ಭೋಪಾಲ್: ಭಗವಾನ್ ರಾಮ (Sri Rama) ಮತ್ತು ಹನುಮಂತನ (Hanumantha) ಭಕ್ತಿ ಬಿಜೆಪಿಯ ಏಕಸ್ವಾಮ್ಯವಲ್ಲ. ಇತರರು ಶ್ರೀರಾಮ ಅಥವಾ ಹನುಮಂತನ ಭಕ್ತರಾಗಿರಲು ಸಾಧ್ಯವಿಲ್ಲ ಎಂದು ಬಿಜೆಪಿಯವರು (BJP) ತಪ್ಪು ಕಲ್ಪನೆ ಹೊಂದಿರಬಾರದು ಎಂದು ಬಿಜೆಪಿ ನಾಯಕಿ ಮತ್ತು ಮಧ್ಯಪ್ರದೇಶದ (Madhya Pradesh) ಮಾಜಿ ಮುಖ್ಯಮಂತ್ರಿ ಉಮಾಭಾರತಿ (Former Chief Minister Uma Bharti) ಹೇಳಿದ್ದಾರೆ. ಉಮಾಭಾರತಿ ಅವರ ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ದೇವರುಗಳು ಯಾವುದೋ ಒಂದು ಜಾತಿ ಮತ್ತು ಧರ್ಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ರಾಮ ಮತ್ತು ಹನುಮಂತ ಬಿಜೆಪಿ ಕಾರ್ಯಕರ್ತರಿಗೆ ಸೇರಿದವರಲ್ಲ. ಭೂಮಿ ಮೇಲೆ ಮನುಷ್ಯರು ಹುಟ್ಟುವುದಕ್ಕೂ ಮುನ್ನವೇ, ಬ್ರಿಟಿಷರು ಆಳ್ವಿಕೆ ಪ್ರಾರಂಭಿಸುವುದಕ್ಕೂ ಮುನ್ನವೇ ದೇವರು ಅಸ್ತಿತ್ವದಲ್ಲಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಭಾರತ ಇಬ್ಭಾಗ ಆಗಿರೋದನ್ನಾ ಎಲ್ಲಿ ನೋಡಿದ್ದಾರೆ?
ನಂತರ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ, ಅವರು ಭಾರತ ಇಬ್ಭಾಗ ಆಗಿರುವುದನ್ನು ಎಲ್ಲಿ ನೋಡಿದ್ದಾರೆ? ನಿಜವಾಗಿ ಹೇಳಬೇಕೆಂದರೆ ಆರ್ಟಿಕಲ್ 370 ರದ್ದುಗೊಳಿಸಿದ್ದರಿಂದ ಭಾರತ ಹೆಚ್ಚು ಬಲಗೊಂಡಿತು.
ಕಾಂಗ್ರೆಸ್ ದೇಶ ವಿಭಜನೆಗೆ ಮುಂದಾದಾಗ ಭಾರತ ಒಂದೇ ಒಂದು ಬಾರಿ ಛಿದ್ರವಾಗಿತ್ತು. ಕಾಂಗ್ರೆಸ್ ನಿಜವಾಗಿಯೂ ಭಾರತವನ್ನು ಒಗ್ಗೂಡಿಸಲು ಬಯಸಿದರೆ, ವಿಭಜನೆಯ ಮೊದಲು ಭಾರತದ ಭಾಗವಾಗಿದ್ದ ಪ್ರದೇಶಗಳನ್ನು ಒಂದುಗೂಡಿಸುವ ಬಗ್ಗೆ ಮಾತನಾಡಬೇಕು ಎಂದಿದ್ದಾರೆ.
ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆಗೆ ಉಮಾ ಭಾರತಿ ಬೆಂಬಲ
ಇದೇ ವೇಳೆ ಹಿಂದೂಗಳು ತಮ್ಮ ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಿಕೊಳ್ಳಬೇಕು ಎಂಬ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಿವಾದಾತ್ಮಕ ಹೇಳಿಕೆಗೆ ಉಮಾ ಭಾರತಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಯುಧಗಳನ್ನು ಇರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಹಿಂಸಾತ್ಮಕ ಚಿಂತನೆಗಳನ್ನು ಹೊಂದುವುದು ತಪ್ಪು ಎಂದು ತಿಳಿಸಿದ್ದಾರೆ.
ಪಠಾಣ್ ಚಿತ್ರದ ಆಕ್ಷೇಪಾರ್ಹ ದೃಶ್ಯ ಕೂಡಲೇ ತೆಗೆದು ಹಾಕಿ
ನಂತರ ಇತ್ತೀಚೆಗಷ್ಟೇ ಶಾರುಖ್ ಖಾನ್ ಅಭಿನಯಿಸಿರುವ ಪಠಾಣ್ ಚಿತ್ರ ಭಾರೀ ವಿವಾದವನ್ನುಂಟು ಮಾಡಿದ್ದು, ಈ ಕುರಿತಂತೆ ಸಹ ಉಮಾ ಭಾರತಿ ಪ್ರತಿಕ್ರಿಯಿಸಿದರು. ಕ್ಷೇಪಾರ್ಹ ದೃಶ್ಯಗಳನ್ನು ಬಿಜೆಪಿ ಸರ್ಕಾರದ ಸೆನ್ಸಾರ್ ಮಂಡಳಿ ಕೂಡಲೇ ತೆರವುಗೊಳಿಸಬೇಕು. ಇದರಲ್ಲಿ ರಾಜಕೀಯ ಮಾಡುವುದು ಅಗತ್ಯವಿಲ್ಲ ಎಂದಿದ್ದಾರೆ.
ಯಾವುದೇ ಬಣ್ಣಕ್ಕೆ ಅವಮಾನ ಮಾಡುವುದನ್ನು ಭಾರತ ಸಹಿಸಲ್ಲ
ಯಾರದ್ದೇ ಧಾರ್ಮಿಕ ಭಾವನೆಗಳಿಗೆ ಹಾನಿ ಉಂಟುಮಾಡುವ ಸನ್ನಿವೇಶಗಳನ್ನು ತೆಗೆದುಹಾಕಬೇಕು. ಯಾವುದೇ ಬಣ್ಣಕ್ಕೆ ಅವಮಾನ ಮಾಡುವುದನ್ನು ಭಾರತ ಸಹಿಸುವುದಿಲ್ಲ. ಕೇಸರಿಯು ಭಾರತೀಯ ಸಂಸ್ಕೃತಿಯ ಅಸ್ಮಿತೆ. ಅಂತಹ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ತಕ್ಷಣವೇ ತೆಗೆದುಹಾಕಬೇಕು ಎಂದು ಕಿಡಿಕಾರಿದ್ದಾರೆ.
ಶ್ರೀರಾಮನನ್ನು ರಾಹುಲ್ಗೆ ಹೋಲಿಸೋದು ಸರಿಯಲ್ಲ
ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಕಾಂಗ್ರೆಸ್ನ 'ಭಾರತ್ ಜೋಡೋ ಯಾತ್ರೆ'ಯನ್ನು ಮಹಾಕಾವ್ಯದ ರಾಮಾಯಣಕ್ಕೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಉಮಾ ಭಾರತಿ ಅವರು, ಜಗತ್ತಿನ ದೇವರಾಗಿರುವ ಶ್ರೀರಾಮನನ್ನು ರಾಹುಲ್ ಗಾಂಧಿಗೆ ಹೋಲಿಸುವುದು ಸರಿಯಲ್ಲ. ಸ್ವತಃ ಅವರು ತಮ್ಮನ್ನೇ ಅಪಹಾಸ್ಯ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಯಾವುದೇ ಜೋಡೋ ಯಾತ್ರೆಯ ಅವಶ್ಯಕತೆಯೇ ಇಲ್ಲ.
ಸಲ್ಮಾನ್ ಖುರ್ಷಿದ್ ವಿರುದ್ಧ ಲೇವಡಿ
ವಿಭಜನೆಯು ಕಾಂಗ್ರೆಸ್ನ ಒಳಗೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಲ್ಮಾನ್ ಖುರ್ಷಿದ್ ಅವರನ್ನು ಮಹೆಂಜೋದಾರೋ ನಾಗರೀಕತೆಯಿಂದ ಉತ್ಖನನ ಮಾಡಿದ್ದಾರೇನೋ ಎಂದು ನಾನು ಭಾವಿಸಿದ್ದೆ ಎಂದು ಲೇವಡಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ