ಇಲ್ಲಿ Hijab ಗಲಾಟೆ, ಅಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಸಾಧನೆ! ಸಂಸ್ಕೃತದಲ್ಲಿ ಸಿಕ್ತು ಗೋಲ್ಡ್ ಮೆಡಲ್

ವಿದ್ಯೆಗೆ ಯಾವುದೇ ತಾರತಮ್ಯ ಇಲ್ಲ. ಆದರೆ ಧಾರ್ಮಿಕ ಉಡುಪುಗಳ ವಿಚಾರದಲ್ಲಿ ರಾಜ್ಯದಲ್ಲಿ ವಿದ್ಯಾರ್ಥಿಗಳೇ ಪರಸ್ಪರ ಸಮರಕ್ಕೆ ನಿಂತಿದ್ದಾರೆ. ರಾಜ್ಯದಲ್ಲಿ ಕೇಸರಿ ವರ್ಸಸ್ ಹಿಜಾಬ್ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಸುಪ್ರೀಂಕೋರ್ಟ್ ಅಂಗಳಕ್ಕೂ ತಲುಪಿದ್ದು, ವಿದೇಶದಲ್ಲೂ ಚರ್ಚೆಯಾಗ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಸಂಸ್ಕೃತ ವಿಷಯದಲ್ಲಿ ಸಾಧನೆ ಮಾಡಿದ್ದಾಳೆ. ಹಾಗಿದ್ರೆ ಆ ಸಾಧಕಿ ಯಾರು ಅಂತ ತಿಳಿದುಕೊಳ್ಳಲು ಮುಂದೆ ಓದಿ...

ಸಂಸ್ಕೃತದಲ್ಲಿ ಸಾಧನೆ ಮಾಡಿದ ಮುಸ್ಲಿಂ ವಿದ್ಯಾರ್ಥಿನಿ

ಸಂಸ್ಕೃತದಲ್ಲಿ ಸಾಧನೆ ಮಾಡಿದ ಮುಸ್ಲಿಂ ವಿದ್ಯಾರ್ಥಿನಿ

  • Share this:
ಉತ್ತರ ಪ್ರದೇಶ: ಇಲ್ಲಿ ಕರ್ನಾಟಕದಲ್ಲಿ (Karnataka) ಹಿಜಾಬ್ ಗಲಾಟೆ (Hijab Controversy) ಮತ್ತೆ ಜೋರಾಗುತ್ತಿದೆ. ಯಾವುದೇ ಧಾರ್ಮಿಕ ಉಡುಪುಗಳಿಗೆ (Religious Dress) ಅವಕಾಶ ಇಲ್ಲ ಅಂತ ಹೈಕೋರ್ಟ್ (High Court) ಮಧ್ಯಂತರ ಆದೇಶ ನೀಡಿದೆ. ಆದರೂ ನ್ಯಾಯಪೀಠದ ಆದೇಶ ಧಿಕ್ಕರಿಸಿ ರಾಜ್ಯದ ಹಲವೆಡೆ ಮುಸ್ಲಿಂ (Muslim) ವಿದ್ಯಾರ್ಥಿನಿಯರು (Students) ಹಿಜಾಬ್ ಧರಿಸಿ, ಶಾಲೆಗೆ ಬಂದಿದ್ದಾರೆ. ಈ ಹಿಜಾಬ್ ಗಲಾಟೆ ಬರೀ ರಾಜ್ಯದಲ್ಲಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಲ್ಲೂ ವ್ಯಾಪಿಸಿದೆ. ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್ (Supreme Court) ಅಂಗಳಕ್ಕೂ ಕಾಲಿಟ್ಟಿದೆ. ವಿದೇಶಗಳಲ್ಲೂ ರಾಜ್ಯದ ಹಿಜಾಬ್ ವರ್ಸಸ್ ಕೇಸರಿ ಗಲಾಟೆ ಕುರಿತಂತೆ ಚರ್ಚೆಗಳು ಶುರುವಾಗಿದೆ. ಇಂತಹ ಹೊತ್ತಲ್ಲೇ ಹಿಜಾಬ್, ಕೇಸರಿ ಸಾಲುಗಳ ತಕರಾರಿಗೆ ಹೋಗದ ಕೆಲವು ವಿದ್ಯಾರ್ಥಿಗಳು ಸಾಧನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ(Uttara Pradesh) ಲಕ್ನೋ (Lucknow) ವಿಶ್ವವಿದ್ಯಾಲಯದ (University) ಈ ಮುಸ್ಲಿಂ ವಿದ್ಯಾರ್ಥಿನಿ ಇಂತಹ ಸಾಧಕರ ಸಾಲಿಗೆ ಸೇರುತ್ತಾಳೆ.

ಸಂಸ್ಕೃತದಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಸಾಧನೆ

ಯಾವುದೇ ವಿದ್ಯಾರ್ಥಿ ತನಗೆ ಇಷ್ಟವಾದ ಯಾವುದೇ ವಿಷಯವನ್ನು ಅಭ್ಯಾಸಮಾಡಲು ಮುಕ್ತವಾದ ಅವಕಾಶ ಇದೆ. ಆದರೆ ಸಾಮಾನ್ಯವಾಗಿ ಮುಸ್ಲಿಂ ವಿದ್ಯಾರ್ಥಿಗಳು ಸಂಸ್ಕೃತ ಓದುವುದು ವಿರಳಾತಿವಿರಳ. ಆದ್ರೆ ಉತ್ತರ ಪ್ರದೇಶದ ಲಕ್ನೋ ವಿಶ್ವವಿದ್ಯಾಲಯದ ಮುಸ್ಲಿಂ ವಿದ್ಯಾರ್ಥಿನಿ ಗಜಲಾ ಎಂಬಾಕೆ ಎಂಎ ಪದವಿಯನ್ನು ಸಂಸ್ಕೃತದಲ್ಲಿ ಮುಗಿಸಿದ್ದಾಳೆ. ಅಷ್ಟೇ ಅಲ್ಲದೇ ಸಂಸ್ಕೃತದಲ್ಲಿ ಹೆಚ್ಚಿನ ಅಂಕ ಪಡೆದು, ಚಿನ್ನದ ಪದಕ ಪಡೆದಿದ್ದಾಳೆ.

ಈ ವರ್ಷ ವಿದ್ಯಾರ್ಥಿನಿಗೆ ಪದಕ ಪ್ರದಾನ

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳಿಗೆ ಪದಕ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಪದಕ ವಿತರಣೆಯಾಗಿದ್ದು, ಈ ವಿದ್ಯಾರ್ಥಿನಿಗೆ  ಪ್ರೊ. ಶಶಿ ಶುಕ್ಲಾ ಪದಕಗಳನ್ನು ಪ್ರದಾನ ಮಾಡಿದರು.

ಇದನ್ನೂ ಓದಿ: Hijab ಧರಿಸಿ ಕಲಾಪಕ್ಕೆ ಬಂದ ಶಾಸಕಿ; ಅನುಮತಿ ಸಿಗದೇ ತರಗತಿಯಿಂದ ಹೊರ ಬಂದ ವಿದ್ಯಾರ್ಥಿನಿಯರು

ಈಕೆ ಬಾಯಲ್ಲಿ ಸಂಸ್ಕೃತ ಶ್ಲೋಕಗಳು ಲೀಲಾಜಾಲ!

ಗಜಲಾ  ಲಕ್ನೋ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾಳೆ. ಗಾಯತ್ರಿ ಮಂತ್ರ ಮತ್ತು ಸರಸ್ವತಿ ವಂದನೆಯನ್ನು ಪಠಿಸುತ್ತಾಳೆ.

ನೀವು ಸಂಸ್ಕೃತವನ್ನು ಏಕೆ ಆರಿಸಿದ್ದೀರಿ ಎಂದು ಆಕೆಯನ್ನು ಕೇಳಿದಾಗ ಎಲ್ಲಾ ಭಾಷೆಗಳಲ್ಲಿ, ದೇವರ ಸ್ವಂತ ಭಾಷೆ ಸಂಸ್ಕೃತವು ತಾಯಿಯಾಗಿದೆ. ಇದು ದೈವಿಕ, ಮತ್ತು ಅತ್ಯಂತ ಭಾವಗೀತಾತ್ಮಕವಾಗಿದೆ. ಸಂಸ್ಕೃತದಲ್ಲಿ ಕಾವ್ಯವು ಹೆಚ್ಚು ಮಧುರವಾಗಿದೆ ಎಂದು ಗಜಾಲಾ ಹೇಳುತ್ತಾಳೆ. ಆಕೆ ಸಂಸ್ಕೃತ ಪಠಿಸುತ್ತಾ ಇದ್ದರೆ ಕೇಳಿದವರು ಮೂಕಸ್ತಬ್ಧರಾಗುತ್ತಾರೆ.

ಬಡತನದಲ್ಲಿ ಬೆಳೆದು ಬಂದ ಅಪ್ಪಟ ಪ್ರತಿಭೆ

ಅಂದಹಾಗೆ ಈ ಸಾಧಕ ವಿದ್ಯಾರ್ಥಿನಿ ಗಜಲಾ ತುಂಬಾ ಬಡತನದ ಕುಟುಂಬದಿಂದ ಬಂದವಳು. ಈಕೆಯ ತಂದೆ ದಿನಗೂಲಿ ಕಾರ್ಮಿಕರರಾಗಿದ್ದು, ಈಕೆ 10ನೇ ತರಗತಿಯಲ್ಲಿ ಕಲಿಯುತ್ತಾ ಇರುವಾಗಲೇ ಸಾವನ್ನಪ್ಪಿದ್ದರು.

ಬಳಿಕ ಶಿಕ್ಷಣ ಮುಂದುವರೆಸಲು ತುಂಬಾ ಕಷ್ಟವಾಯಿತು. ಆದರೆ ಆಕೆಯ ಸಹೋದರರಿಬ್ಬರು ಕೂಲಿ ಮಾಡುತ್ತಾ, ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುತ್ತಾ ತಂಗಿಯನ್ನು ಓದಿಸಿದ್ದರು. ಜೊತೆಗೆ ತಾಯಿ ಹಾಗೂ ಸಹೋದರಿ ಕೂಡ ಕೂಲಿ ನಾಲಿ ಮಾಡುತ್ತ, ಗಜಲಾಳನ್ನು ಓದಿಸಿದ್ದರಂತೆ.

5 ಭಾಷೆಗಳಲ್ಲಿ ವಿದ್ಯಾರ್ಥಿನಿ ಸಾಧನೆ

ಈಕೆ ಸಂಸ್ಕೃತವೊಂದೆ ಅಲ್ಲ, 5 ಭಾಷೆಗಳಲ್ಲಿ ಉತ್ತಮ ಜ್ಞಾನ ಹೊಂದಿದ್ದಾಳೆ. ಸಂಸ್ಕೃತದ ಜೊತೆಗೆ ಇಂಗ್ಲಿಷ್, ಹಿಂದಿ, ಉರ್ದು ಹಾಗೂ ಅರೇಬಿಕ್ ಭಾಷೆಯಲ್ಲಿ ಪ್ರವೀಣೆಯಾಗಿದ್ದು, ಐದೂ ಭಾಷೆಗಳಲ್ಲೂ ಲೀಲಾಜಾಲವಾಗಿ ಮಾತನಾಡುತ್ತಾಳೆ.

ಇದನ್ನೂ ಓದಿ: Hijab Row: ದೇಶಾದ್ಯಂತ ಒಂದೇ ರೀತಿಯ ಸಮವಸ್ತ್ರ ಜಾರಿಯಾಗುತ್ತಾ? ಸುಪ್ರೀಂನಲ್ಲಿ ಇಂದು ಅರ್ಜಿ ವಿಚಾರಣೆ

ಸಂಸ್ಕೃತ ಪ್ರಾಧ್ಯಾಪಕಿಯಾಗುವ ಕನಸು

 ಬಾಲ್ಯದಿಂದಲೂ ಸಂಸ್ಕೃತದ ಬಗ್ಗೆ ಒಲವು ಬೆಳೆಸಿಕೊಂಡಿರುವ ಗಜಲಾಳಿಗೆ ಮುಂದೆ ಸಂಸ್ಕೃತದ ಪ್ರಾಧ್ಯಾಪಕಿಯಾಗುವ ಕನಸಿದೆ. ತನ್ನ ಸಾಧನೆಗೆ ತಾಯಿ, ಸಹೋದರರು, ಸಹೋದರಿ ಕಾರಣ ಎನ್ನುತ್ತಾಳೆ ಆಕೆ.
Published by:Annappa Achari
First published: