ಡಿಎಂಕೆ ಅಣ್ಣತಮ್ಮಂದಿರ ಕಾಳಗ; ಚೆನ್ನೈನಲ್ಲಿ ಅಳಗಿರಿಯ ಬೃಹತ್ ಶಕ್ತಿ ಪ್ರದರ್ಶನ


Updated:September 5, 2018, 2:42 PM IST
ಡಿಎಂಕೆ ಅಣ್ಣತಮ್ಮಂದಿರ ಕಾಳಗ; ಚೆನ್ನೈನಲ್ಲಿ ಅಳಗಿರಿಯ ಬೃಹತ್ ಶಕ್ತಿ ಪ್ರದರ್ಶನ

Updated: September 5, 2018, 2:42 PM IST
- ನ್ಯೂಸ್18 ಕನ್ನಡ

ಚೆನ್ನೈ(ಸೆ. 05): ದಿವಂಗತ ಎಂ. ಕರುಣಾನಿಧಿ ಅವರ ಕುಟುಂಬದೊಳಗಿನ ಬಿರುಕು ಹಿಂದೆಂದಿಗಿಂತಲೂ ತೀವ್ರಗೊಂಡಿದೆ. ಡಿಎಂಕೆ ಪಕ್ಷದ ಅಧಿಕಾರ ಗದ್ದುಗೆಗಾಗಿ ಅಣ್ಣತಮ್ಮಂದಿರ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ. ಕರುಣಾನಿಧಿ ಅವರ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಖಚಿತವಾಗುತ್ತಿರುವಂತೆಯೇ ಹಿರಿಯ ಮಗ ಎಂ.ಕೆ. ಅಳಗಿರಿ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉಚ್ಚಾಟಿತ ಡಿಎಂಕೆ ಮುಖಂಡ ಅಳಗಿರಿ ಅವರು ಪಕ್ಷದ ಗದ್ದುಗೆ ಹಿಡಿಯಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಮರೀನಾ ಬೀಚ್​ನಲ್ಲಿರುವ ಕರುಣಾನಿಧಿ ಅವರ ಸಮಾಧಿಗೆ ತೆರಳಿ ಅಳಗಿರಿ ಅವರು ಗೌರವಾರ್ಪಣೆ ಮಾಡಿದ್ದಾರೆ. ಅದರೆ, ಇದು ಬೇರೆಯದೇ ಉದ್ದೇಶಕ್ಕೆ ಒಂದು ನಿಮಿತ್ತ ಮಾತ್ರವಾಗಿತ್ತು. ಇಂದು 1 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಅಳಗಿರಿಯ ಬೆಂಬಲಿಗರು ಚೆನ್ನೈನಲ್ಲಿ ನೆರೆದಿದ್ದರು. ಇದು ಸ್ಟಾಲಿನ್ ಅಡ್ಡಾದಲ್ಲಿ ಅಳಗಿರಿ ಅವರ ಬೃಹತ್ ಶಕ್ತಿ ಪ್ರದರ್ಶನವೆನಿಸಿದೆ.

ಚೆನ್ನೈನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಶುಕ್ರವಾರ ನಡೆಯಲಿದೆ. ಅಂದು ಕರುಣಾನಿಧಿ ಅವರಿಗೆ ಗೌರವಾರ್ಪಣೆ ನೀಡಲು ಕರೆದಿರುವ ಸಭೆಯಾಗಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಡಿಎಂಕೆಯ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಅಂದು ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಎಂ.ಕೆ. ಅಳಗಿರಿ ಅವರು ಪಕ್ಷದ ಅಧಿಕಾರ ಹಿಡಿಯಲು ಶತಪ್ರಯತ್ನ ನಡೆಸಿದ್ದಾರೆ.

ಅತ್ತ, ಸ್ಟಾಲಿನ್ ಅವರು ತಮ್ಮ ಹಿರಿಯ ಸಹೋದರನ ಪ್ರಯತ್ನಗಳನ್ನ ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅಳಗಿರಿ ಅವರ ಅನೇಕ ಬೆಂಬಲಿಗರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದೆ. ಇವತ್ತು ಚೆನ್ನೈನಲ್ಲಿ ಅಳಗಿರಿ ಅವರನ್ನು ಬರಮಾಡಿಕೊಂಡ ಡಿಎಂಕೆಯ ಸ್ಥಳೀಯ ಮುಖಂಡ ರವಿ ಅವರನ್ನು ಅಮಾನತು ಮಾಡಲಾಯಿತು. ಇದರಿಂದ ಕ್ರುದ್ಧಗೊಂಡ ಅಳಗಿರಿ ಅವರು ತಮ್ಮ ಬೆಂಬಲಿರನ್ನುದ್ದೇಶಿಸಿ ಮಾತನಾಡುತ್ತಾ, “ಇಲ್ಲಿ ಲಕ್ಷಾಂತರ ಜನರು ನೆರೆದಿದ್ದಾರೆ. ತಾಕತ್ತಿದ್ದರೆ ಇವರೆಲ್ಲರನ್ನೂ ಪಕ್ಷದಿಂದ ಉಚ್ಛಾಟಿಸಲಿ,” ಎಂದು ಸಹೋದರನಿಗೆ ಸವಾಲು ಹಾಕಿದ್ದಾರೆ.

ಮೂವತ್ತು ದಿನಗಳ ಹಿಂದೆ ಕರುಣಾನಿಧಿ ಸಾವನ್ನಪ್ಪಿದ ನಂತರ ಅಳಗಿರಿ ಅವರು ಪಕ್ಷಕ್ಕೆ ಮರಳಲು ಪ್ರಯತ್ನಿಸುತ್ತಲೇ ಇದ್ದಾರೆ. ಡಿಎಂಕೆ ಪಕ್ಷ ಹಾಗೂ ಕರುಣಾನಿಧಿ ಅವರ ನಿಜವಾದ ಬೆಂಬಲಿಗರು ಹಾಗೂ ಹಿತೈಷಿಗಳು ತಮ್ಮೊಂದಿಗಿದ್ಧಾರೆ ಎಂದು ಅಳಗಿರಿ ಅವರು ಪದೇಪದೇ ಹೇಳಿಕೊಂಡುಬರುತ್ತಲೇ ಇದ್ದಾರೆ. ಆದರೆ, ಸ್ಟಾಲಿನ್ ಇದಕ್ಕೆ ಆಸ್ಪದ ಕೊಡುತ್ತಿಲ್ಲ. ಈಗ ಅಳಗಿರಿ ಅನಿವಾರ್ಯವಾಗಿ ಚೆನ್ನೈನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗುವ ಮೂಲಕ ಪಕ್ಷಕ್ಕೆ ಖಾರದ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.

ಕುಟುಂಬದೊಳಗೆ ಬಿರುಕು ಯಾಕೆ?
Loading...

ಎಂ.ಕೆ. ಅಳಗಿರಿ ಅವರು ಮಧುರೈ ಸೇರಿದಂತೆ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಮೊದಲ ಯುಪಿಎ ಸರಕಾರದಲ್ಲಿ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಅವರೇ ಡಿಎಂಕೆ ಪಕ್ಷದ ಭವಿಷ್ಯದ ನಾಯಕ ಎಂದೇ ಬಿಂಬಿಸಲಾಗುತ್ತಿತ್ತು. ಕರುಣಾನಿಧಿ ಕೂಡ ತಮ್ಮ ಹಿರಿಯ ಮಗನ ಬೆಳವಣಿಗೆಯಲ್ಲಿ ಪೂರಕ ಪಾತ್ರ ವಹಿಸುತ್ತಿದ್ದರು. ಆದರೆ, ನಾಲ್ಕು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕರುಣಾನಿಧಿ ಕುಟುಂಬದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿತು. ಅಳಗಿರಿ ವಿರುದ್ಧ ತಂದೆಯೇ ಸಿಡಿದೆದಿದ್ದರು.

“ಸ್ಟಾಲಿನ್ ಕಂಡರೆ ಅಳಗಿರಿಗೆ ಅದೇನೋ ಧ್ವೇಷ ಇದ್ದಂತಿದೆ. ಮೂರು ತಿಂಗಳಲ್ಲಿ ಸ್ಟಾಲಿನ್ ಸಾಯುತ್ತಾನೆಂದು ಅಳಗಿರಿ ಹೇಳುತ್ತಾನೆ. ಇಂಥ ಮಾತನ್ನು ಯಾವ ಅಪ್ಪನಾದರೂ ಸಹಿಸಲು ಸಾಧ್ಯವಿಲ್ಲ,” ಎಂದು ಕರುಣಾನಿಧಿ ನೋವು ವ್ಯಕ್ತಪಡಿಸಿದ್ದರು. ಅದಾದ ನಂತರ ಅಳಗಿರಿ ಅವರನ್ನು ಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಯಿತು.

ಅದಕ್ಕೂ ಮುನ್ನ, ಸ್ಟಾಲಿನ್ ಅವರು ಚೆನ್ನೈನಲ್ಲಿ ಪಕ್ಷದ ಬುಡದಿಂದಲೇ ಬೆಳೆದು ಒಂದು ಹಂತಕ್ಕೆ ಬಂದಿದ್ದರು. ಹೀಗಾಗಿ, ಪಕ್ಷದೊಳಗೆ ಅವರ  ಹಿಡಿತ ಚೆನ್ನಾಗಿಯೇ ಇತ್ತು. ಅಳಗಿರಿ ವಿರುದ್ಧ ಕರುಣಾನಿಧಿ ಮುನಿಸಿಕೊಂಡ ಬೆನ್ನಲ್ಲೇ ಸ್ಟಾಲಿನ್​ಗೆ ಸಹಜವಾಗಿಯೇ ಹೆಚ್ಚು ಪ್ರಾಧಾನ್ಯತೆ ಸಿಕ್ಕಿತು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...