ರೇವಾ(ಜ.06): ಮಧ್ಯಪ್ರದೇಶದ ರೇವಾದಲ್ಲಿ ತರಬೇತಿ ವಿಮಾನ ಪತನಗೊಂಡಿದೆ. ರೇವಾದ ಚೋರ್ಹಟಾ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಿ ಗ್ರಾಮದಲ್ಲಿ ದೇವಸ್ಥಾನದ ಗುಮ್ಮಟಕ್ಕೆ ಡಿಕ್ಕಿ ಹೊಡೆದ ನಂತರ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಪೈಲಟ್ ಮತ್ತು ಟ್ರೈನಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಹಿರಿಯ ಪೈಲಟ್ ಕೊನೆಯುಸಿರೆಳೆದಿದ್ದರು. ಪೈಲಟ್ ತರಬೇತಿ ಸಂಸ್ಥೆಯ ವಿಮಾನ ತಡರಾತ್ರಿ ಪತನಗೊಂಡಿದೆ.
ಈ ಘಟನೆ ತಡರಾತ್ರಿ 12ರಿಂದ 1ರ ನಡುವೆ ನಡೆದಿದೆ ಎನ್ನಲಾಗಿದೆ. ಈ ವಿಮಾನವು ಚೋರ್ಹಟಾ ಏರ್ಸ್ಟ್ರಿಪ್ನಿಂದ ಹಾರಿದ್ದು, ನಂತರ ದಟ್ಟವಾದ ಮಂಜಿನಿಂದಾಗಿ ವಿಮಾನವು ಕೆಳ ಹಂತದಲ್ಲಿ ಹಾರಾಟ ನಡೆಸಿದೆ. ಈ ಸಂದರ್ಭದಲ್ಲಿ ವಿಮಾನ ಮಾವಿನ ಮರಕ್ಕೆ ಡಿಕ್ಕಿ ಹೊಡೆದು ಬಳಿಕ ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ ಎಂದು ಹೇಳಲಾಗುತ್ತಿದೆ. ವಿಮಾನ ಡಿಕ್ಕಿಯಾದ ರಭಸಕ್ಕೆ ದೇವಸ್ಥಾನದ ಗೋಪುರವೂ ಧ್ವಂಸಗೊಂಡಿದೆ.
ಈ ವಿಮಾನ ದೇವಸ್ಥಾನದ ಬದಲು ಮನೆಗೆ ಡಿಕ್ಕಿ ಹೊಡೆದಿದ್ದರೆ ದೊಡ್ಡ ಅಪಘಾತ ಸಂಭವಿಸಬಹುದಿತ್ತು. ಸುತ್ತಲೂ ಸಾಕಷ್ಟು ಮನೆಗಳೂ ಇವೆ. ಈ ವಿಷಯ ತಿಳಿದ ತಕ್ಷಣ ಪೊಲೀಸ್ ತಂಡ ರಕ್ಷಣಾ ಕಾರ್ಯಕ್ಕಾಗಿ ಪಡೆ ಸಮೇತ ಸ್ಥಳಕ್ಕೆ ಆಗಮಿಸಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಗ್ರಾಮಸ್ಥರು ಕೂಡ ಸ್ಥಳದಲ್ಲಿ ಜಮಾಯಿಸಿದರು. ವಿಮಾನವು ದೇವಾಲಯದ ಗುಮ್ಮಟಕ್ಕೆ ಡಿಕ್ಕಿ ಹೊಡೆದು ಹಾರಿಹೋಯಿತು.
ಗಾಯಾಳುಗಳಿಬ್ಬರನ್ನು ಸ್ಥಳೀಯರ ನೆರವಿನಿಂದ ರೇವಾದ ಸಂಜಯ್ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದ್ದು, ಚಿಕಿತ್ಸೆ ವೇಳೆ ಹಿರಿಯ ಪೈಲಟ್ ಮೃತಪಟ್ಟಿದ್ದು, ಟ್ರೈನಿ ಪೈಲಟ್ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಹೆಸರು ವಿಮಲ್ ಕುಮಾರ್ (60), ಅವರು ಬಿಹಾರದ ನಿವಾಸಿಯಾಗಿದ್ದರು. ಗಾಯಗೊಂಡಿರುವ ಪ್ರಶಿಕ್ಷಣಾರ್ಥಿಯ ಹೆಸರು ರಾಜಸ್ಥಾನದ ಜೈಪುರ ನಿವಾಸಿ ಸೋನು ಕುಮಾರ್ (24) ಎಂದು ಹೇಳಲಾಗುತ್ತಿದೆ.
ಸದ್ಯ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಘಟನೆಗೆ ದಟ್ಟವಾದ ಮಂಜು ಕಾರಣವೇ ಅಥವಾ ಇನ್ನಾವುದೇ ಕಾರಣದಿಂದ ಅಪಘಾತ ಸಂಭವಿಸಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಮತ್ತು ಎಸ್ಪಿ ನವನೀತ್ ಭಾಸಿನ್ ಕೂಡ ಸ್ಥಳಕ್ಕೆ ಆಗಮಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ