ಮಧ್ಯಪ್ರದೇಶದಲ್ಲಿ ನಾಳೆ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರ ಸೂಚನೆ; ಕಮಲನಾಥ್​ ಸರ್ಕಾರಕ್ಕೆ ಅಗ್ನಿಪರೀಕ್ಷೆ

Mandhya Pradesh Political Crisis: ನಾಳೆಯಿಂದ ಮಧ್ಯಪ್ರದೇಶದಲ್ಲಿ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ನಾಳೆಯ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರು ಸ್ಪೀಕರ್​ಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಕಡೆ ಬೀಡುಬಿಟ್ಟಿದ್ದ ಅತೃಪ್ತ ಶಾಸಕರು ಭೂಪಾಲ್​ನತ್ತ ದೌಡಾಯಿಸುತ್ತಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲನಾಥ್​

ಮಧ್ಯಪ್ರದೇಶ ಸಿಎಂ ಕಮಲನಾಥ್​

  • Share this:
ಭೂಪಾಲ್ (ಮಾ. 15): ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಅವಕಾಶ ನೀಡಬೇಕೆಂದು ಸ್ಪೀಕರ್​ಗೆ ರಾಜ್ಯಪಾಲ ಲಾಲ್​ಜೀ ಟಂಡನ್ ಸೂಚನೆ ನೀಡಿದ್ದಾರೆ. ಅದರಂತೆ, ಸೋಮವಾರ ವಿಶ್ವಾಸಮತ ಯಾಚನೆಗೆ ಅವಕಾಶ ನೀಡುವ ಸಾಧ್ಯತೆ ಇರುವುದರಿಂದ ಮತ್ತೆ ಮಧ್ಯಪ್ರದೇಶದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಶನಿವಾರ ಮಧ್ಯಪ್ರದೇಶದ ರಾಜ್ಯಪಾಲರನ್ನು ಭೇಟಿಯಾಗಿದ್ದ ಬಿಜೆಪಿ ನಾಯಕರು, ಸಿಎಂ ಕಮಲನಾಥ್ ಅವರಿಗೆ ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಲಾಲ್​ಜೀ ಟಂಡನ್ ಅವರ ಬಳಿ ಮನವಿ ಮಾಡಿತ್ತು. ಜೈಪುರದ ರೆಸಾರ್ಟ್​ನಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್ ಶಾಸಕರು ಈಗಾಗಲೇ ಭೂಪಾಲ್​ಗೆ ಮರಳಿದ್ದಾರೆ. ನಾಳೆ ನಡೆಯುವ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಮಧ್ಯಪ್ರದೇಶ ಶಾಸಕರ ಮನವೊಲಿಕೆಗೆ ಬಂದ ಸಚಿವರನ್ನು ವಶಕ್ಕೆ ಪಡೆದ ಪೊಲೀಸರು

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ 228 ಶಾಸಕರಿದ್ದಾರೆ. ಬಹುಮತಕ್ಕೆ 115 ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್​ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್​ನ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಲಿ ಕಾಂಗ್ರೆಸ್​ನಲ್ಲಿ ಕೇವಲ 92 ಶಾಸಕರಿದ್ದಾರೆ. ಹೀಗಾಗಿ, ಒಂದುವೇಳೆ ನಾಳೆ ಸಿಎಂ ಕಮಲನಾಥ್​ಗೆ ವಿಶ್ವಾಸಮತ ಯಾಚನೆಗೆ ಸೂಚನೆ ನೀಡಿದರೆ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಮಧ್ಯಪ್ರದೇಶ ಸರ್ಕಾರ; ಬಹುಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಬಿಜೆಪಿ ಮನವಿ

ಸೋಮವಾರದಿಂದ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರೆಸಾರ್ಟ್​ ಸೇರಿಕೊಂಡಿರುವ ಅತೃಪ್ತ ಶಾಸಕರು ಮತ್ತೆ ಭೂಪಾಲ್​ನತ್ತ ತೆರಳುತ್ತಿದ್ದಾರೆ. ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್​ಶೈರ್​ ಹೋಟೆಲ್​ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್​ನ ಅತೃಪ್ತ ಶಾಸಕರನ್ನು ರಾಜ್ಯದ ಬಿಜೆಪಿ ನಾಯಕರು ರಮಾಡ ಹೋಟೆಲ್​ಗೆ ಸ್ಥಳಾಂತರಿಸಿದ್ದಾರೆ. ಕಳೆದ ಬಾರಿ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನದ ವೇಳೆ ಬಿಜೆಪಿ ನಾಯಕರು ತಮ್ಮ ಶಾಸಕರನ್ನು ಇದೇ ರಮಾಡ ಹೋಟೆಲ್​ನಲ್ಲಿ ಇರಿಸಿದ್ದರು.

ಸ್ಪೀಕರ್ ವಿಶ್ವಾಸಮತ ಯಾಚನೆಗೆ ಆದೇಶ ನೀಡಿದರೆ ನಾವು ಬಹುಮತ ಸಾಬೀತುಪಡಿಸಲು ಸಿದ್ಧರಿದ್ದೇವೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ಮತ್ತೆ ಕಾಂಗ್ರೆಸ್​ಗೆ ಬೆಂಬಲ ನೀಡುವುದು ಅಸಾಧ್ಯ ಎನ್ನಲಾಗಿದೆ.

 
First published: