ಭೋಪಾಲ್: ಮಧ್ಯಪ್ರದೇಶ ರಾಜ್ಯ ರಾಜಕೀಯ ಹಲವು ದಿನಗಳಿಂದ ಹಾವು-ಏಣಿ ಆಟದಂತೆ ನಡೆಯುತ್ತಿದ್ದು, ಇಂದು ಅಂತಿಮ ಘಟ್ಟ ತಲುಪುವ ಸಾಧ್ಯತೆ ಇದೆ. ಇಂದು ಸಂಜೆ ಐದು ಗಂಟೆಯೊಳಗೆ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪಡೆಸುವಂತೆ ಸುಪ್ರೀಂಕೋರ್ಟ್ ಗಡುವು ನಿಗದಿ ಮಾಡಿದ್ದು, ಕಮಲನಾಥ್ ಅವರಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ಅಲ್ಪಮತಕ್ಕೆ ಕುಸಿದಿರುವ ಕಾಂಗ್ರೆಸ್ ಸರ್ಕಾರ ವಿಶ್ವಾಸ ಮತ ಯಾಚನೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬಿಜೆಪಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇಂದು ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚನೆ ನಡೆಸುವಂತೆ ವಿಧಾನಸಭೆ ಸ್ಪೀಕರ್ ಎನ್ಪಿ ಪ್ರಜಾಪತಿ ಅವರಿಗೆ ನಿರ್ದೇಶನ ನೀಡಿದೆ.
ಇನ್ನು ಬಹುಮತ ಸಾಬೀತುಪಡಿಸುವ ಇಡೀ ಪ್ರಕ್ರಿಯೆ ವಿಡಿಯೋ ಚಿತ್ರೀಕರಣವಾಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದರ ಜೊತೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ಪೊಲೀಸರು ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಸೂಚನೆ ನೀಡಿದೆ. ಬಹುಮತ ಸಾಬೀತು ಪ್ರಕ್ರಿಯೆ ನಡೆಯುವ ವೇಳೆ ಯಾವುದೇ ಕಾನೂನುಗಳ ಉಲ್ಲಂಘನೆಯಾಗಬಾರದು. ಇಡೀ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಬೇಕು ಎಂದೂ ಕೋರ್ಟ್ ತಿಳಿಸಿದೆ.
ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ 22 ಬೆಂಬಲಿಗರು ಈಗಾಗಲೇ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಸರ್ಕಾರ ವಿರುದ್ಧ ಬಂಡೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಲ್ಲಿ 6 ಮಂದಿ ಶಾಸಕರು ರಾಜೀನಾಮೆ ಊರ್ಜಿತವಾಗಿವೆ.
ಬಿಜೆಪಿ ಪಕ್ಷ ಈ ವಿಚಾರವನ್ನು ಇಟ್ಟುಕೊಂಡು ಕಮಲನಾಥ್ ಸರ್ಕಾರ ಬಹುಮತ ಕಳೆದುಕೊಂಡಿದೆ. ಹಾಗಾಗಿ ಮುಖ್ಯಮಂತ್ರಿ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕೆಂದು ಪಟ್ಟು ಹಿಡಿದಿದ್ದು, ರಾಜ್ಯಪಾಲರಿಗೂ ಮನವಿ ಮಾಡಿತ್ತು.
ಆದರೆ ವಿರೋಧ ಪಕ್ಷದ ಒತ್ತಾಯದ ಮೇರೆಗೆ ರಾಜ್ಯಪಾಲ ಆದೇಶದ ಹೊರತಾಗಿ ಸ್ಪೀಕರ್ ವಿಧಾನ ಸಭೆಯನ್ನು ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸುಪ್ರಿಂ ಕೋರ್ಟ್ ಮೊರೆ ಹೋಗಿದೆ. ಮುಖ್ಯಮಂತ್ರಿ ಕಮಲ್ನಾಥ್ ಅವರ ಸರ್ಕಾರ ಸಂಖ್ಯಾ ಬಲ ಕಳೆದುಕೊಂಡಿದ್ದು, ಕೂಡಲೇ ಬಹುಮತ ಸಾಬೀತು ಪಡಿಸಬೇಕು ಎಂದು ಕೋರಿಕೆ ಸಲ್ಲಿಸಿದೆ.
ಇನ್ನು ಬಂಡಾಯ ಶಾಸಕರು ಬೆಂಗಳೂರಿನ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ. ಇಂದು ನಡೆಯುವ ಬಹುಮತ ಯಾಚನೆಯಲ್ಲಿ ಗೈರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಕೊರೋನಾ ಜಾಗೃತಿ ಹಾಡು; ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ