ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಸಚಿವರ ಸಾಮೂಹಿಕ ರಾಜೀನಾಮೆ ಬೆನ್ನಲ್ಲೇ ಮೋದಿ - ಶಾ ಭೇಟಿಯಾದ ಸಿಂಧಿಯಾ

Madhya Pradesh Politics Latest News: ಮುಖ್ಯಮಂತ್ರಿ ಕಮಲನಾಥ್ ನಡೆಸಿದ ತುರ್ತು ಸಚಿವ ಸಂಪುಟ ಸಭೆಯ ಬಳಿಕ ಮಧ್ಯಪ್ರದೇಶದ ರಾಜಕಾರಣದಲ್ಲಿ ರಾತ್ರೋರಾತ್ರಿ ಬೆಳವಣಿಗೆ ನಡೆದಿದೆ. ರಾಜ್ಯ ಸಂಪುಟದ 22 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಬೆನ್ನಲ್ಲೇ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್​ ಶಾರನ್ನು ಭೇಟಿ ಮಾಡಿದ್ದಾರೆ

ಜ್ಯೋತಿರಾದಿತ್ಯ ಸಿಂಧ್ಯ

ಜ್ಯೋತಿರಾದಿತ್ಯ ಸಿಂಧ್ಯ

  • Share this:
ಭೂಪಾಲ್ (ಮಾ. 10): ನಾಲ್ಕೈದು ದಿನಗಳಿಂದ ಮಧ್ಯಪ್ರದೇಶದಲ್ಲಿ ರಾಜಕೀಯದ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ಸಿಎಂ ಕಮಲನಾಥ್ ಸರ್ಕಾರದ 16 ಶಾಸಕರನ್ನು ಬೆಂಗಳೂರಿಗೆ ಶಿಫ್ಟ್​ ಮಾಡಲಾಗಿದೆ ಎನ್ನಲಾಗಿತ್ತು. ಆ 16 ಶಾಸಕರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಮಲನಾಥ್​ ಸರ್ಕಾರ ಅತಂತ್ರ ಸ್ಥಿತಿಗೆ ಸಿಲುಕಿದ್ದರಿಂದ ಸೋಮವಾರ ರಾತ್ರಿ ದಿಢೀರೆಂದು ಸಂಪುಟ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಉಳಿದ 22 ಸಚಿವರು ಕೂಡ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಮಧ್ಯಪ್ರದೇಶದ ರಾಜಕಾರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಇದರ ಬೆನ್ನಲ್ಲೇ ಮತ್ತಷ್ಟು ಕುತೂಹಲ ಸೃಷ್ಟಿಸಿರುವ ಕಾಂಗ್ರೆಸ್​ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಶಾರನ್ನು ಭೇಟಿಯಾಗಿದ್ದಾರೆ.

ಭೇಟಿ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಸಿಂಧಿಯಾ ಬಿಜೆಪಿ ಸೇರಲಿದ್ದಾರೆ ಎಂದು ಕೆಲವರು ಊಹಿಸಿದರೆ, ಇದೊಂದು ಬ್ಲಾಕ್​ಮೇಲ್​ ತಂತ್ರ ಎಂದು ಕೆಲವರು ಹೇಳುತ್ತಿದ್ದಾರೆ.

ಮುಖ್ಯಮಂತ್ರಿ ಕಮಲನಾಥ್ ನಡೆಸಿದ ತುರ್ತು ಸಚಿವ ಸಂಪುಟ ಸಭೆಯ ಬಳಿಕ ಮಧ್ಯಪ್ರದೇಶದ ರಾಜಕಾರಣದಲ್ಲಿ ರಾತ್ರೋರಾತ್ರಿ ಸಚಿವರು ರಾಜೀನಾಮೆ ನೀಡಿರುವ ಬೆಳವಣಿಗೆ ನಡೆದಿದೆ. ರಾಜ್ಯ ಸಂಪುಟದ 22 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್​ನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕಾಂಗ್ರೆಸ್ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿತ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಡೆದ ರಾಜಕೀಯ ಬೆಳವಣಿಗೆಯೆಲ್ಲಿ ಮಧ್ಯಪ್ರದೇಶದ 6 ಸಚಿವರು, 10 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ; ಐವರು ಸಚಿವರು ಸೇರಿ 18 ಶಾಸಕರು ಬೆಂಗಳೂರಿಗೆ ಸ್ಥಳಾಂತರ, ಸಿಎಂ ತುರ್ತುಸಭೆ

ಸಿಎಂ ಕಮಲನಾಥ್ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿತ ಶಾಸಕರಿಗೆ ರಾಜ್ಯ ಸಂಪುಟದಲ್ಲಿ ಆಯಕಟ್ಟಿನ ಸ್ಥಾನವನ್ನು ನೀಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಬೆಂಗಳೂರಿನಲ್ಲಿರುವ 16 ಅತೃಪ್ತ ಶಾಸಕರ ಮನವೊಲಿಕೆಗಾಗಿ ಕಮಲನಾಥ್ ಸಂಪುಟದ ಸಚಿವರು ಸಾಮೂಹಿಕ ರಾಜೀನಾಮೆಯ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ರಾಜೀನಾಮೆ ನೀಡಿರುವ 22 ಸಚಿವರು ಮಧ್ಯಪ್ರದೇಶದ ಸಂಪುಟ ಪುನಾರಚನೆ ಮಾಡಿ, ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಬೇಡಿಕೆ ಸಲ್ಲಿಸಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಮಧ್ಯಪ್ರದೇಶದ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕರ್ನಾಟಕ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರುವ ಕಾಂಗ್ರೆಸ್ ಶಾಸಕರನ್ನು ಕಾಪಾಡುವ ಹೊಣೆಯನ್ನು ಕರ್ನಾಟಕದ ಬಿಜೆಪಿ ನಾಯಕರಿಗೆ ವಹಿಸಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್, ಅಹ್ಮದ್ ಪಟೇಲ್ ಸೇರಿದಂತೆ ಹಲವು ನಾಯಕರು ಶಾಸಕರ ಮನವೊಲಿಕೆಗೆ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ; ರಾತ್ರೋರಾತ್ರಿ ರೆಸಾರ್ಟ್​ ಸೇರಿದ ಕೈ ಶಾಸಕರು; ಆತಂಕದಲ್ಲಿ ಕಮಲನಾಥ್​

ಬಿಜೆಪಿಯ ರೆಸಾರ್ಟ್​ ರಾಜಕಾರಣದ ಬಗ್ಗೆ ಆಕ್ರೋಶ ಹೊರಹಾಕಿರುವ ಸಿಎಂ ಕಮಲನಾಥ್, ನಾನು ನನ್ನ ಜೀವನವನ್ನು ಜನರ ಸೇವೆ ಮಾಡಲು ಸವೆಸಿದ್ದೇನೆ. ಆದರೆ, ಬಿಜೆಪಿ ನಾಯಕರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊಂಚು ಹಾಕಿದೆ. ಹಿಂಬಾಗಿಲಿನ ಮೂಲಕ ನಮ್ಮ ಸರ್ಕಾರವನ್ನು ಪತನಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ನಮ್ಮೆಲ್ಲ ಶಾಸಕರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ 228 ಶಾಸಕರನ್ನು ಒಳಗೊಂಡಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ 114 ಸ್ಥಾನಗಳನ್ನು ಮತ್ತು ಬಿಜೆಪಿ 107 ಸ್ಥಾನಗಳನ್ನು ಪಡೆದಿತ್ತು. ಬಿಎಸ್​ಪಿಯಿಂದ ಇಬ್ಬರು, ಸಮಾಜವಾದಿ ಪಕ್ಷದಿಂದ ಒಬ್ಬರು ಮತ್ತು ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು. ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಕಾಂಗ್ರೆಸ್​ ಮತ್ತು ಇತರೆ ಪಕ್ಷದ ಶಾಸಕರನ್ನು ರೆಸಾರ್ಟ್​ ರಾಜಕಾರಣದ ಮೂಲಕ ತನ್ನತ್ತ ಸೆಳೆದು, ಸರ್ಕಾರ ರಚಿಸಲು ತಂತ್ರ ರೂಪಿಸಿತ್ತು. ಆದರೆ, ರೆಸಾರ್ಟ್​ ರಾಜಕೀಯದ ಪ್ಲಾನ್ ಯಶಸ್ಸು ಕಂಡಿರಲಿಲ್ಲ. ಪರಿಣಾಮವಾಗಿ ಕಮಲನಾಥ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

 

 
First published: