HOME » NEWS » National-international » LONDON WITNESS RALLY BY THOUSANDS IN SUPPORT OF INDIAN FARMERS SNVS

ರೈತರ ಹೋರಾಟಕ್ಕೆ ಲಂಡನ್​ನಲ್ಲಿ ಸಾವಿರಾರು ಜನರ ಬೆಂಬಲ; ಸದ್ದು ಮಾಡಿದ ಖಲಿಸ್ತಾನೀ ಹೋರಾಟ

ಲಂಡನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಸಾವಿರಾರು ಜನರು, ಅದರಲ್ಲೂ ಹೆಚ್ಚಾಗಿ ಸಿಖ್ ಸಮುದಾಯದವರು ಕಾರು, ಬೈಕುಗಳಲ್ಲಿ ಬಂದು ಘೋಷಣೆ, ಭಾಷಣ, ಹಾರ್ನ್ಗಳ ಮೂಲಕ ರೈತರ ಮತ್ತು ಖಲಿಸ್ತಾನೀ ಹೋರಾಟದ ಪರ ಪ್ರತಿಭಟನೆ ನಡೆಸಿದರು.

news18
Updated:December 7, 2020, 12:22 PM IST
ರೈತರ ಹೋರಾಟಕ್ಕೆ ಲಂಡನ್​ನಲ್ಲಿ ಸಾವಿರಾರು ಜನರ ಬೆಂಬಲ; ಸದ್ದು ಮಾಡಿದ ಖಲಿಸ್ತಾನೀ ಹೋರಾಟ
ಲಂಡನ್​ನಲ್ಲಿರುವ ಸಿಖ್ಖರು
  • News18
  • Last Updated: December 7, 2020, 12:22 PM IST
  • Share this:
ಲಂಡನ್(ಡಿ. 07): ಅಮೆರಿಕ ಮತ್ತು ಕೆನಡಾದಲ್ಲಿಯಂತೆ ಇಂಗ್ಲೆಂಡ್ ರಾಜಧಾನಿ ಲಂಡನ್​ನಲ್ಲಿ ಭಾರತೀಯ ರೈತರ ಹೋರಾಟಕ್ಕೆ ಬೆಂಬಲ ಮಾರ್ದನಿಸಿತು. ಸಾವಿರಾರು ಜನರು ತಮ್ಮ ತಮ್ಮ ವಾಹನಗಳಲ್ಲಿ ಬಂದು ಘೋಷಣೆ, ಪ್ರತಿಭಟನೆ, ಹಾರ್ನ್​ಗಳ ಸದ್ದಿನ ಮೂಲಕ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು. ಲಂಡನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸುತ್ತಲೂ ತಮ್ಮ ವಾಹನಗಳ ಪೆರೇಡ್ ಮಾಡಿ ಸುತ್ತಲೂ ಟ್ರಾಫಿಕ್ ಜಾಮ್ ಸೃಷ್ಟಿಸಿದಲ್ಲದೆ ಏಕಕಾಲದ ಹಾರ್ನ್ ಮೂಲಕ ಕರ್ಕಶ ಶಬ್ದಗಳನ್ನ ಹೊರಡಿಸಿ ತಮ್ಮ ಆಕ್ರೋಶ ಹೊರಹಾಕಿದರು. ಅಮೆರಿಕ ಮತ್ತು ಕೆನಡಾದಲ್ಲಿ ನಡೆದ ಪ್ರತಿಭಟನೆಗಿಂತಲೂ ತೀವ್ರ ಮಟ್ಟದ ಪ್ರತಿಭಟನೆಗೆ ಲಂಡನ್ ಸಾಕ್ಷಿಯಾಯಿತು.

ಪ್ರತಿಭಟನೆಯಲ್ಲಿ ಸಿಖ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬರ್ಮಿಂಗ್​ಹ್ಯಾಂ, ಡರ್ಬಿ ಮತ್ತಿತರ ನಗರ ಮತ್ತು ಪಟ್ಟಣಗಳಿಂದ ಜನರು ಕಾರು ಮತ್ತು ದ್ವಿಚಕ್ರ ವಾಹನಗಳಿಂದ ಲಂಡನ್​ಗೆ ಆಗಮಿಸಿದ್ದರು. ಹಳದಿ ಬಣ್ಣದ ತ್ರಿಭುಜ ಆಕಾರದ ಸಿಖ್ಖರ ಬಾವುಟಗಳು ಲಂಡನ್ ರಸ್ತೆಗಳಲ್ಲಿ ಗಮನ ಸೆಳೆದವು. ಭಾರತೀಯ ರಾಯಭಾರಿ ಕಚೇರಿ ಎದುರು ಮತ್ತು ಟ್ರಫಾಲ್ಗರ್ ಸ್ಕ್ವಯರ್​ನಲ್ಲಿ ಸಮಾವೇಶ ನಡೆಸಿ ಪ್ರತಿಭಟನಾಕಾರರು ಘೋಷಣೆಗಳನ್ನ ಕೂಗಿದರು. ಖಲಿಸ್ತಾನೀ ಹೋರಾಟದ ಘೋಷಣೆಗಳೂ ಈ ವೇಳೆ ಸದ್ದು ಮಾಡಿದವು. ರೈತರ ಪರವಾದ ಪ್ರತಿಭಟನೆಗಿಂತಲೂ ಖಲಿಸ್ತಾನೀ ಹೋರಾಟದ ಸಮಾವೇಶದಂತೆಯೂ ವಾತಾವರಣ ಭಾಸವಾಗಿತ್ತು. ಖಲಿಸ್ತಾನೀ ಹೋರಾಟದ ಮುಂಚೂಣಿ ನಾಯಕ ಪರಮ್​ಜೀತ್ ಸಿಂಗ್ ಪಮ್ಮಾ ಪ್ರತಿಭಟನಾಕಾರರ ಮಧ್ಯೆ ಬಬ್ಬರ್ ಖಲ್ಸಾ ಟೀ ಶರ್ಟ್ ಧರಿಸಿ ಗಮನ ಸೆಳೆದರು. ಭಾರತೀಯ ರಾಯಭಾರ ಕಚೇರಿಗೆ ನುಗ್ಗಲು ಪ್ರತಿಭಟನಾಕಾರರು ನಡೆಸಿದ ಪ್ರಯತ್ನಗಳನ್ನ ಲಂಡನ್ ಪೊಲೀಸರು ವಿಫಲಗೊಳಿಸಿದರು.

ಇದನ್ನೂ ಓದಿ: Farmers Protest; ಭಾರತದ ರೈತ ಹೋರಾಟದ ಪರವಾಗಿ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿರುವ​ ಸಿಖ್​ ಸಮುದಾಯ!

ಬ್ರಿಟನ್ ದೇಶದಲ್ಲಿ ಹಾರ್ನ್ ಮೂಲಕ ಪ್ರತಿಭಟನೆ ನಡೆಸುವುದು ಅಥವಾ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವುದು ರೂಢಿಗತವಾದ ಪದ್ಧತಿಯಾಗಿದೆ. ಪ್ರತಿಭಟನಾಕಾರರ ಗುಂಪಿನ ಬಳಿ ಸಾಗುವ ಕಾರಿನ ಚಾಲಕ ಹಾರ್ನ್ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಾನೆ. ಆದರೆ, ನಿನ್ನೆ ಭಾನುವಾರ ಸಾವಿರಾರು ಕಾರುಗಳು ಒಂದೇ ಕಡೆ ಜಮಾಯಿಸಿ ಒಟ್ಟಿಗೆ ಹಾರನ್ ಭಾರಿಸಿದ್ದು ವಿಶೇಷ. ಇಂಥ ಭೀಕರ ಕರ್ಕಶ ಶಬ್ದಕ್ಕೆ ಲಂಡನ್ ಸಾಕ್ಷಿಯಾಗಿದ್ದು ಇದೇ ಮೊದಲು.

ಬ್ರಿಟನ್​ನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನ ರೂಪಿಸಲಾಗಿದೆ. ಅಲ್ಲಿ ಪ್ರತಿಭಟನೆಯಲ್ಲಿ ಒಂದೆಡೆ ಆರಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಪ್ರತಿಭಟನಾಕಾರರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ, ಸಾವಿರಾರು ಜನರು ಜಮಾಯಿಸಿದರೂ ಪೊಲೀಸರು ಏನೂ ಮಾಡಲಾಗದೇ ಸುಮ್ಮನೆ ಇರಬೇಕಾಯಿತು.

ಇದನ್ನೂ ಓದಿ: ಕಾನೂನು ಉಲ್ಲಂಘಿಸಿ ಸಣ್ಣ ವರ್ತಕರಿಗೆ ಹಾನಿ ಮಾಡಿದ ಅಮೇಜಾನ್​ಗೆ 1.44 ಲಕ್ಷ ಕೋಟಿ ದಂಡ ವಿಧಿಸಿ: ಸಿಎಐಟಿ ಆಗ್ರಹ

ಎಂಬತ್ತರ ದಶಕದಲ್ಲಿ ತಾರಕ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಖಲಿಸ್ತಾನೀ ಪ್ರತ್ಯೇಕತಾವಾದಿ ಹೋರಾಟ ಇತ್ತೀಚೆಗೆ ಮರುಜೀವ ಪಡೆದುಕೊಂಡಿದೆ. ಪಂಜಾಬ್​ನಲ್ಲಿ ಖಲಿಸ್ತಾನೀ ಹೋರಾಟವನ್ನು ಬಹುತೇಕ ನಿಷ್ಕ್ರಿಯಗೊಳಿಸಲಾಗಿದೆಯಾದರೂ ವಿದೇಶಗಳಲ್ಲಿರುವ ಸಿಖ್ ಸಮುದಾಯದ ಅನೇಕ ಮಂದಿಯಿಂದ ಈಗ ಪ್ರತ್ಯೇಕತಾವಾದಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.
Published by: Vijayasarthy SN
First published: December 7, 2020, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories