news18-kannada Updated:January 9, 2021, 12:17 PM IST
ಪ್ರಧಾನಿ ನರೇಂದ್ರ ಮೋದಿ
ನವದೆಹಲಿ(ಜ. 09): ಹೊರ ದೇಶಗಳಲ್ಲಿರುವ ಭಾರತೀಯ ಮೂಲದ ಸಮುದಾಯದವರು ಸಮಾಜದ ಒಳಿತಿಗಾಗಿ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದೇಶ ವ್ಯವಹಾರಗಳ ಸಚಿವಾಲಯ ಆನ್ಲೈನ್ನಲ್ಲಿ ಆಯೋಜಿಸಿದ 16ನೇ ಪ್ರವಾಸಿ ಭಾರತೀಯ ದಿನ ಸಮಾವೇಶವದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜಾಗತಿಕವಾಗಿ ಭಾರತೀಯ ಸಮುದಾಯ ನೀಡಿದ ಕೊಡುಗೆಗಳನ್ನ ಸ್ಮರಿಸಿದರು.
“ಇವತ್ತು ನಾವು ವಿಶ್ವದ ವಿವಿಧ ಮೂಲಗೆಗಳಿಂದ ಇಂಟರ್ನೆಟ್ ಮೂಲಕ ಕನೆಕ್ಟ್ ಆಗಿದ್ದೇವೆ. ಆದರೆ, ನಮ್ಮ ಮನಸು ಯಾವತ್ತೂ ಕೂಡ ಭಾರತ ಮಾತೆಯೊಂದಿಗೆ ಜೋಡಿತಗೊಂಡಿದೆ. ಕಳೆದ ಕೆಲ ತಿಂಗಳಲ್ಲಿ ನಾನು ವಿವಿಧ ದೇಶಗಳ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ಸಾಮಾನ್ಯ ಜನರಿಂದ ಹಿಡಿದು ವೈದ್ಯರವರೆಗೆ ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ದೇಶದ ಸಮಾಜಕ್ಕೆ ನೀಡಿದ ಸೇವೆ ಬಗ್ಗೆ ಆ ಮುಖಂಡರು ನನಗೆ ತಿಳಿಸಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಒಂದು ಸೂರ್ಯ, ಒಂದು ವಿಶ್ವ ಮತ್ತು ಒಂದು ಗ್ರಿಡ್ ಎಂಬ ಭಾರತದ ಮಂತ್ರವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಯಾವುದೇ ಸಂದರ್ಭವನ್ನೂ ಎದುರಿಸುವ ಭಾರತದ ತಾಕತ್ತಿನ ಬಗ್ಗೆ ಯಾರಿಗೂ ಅನುಮಾನ ಇಲ್ಲದಿರುವುದಕ್ಕೆ ಭಾರತೀಯ ಇತಿಹಾಸವೇ ಸಾಕ್ಷಿಯಾಗಿದೆ… ಭಾರತದಲ್ಲಿ ಮೊದಲೆಲ್ಲಾ ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್, ಟೆಸ್ಟಿಂಗ್ ಕಿಟ್ಗಳನ್ನ ಹೊರದೇಶಗಳಿಂದ ತರಿಸಿಕೊಳ್ಳಲಾಗುತ್ತಿತ್ತು. ಇವತ್ತು ದೇಶ ಸ್ವಾವಲಂಬನೆ ಸಾಧಿಸುತ್ತಿದೆ. ಇವತ್ತು ಎರಡು ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ಗಳ ಮೂಲಕ ವಿಶ್ವದ ಮಾನವ ಕುಲವನ್ನು ಉಳಿಸಲು ಭಾರತ ಸಜ್ಜಾಗಿದೆ. ಭಾರತದಲ್ಲಿ ಮತ್ತು ನೀವಿರುವ ದೇಶದಲ್ಲೇ ನೀವು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ನೀಡಿದ್ದೀರಿ. ಪಿಎಂ ಕೇರ್ಸ್ ಫಂಡ್ಗೆ ನೀವು ನೀಡಿದ ಕೊಡುಗೆ ಇವತ್ತು ಭಾರತದಲ್ಲಿ ಆರೋಗ್ಯ ಸೇವೆಯನ್ನ ಬಲಪಡಿಸಿದೆ” ಎಂದು 16ನೇ ಪ್ರವಾಸೀ ಭಾರತೀಯ ದಿನ ಸಮಾವೇಶವನ್ನ ಉದ್ಘಾಟಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಕ್ಕಳ ಸಾವು ಪ್ರಕರಣ; ತನಿಖೆಗೆ ಆದೇಶಿಸಿದ ಸಿಎಂ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ
ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ನಿರ್ಮಾಣಕ್ಕೆ ಕೊಡುಗೆ ನೀಡುವುದು ಈ ಬಾರಿಯ ಪ್ರವಾಸೀ ಭಾರತೀಯ ದಿನ ಸಮಾವೇಶದ ಥೀಮ್ ಆಗಿದೆ. ಉದ್ಘಾಟನೆಗೆ ಮುಂಚಿನ ದಿನಗಳಲ್ಲಿ ಈಗಾಗಲೇ ವಿವಿಧ ಸಮಾವೇಶಗಳೂ ನಡೆದಿವೆ. ಪ್ರಧಾನ ಸಮಾವೇಶದಲ್ಲಿ ಸುರಿನಾಮ್ ದೇಶದ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿ ಅವರು ಮುಖ್ಯ ಅತಿಥಿಯಾಗಿದ್ದು, ಅವರೂ ಭಾಷಣ ಮಾಡಲಿದ್ದಾರೆ. ನಂತರ ಎರಡು ಪೂರ್ಣಾಧಿವೇಶನಗಳು (Plenary Session) ನಡೆಯಲಿವೆ. ವಿದೇಶ ವ್ಯವಹಾರಗಳ ಸಚಿವ ಮತ್ತು ವಾಣಿಜ್ಯ ಉದ್ಯಮ ಸಚಿವರು ಮೊದಲ ಪೂರ್ಣಾಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಎರಡನೇ ಅಧಿವೇಶನದಲ್ಲಿ ಆರೋಗ್ಯ ಸಚಿವ ಹಾಗೂ ವಿದೇಶ ವ್ಯವಹಾರಗಳ ರಾಜ್ಯ ಖಾತೆ ಸಚಿವರು ಕೋವಿಡ್ ನಂತರದ ಸವಾಲಿನ ಬಗ್ಗೆ ಮಾತನಾಡಲಿದ್ದಾರೆ.
ಪ್ರವಾಸೀ ಭಾರತೀಯ ದಿನ ಸಮಾವೇಶದ ಸಮಾರೋಪದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ, 2020-21ರ ಸಾಲಿನ ಪ್ರವಾಸೀ ಭಾರತೀಯ ಸಮ್ಮಾನ್ ಪ್ರಶಸ್ತಿಗಳನ್ನ ಪ್ರಕಟಿಸಲಾಗುತ್ತದೆ.
Published by:
Vijayasarthy SN
First published:
January 9, 2021, 12:17 PM IST