ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಮೇಲೆ ನಡೆದ ದಾಳಿಯ ವಿರುದ್ಧ ತೃಣಮೂಲ ಕಾಂಗ್ರೆಸ್‌ನ ಯುವ ಘಟಕವು ವಿಭಿನ್ನ ಪ್ರತಿಭಟನೆ ನಡೆಸಿದೆ. ಯುವ ಘಟಕದ ಸದಸ್ಯರು ಗಂಗಾ ನದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ನದಿಯ ತನಕ ನಡೆದುಕೊಂಡು ಹೋದ ಕಾರ್ಯಕರ್ತರು ಮೊಣಕಾಲಿನ ತನಕ ನೀರಿನಲ್ಲಿ ನಿಂತು ದಾಳಿ ವಿರುದ್ದ ಸಾಂಕೇತಿಕ ಪ್ರತಿಭಟನೆಯಾಗಿ ಈ ರೀತಿ ಮಾಡುತ್ತಿದ್ದೇವೆ ಎಂದರು. ಅಲ್ಲದೇ ಬಿಜೆಪಿಯ ವಿರುದ್ದ ಹಾಗೂ ದಾಳಿಯನ್ನು ಖಂಡಿಸಿ ಪ್ರತಿನಿತ್ಯ ಪ್ರತಿಭಟಿಸುವುದಾಗಿಯೂ ಹೇಳಿದರು.
ಆದರೆ ಬಿಜೆಪಿ ಪ್ರತಿಭಟನೆಯನ್ನು ಅಣಕಿಸಿ ಹೇಳಿಕೆ ನೀಡಿದೆ. ಬಿಜೆಪಿ ಹೌರಾ ಜಿಲ್ಲಾ ಅಧ್ಯಕ್ಷ ಸುರೋಜಿತ್ ಸಾಹಾ ಮಾಧ್ಯಮಗಳ ಮುಂದೆ ಮಾತನಾಡುತ್ತಾ: "ನಮ್ಮ ನಾಯಕರು ದೆಹಲಿಯಿಂದ ಬಂಗಾಳಕ್ಕೆ ಬಂದಾಗ, ಅವರನ್ನು ಹೊರಗಿನವರು ಎಂದು ಕರೆಯಲಾಯಿತು ಮತ್ತು ದಾಳಿ ಮಾಡಲಾಯಿತು. ಈಗ, ಅವರು ಏನು ಮಾಡುತ್ತಿದ್ದಾರೆಂದು ನೋಡಿ? ಅವರು ಬೇರೆ ರಾಜ್ಯಕ್ಕೆ ಹೋಗುತ್ತಿದ್ದಾರೆ. ಅವರು ಮಾನವ ಹಕ್ಕು ಆಯೋಗದ ಗಮನವನ್ನು ಈ ಮೂಲಕ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲವೂ ಸಂಪೂರ್ಣ ನಾಟಕ, ಬಂಗಾಳದಲ್ಲಿ ನಡೆದಂತೆ ದೀದಿ ಅವರ ಆಟ ಬೇರೆ ಕಡೆ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಟಿಎಂಸಿ ಹೌರಾ ಯುವ ಘಟಕದ ಅಧ್ಯಕ್ಷ ಸುಪ್ರಭಾತ್ ಮಾಷತ್ ಮಾತನಾಡಿ: "ನಾವು ಗಂಗಾ ತಾಯಿಯ ನೀರಿನಲ್ಲಿ ಒಂದು ಗಂಟೆ ಇದ್ದು ಪ್ರತಿಭಟನೆ ನಡೆಸಿದೆವು ಮತ್ತು ನಾವು ಪ್ರತಿದಿನ ಇಲ್ಲಿಗೆ ಬಂದು ಪ್ರತಿಭಟಿಸಲು ಯೋಜಿಸಿದ್ದೇವೆ. ಗಂಗಾ ಮಾತೆ ಅವರನ್ನು ಅಂದರೆ ಬಿಜೆಪಿಯವರನ್ನು ಶಿಕ್ಷಿಸುತ್ತಾನೆ. ಅವರು ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದ್ದಾರೆ. ತಾಯಿಯ ಶಾಪ ತಟ್ಟುತ್ತದೆ’’ ಎಂದಿದ್ದಾರೆ.
ತೃಣಮೂಲ ಕಾಂಗ್ರೆಸ್ ತ್ರಿಪುರಾ, ಬಂಗಾಳ ಮತ್ತು ದೆಹಲಿಯಲ್ಲಿ ಈ ಸಮಸ್ಯೆಯನ್ನು ಜೀವಂತವಾಗಿಡಲು ಬಯಸಿದಂತೆ ಕಾಣುತ್ತಿದೆ. ಕಾನೂನು ಸಚಿವ ಮೊಲಾಯ್ ಘಟಕ್ ತ್ರಿಪುರಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಬೆಂಬಲಿಗರಿಗೆ ಅಲ್ಲಿನ ಪೊಲೀಸರಿಂದ ಬೆದರಿಕೆ ಇದೆ ಮತ್ತು ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಟಿಎಂಸಿ ದೂರುತ್ತಿದೆ.
ಇದನ್ನೂ ಓದಿ: ಭಾರತೀಯರು ಅಬುಧಾಬಿಗೆ ಹೋದರೆ 12 ದಿನ ಹೋಂ ಕ್ವಾರಂಟೈನ್ ಕಡ್ಡಾಯ
ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸುವ ಯೋಜನೆಯನ್ನು ಬಿಜೆಪಿ ಕೂಡ ಹೊಂದಿದೆ ಎಂದು ಹೇಳಲಾಗುತ್ತಿದೆ. ತ್ರಿಪುರಾ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿ ಇದ್ದು, ಅಧಿಕಾರದಲ್ಲಿ ಇರುವ ಬಿಜೆಪಿಯ ವಿರುದ್ದ ಟಿಎಂಸಿ ಈಗಿನಿಂದಲೇ ದಾಳಿ ನಡೆಸಲು ಪ್ರಾರಂಭಿಸಿದೆ ಅಲ್ಲದೇ, ಬಂಗಾಳ ಬಿಟ್ಟು ಹೊರಗೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಕಾಯುತ್ತಿರುವ ಕಾರಣ ಈ ಅವಕಾಶವನ್ನು ಟಿಎಂಸಿ ಕೈ ಬಿಡುವಂತೆ ಕಾಣುತ್ತಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ