ಭೂಪಾಲ್ (ಮಾ. 10): ಕಳೆದ ಒಂದು ವಾರದಿಂದ ಮಧ್ಯಪ್ರದೇಶದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಸಿಎಂ ಕಮಲನಾಥ್ ಸರ್ಕಾರದ 16 ಶಾಸಕರು ಬೆಂಗಳೂರಿನ ರೆಸಾರ್ಟ್ಗೆ ಶಿಫ್ಟ್ ಆಗಿದ್ದಾರೆ. ಸಂಪುಟದ 22 ಸಚಿವರು ನಿನ್ನೆ ರಾತ್ರಿ ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಸಿಎಂ ಕಮಲನಾಥ್ ಕುರ್ಚಿಗೆ ಕಂಟಕ ಎದುರಾಗಿದೆ. ಇದರ ಬೆನ್ನಲ್ಲೇ ಇಂದು ಮತ್ತೊಂದು ಬೆಳವಣಿಗೆ ನಡೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ನಾಯಕ ದೆಹಲಿಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಣದಲ್ಲಿ ಗುರುತಿಸಿಕೊಂಡಿದ್ದ 16 ಅತೃಪ್ತ ಶಾಸಕರು ತಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ 1 ವಾರದ ಹಿಂದೆ ಬೆಂಗಳೂರಿನ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಆ ಶಾಸಕರನ್ನು ಸಂಪರ್ಕಿಸಲು ಕೈ ನಾಯಕರು ಸಾಕಷ್ಟು ಪ್ರಯತ್ನಪಟ್ಟರೂ ಪ್ರಯೋಜನವಾಗಿರಲಿಲ್ಲ. ಬಿಜೆಪಿಯ ಆಪರೇಷನ್ ಕಮಲದ ದಾಳಕ್ಕೆ 16 ಶಾಸಕರು ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನೇರವಾಗಿ ಆರೋಪಿಸಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶ ಕ್ಷಿಪ್ರ ರಾಜಕೀಯ ಬೆಳವಣಿಗೆ; ಜ್ಯೋತಿರಾದಿತ್ಯ ಸಿಂಧಿಯಾಗೆ ಹಂದಿಜ್ವರ ಆವರಿಸಿದೆ ಎಂದು ಕಿಡಿಕಾರಿದ ದಿಗ್ವಿಜಯ್ ಸಿಂಗ್
ಸೋಮವಾರ ರಾತ್ರಿ 10 ಗಂಟೆಗೆ ಮುಖ್ಯಮಂತ್ರಿ ಕಮಲನಾಥ್ ನಡೆಸಿದ ತುರ್ತು ಸಚಿವ ಸಂಪುಟ ಸಭೆಯ ಬಳಿಕ ಸಂಪುಟದ 22 ಸಚಿವರು ರಾಜೀನಾಮೆ ಸಲ್ಲಿಸಿದ್ದರು. ಒಂದೆಡೆ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿತ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ 22 ಸಚಿವರು ರಾಜೀನಾಮೆ ನೀಡಿದ್ದು ಕಮಲನಾಥ್ ಸರ್ಕಾರಕ್ಕೆ ದೊಡ್ಡ ಆಘಾತ ನೀಡಿತ್ತು. ಸಚಿವ ಸಂಪುಟವನ್ನು ಪುನರ್ ರಚನೆ ಮಾಡಿ, ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ 22 ಸಚಿವರು ನಿನ್ನೆ ರಾತ್ರಿ ರಾಜೀನಾಮೆ ನೀಡಿದ್ದರು.
ಸಿಎಂ ಕಮಲನಾಥ್ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿತ ಶಾಸಕರು ರಾಜ್ಯ ಸಂಪುಟದಲ್ಲಿ ಆಯಕಟ್ಟಿನ ಸ್ಥಾನವನ್ನು ನೀಡಬೇಕೆಂಬ ಬೇಡಿಕೆಯಿಟ್ಟಿದ್ದರು. ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮದ ಸೂತ್ರಧಾರಿಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಬೆಳಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಭೇಟಿಯಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಸಚಿವರ ಸಾಮೂಹಿಕ ರಾಜೀನಾಮೆ ಬೆನ್ನಲ್ಲೇ ಮೋದಿ - ಶಾ ಭೇಟಿಯಾದ ಸಿಂಧಿಯಾ
ಮಧ್ಯಪ್ರದೇಶ ವಿಧಾನಸಭೆ 228 ಶಾಸಕರನ್ನು ಒಳಗೊಂಡಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳನ್ನು ಮತ್ತು ಬಿಜೆಪಿ 107 ಸ್ಥಾನಗಳನ್ನು ಪಡೆದಿತ್ತು. ಬಿಎಸ್ಪಿಯಿಂದ ಇಬ್ಬರು, ಸಮಾಜವಾದಿ ಪಕ್ಷದಿಂದ ಒಬ್ಬರು ಮತ್ತು ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು. ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಕಾಂಗ್ರೆಸ್ ಮತ್ತು ಇತರೆ ಪಕ್ಷದ ಶಾಸಕರನ್ನು ರೆಸಾರ್ಟ್ ರಾಜಕಾರಣದ ಮೂಲಕ ತನ್ನತ್ತ ಸೆಳೆದು, ಸರ್ಕಾರ ರಚಿಸಲು ತಂತ್ರ ರೂಪಿಸಿತ್ತು. ಆದರೆ, ರೆಸಾರ್ಟ್ ರಾಜಕೀಯದ ಪ್ಲಾನ್ ಯಶಸ್ಸು ಕಂಡಿರಲಿಲ್ಲ. ಪರಿಣಾಮವಾಗಿ ಕಮಲನಾಥ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ