ಉಗ್ರ ಸಂಘಟನೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಮುಖಂಡ ವೇಲುಪಿಲೈ ಪ್ರಭಾಕರನ್ ಅವರನ್ನು ಶ್ರೀಲಂಕಾ (Sri Lanka) ಸೇನಾಪಡೆ ಹತ್ಯೆಗೈದಿದೆ ಎಂಬ ಸುದ್ದಿ ಸುಮಾರು ಹದಿಮೂರು ವರ್ಷಗಳ ಹಿಂದೆ ಜೋರಾಗಿ ಹಬ್ಬಿತ್ತು. ಸೇನಾಪಡೆಯ ಕಣ್ತಪ್ಪಿಸಿ ಪ್ರಭಾಕರನ್ (Prabhakaran) ಅವರು ತಮ್ಮ ಇಬ್ಬರು ಸಹಚರರೊಂದಿಗೆ ಪಾರಾಗಿಯಾಗುತ್ತಿರುವ ಸಂದರ್ಭದಲ್ಲಿ ಸೇನೆ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ಶ್ರೀಲಂಕಾ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಇನ್ನೂ ಜೀವಂತವಾಗಿದ್ದಾರೆ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್
ಆದರೆ ಪ್ರಸ್ತುತ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಬದುಕಿದ್ದಾರೆ ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ, ಮಾಜಿ ಕಾಂಗ್ರೆಸ್ ನಾಯಕ ಪಜಾ ನೆಡುಮಾರನ್ ಸೋಮವಾರ ಹೇಳಿದ್ದಾರೆ. ಪ್ರಭಾಕರನ್ ಶೀಘ್ರದಲ್ಲೇ ಸಾರ್ವಜನಿಕರ ಎದುರು ಬರಲಿದ್ದು, ಈಳಂ ತಮಿಳು ಜನಾಂಗದ ವಿಮೋಚನೆಗಾಗಿ ಯೋಜನೆಯೊಂದನ್ನು ಘೋಷಿಸಲಿದ್ದಾರೆ ಎಂದು ತಿಳಿಸಿದರು.
ಪ್ರಭಾಕರನ್ ಅವರಿಗೆ ಬೆಂಬಲ ನೀಡುವಂತೆ ಪಿ. ನೆಡುಮಾರನ್ ಕರೆ
ಪ್ರಪಂಚದಾದ್ಯಂತ ಎಲ್ಲಾ ತಮಿಳರು ಒಗ್ಗಟ್ಟಿನಿಂದ ಅವರನ್ನು ಬೆಂಬಲಿಸಬೇಕು ಮತ್ತು ತಮಿಳುನಾಡು ಸರ್ಕಾರ, ಪಕ್ಷಗಳು ಮತ್ತು ತಮಿಳುನಾಡಿನ ಸಾರ್ವಜನಿಕರು ಪ್ರಭಾಕರನ್ ಅವರ ಬೆಂಬಲಕ್ಕೆ ನಿಲ್ಲುವಂತೆ ಪಿ. ನೆಡುಮಾರನ್ ಕರೆ ನೀಡಿದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನೆಡುಮಾರನ್, ಪ್ರಭಾಕರನ್ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು, ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾಗಿ ತಿಳಿಸಿದರು. ಎಲ್‌ಟಿಟಿಇ ನಾಯಕನ ಒಪ್ಪಿಗೆಯೊಂದಿಗೆ ಪ್ರಭಾಕರನ್‌ನಿಂದ ಹೊರಬರುವ ಪ್ರಸ್ತಾಪವನ್ನು ತಾನು ಘೋಷಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: MP Renukacharya: ರೇಣುಕಾಚಾರ್ಯ ಸೋದರ ಮಗನ ಶ್ರದ್ಧಾಂಜಲಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಸಂಕಷ್ಟ
ತಂಜಾವೂರಿನ ಮುಳ್ಳಿವೈಕ್ಕಲ್ ಸ್ಮಾರಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನೆಡುಮಾರನ್ ಈ ಬಗ್ಗೆ ಘೋಷಿಸಿದರು. ತಮಿಳು ಈಳಂ ಕವಿ ಕಾಸಿ ಆನಂದನ್ ಸಹ ಮಾಧ್ಯಮ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು
ಊಹಾಪೋಹಗಳಿಗೆ ತೆರೆ ಎಳೆದ ನೆಡುಮಾರನ್ ಘೋಷಣೆ
'ತಮಿಳು ರಾಷ್ಟ್ರೀಯ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ ಎಂದು ಪ್ರಪಂಚದಾದ್ಯಂತದ ತಮಿಳು ಜನರಿಗೆ ಹೇಳಲು ನನಗೆ ಖುಷಿಯಾಗುತ್ತಿದೆ. ಈ ಸುದ್ದಿಯು ವ್ಯವಸ್ಥಿತವಾಗಿ ನಡೆಯುತ್ತಿದ್ದ ಊಹಾಪೋಹಗಳಿಗೆ ಮುಕ್ತಾಯ ಹಾಡಿದೆ' ಎಂದು ನಾನು ಭಾವಿಸುತ್ತೇನೆ" ಎಂದು ನೆಡುಮಾರನ್ ತಿಳಿಸಿದರು.
ಪ್ರಭಾಕರನ್ ಎಲ್ಲಿದ್ದಾರೆ?
ಪ್ರಭಾಕರನ್ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ, ನೆಡುಮಾರನ್ ಅವರು ಪ್ರಭಾಕರನ್ ಎಲ್ಲಿದ್ದಾರೆ ಮತ್ತು ಅವರು ಸಾರ್ವಜನಿಕರ ಮುಂದೆ ಯಾವಾಗ ಬರುತ್ತಾರೆ ಎಂಬ ಬಗ್ಗೆ ಇತರರಂತೆ ನಾನು ಕೂಡ ಕುತೂಹಲ ಹೊಂದಿದ್ದೇನೆ ಎಂದು ತಿಳಿಸಿದರು.
ಮೇ 18 2009 ರಲ್ಲಿ ಪ್ರಭಾಕರನ್ ಹತ್ಯೆಗೈದಿದ್ದ ಶ್ರೀಲಂಕಾ ಸೇನಾಪಡೆ
ಪ್ರಭಾಕರನ್ ಅವರನ್ನು ಶ್ರೀಲಂಕಾ ಸೇನಾಪಡೆ ಮೇ 18, 2009 ರಲ್ಲಿ ಹತ್ಯೆಗೈದಿತ್ತು ಎಂದು ಒಂಬತ್ತು ವರ್ಷಗಳ ಹಿಂದೆ ಸುದ್ದಿ ಹರಡಿತ್ತು. ಅರಣ್ಯ ಪ್ರದೇಶದಲ್ಲಿ ಸುಮಾರು 200 ಮಂದಿ ಸಹಚರರೊಂದಿಗೆ ಪ್ರಭಾಕರನ್ ಅಡಗಿಕೊಂಡಿದ್ದರು. ಇದನ್ನು ಭೇದಿಸಿದ ಸೇನಾಪಡೆ ಉಗ್ರನನ್ನು ಹತ್ಯೆಗೈದಿತ್ತು. ಇವರ ಜೊತೆಗೆ ಎಲ್ ಟಿಟಿಇಯ ಪ್ರಮುಖ ನಾಲ್ವರಲ್ಲಿ ಬಾಲಸಿಂಘಂ ನಾದೇಶನ್, ಶಿವರತನಮ್ ಪುಲಿದೇವಮ್, ರಮೇಶ್ ಹಾಗೂ ಪ್ರಭಾಕರನ್ ಮಗ ಅಂಥೋನಿ ಚಾರ್ಲ್ಸ್ ಹತರಾಗಿದ್ದರು.
ಪ್ರಭಾಕರನ್ ಸಾವನ್ನು ದೃಢಪಡಿಸಲಾಗಿತ್ತು
ಮೃತ ಪ್ರಭಾಕರನ್‌ನ ಚಿತ್ರಗಳನ್ನು ಬಿಡುಗಡೆ ಮಾಡಿದ ನಂತರವೇ ಪ್ರಭಾಕರನ್ ಸಾವನ್ನು ದೃಢಪಡಿಸಲಾಯಿತು. ಉತ್ತರ ಶ್ರೀಲಂಕಾದ ಕಾಡಿನಲ್ಲಿ ಮುಲ್ಲಿವಾಯಕಲ್ ಅರಣ್ಯದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಚಿತ್ರಗಳನ್ನು ಬಿಡುಗಡೆ ಮಾಡಿದ ನಂತರ, ಪ್ರಭಾಕರ್ ಅವರ ದೇಹವನ್ನು ಮಾಜಿ ಲೆಫ್ಟಿನೆಂಟ್ ಮತ್ತು ಬಂಡಾಯ ಎಲ್‌ಟಿಟಿಇ ನಾಯಕ ಕರುಣಾ ಅಮ್ಮನ್ ಗುರುತಿಸಿದರು. 1991 ರಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಹಿಂದೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಇದೆ ಎಂದು ಆರೋಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ