿಎಂಕೆ ನಾಯಕರು ಒಪ್ಪುತ್ತಿಲ್ಲ. ಕರುಣಾನಿಧಿ ಅವರು ಸುದೀರ್ಘ ಅವಧಿವರೆಗೆ ಸಾರ್ವಜನಿಕ ಜೀವನದಲ್ಲಿ ಇದ್ದವರು. ಹೀಗಾಗಿ ಮರೀನಾ ಬೀಚ್​ನಲ್ಲೇ ಅವರ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...