ಲಂಡನ್ನ ಖ್ಯಾತ ಟವರ್ ಬ್ರಿಡ್ಜ್ ಪ್ರವೇಶ ದ್ವಾರದಲ್ಲಿ ತಾಂತ್ರಿಕ ದೋಷದ ಕಾರಣ ಸ್ಥಗಿತಗೊಂಡಿದ್ದು ಒಂದೇ ವರ್ಷದಲ್ಲಿ 2ನೇ ಬಾರಿಗೆ ಹೀಗೆ ಸಂಭವಿಸುತ್ತಿದೆ. ಇದರಿಂದಾಗಿ ಥೇಮ್ಸ್ ನದಿ ದಾಟುವ ವಾಹನ ಸಂಚಾರರಿಗೆ ಟ್ರಾಫಿಕ್ ಅಡಚಣೆಯುಂಟಾಗಿದ್ದು ಬೋಟ್ಗಳ ಸಾಗಾಟಕ್ಕೂ ಅವಕಾಶ ನೀಡಿದ್ದ ಸೇತುವೆಯು ಒಮ್ಮೆಲೇ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದೆ ಎಂಬುದಾಗಿ ಲಂಡನ್ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
1976ರಿಂದಲೇ ಸೇತುವೆಯ ಎರಡೂ ಭಾಗಗಳನ್ನು (ಸಮಸನ್ನೆಗಳು) (ಕೌಂಟರ್ವೈಟ್ಗಳನ್ನು ಬಳಸಿ ಮೇಲಕ್ಕೆತ್ತಿ ಮತ್ತು ಕೆಳಕ್ಕೆ ಇಳಿಸುವ ವಿಭಾಗ) ತೈಲ ಹಾಗೂ ವಿದ್ಯುತ್ ಚಾಲಿತ ಎಂಜಿನ್ಗಳಿಂದ ನಿರ್ವಹಿಸಲಾಗುತ್ತಿದೆ. 19 ನೇ ಶತಮಾನದ ಹಿಂದೆ ಉಗಿ ಚಾಲಿತ ಯಂತ್ರಗಳನ್ನು ಬಳಸಲಾಗುತ್ತಿತ್ತು. ತಾಂತ್ರಿಕ ಸಮಸ್ಯೆಗಳಿಂದಾಗಿ ಟವರ್ ಬ್ರಿಡ್ಜ್ ಪ್ರಸ್ತುತ ಮೇಲಕ್ಕೆ ಎತ್ತಿರುವ ಸ್ಥಿತಿಯಲ್ಲಿ ಸಿಲುಕಿಕೊಂಡಿದೆ ಎಂದು ಲಂಡನ್ ಸಿಟಿ ಕಾರ್ಪೊರೇಶನ್ ವಕ್ತಾರರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಮಸ್ಯೆಯನ್ನು ಶೀಘ್ರದಲ್ಲಿಯೇ ನಾವು ಪರಿಹರಿಸಲಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.
ಸೇತುವೆ ಈ ರೀತಿ ಸಿಲುಕಿಕೊಂಡಿರುವುದು ವರ್ಷದಲ್ಲಿ ಇದು ಎರಡನೆಯ ಬಾರಿಯಾಗಿದೆ ಎಂಬುದಾಗಿ ಕಾರ್ಪೊರೇಶನ್ ವಕ್ತಾರರು ತಿಳಿಸಿದ್ದು ಆಗಸ್ಟ್ 2020ರಲ್ಲಿ ಸೇತುವೆಯ ತೋಳುಗಳು ತೆರೆದ ಸ್ಥಿತಿಯಲ್ಲಿ ಸಿಲುಕಿಕೊಂಡು 24 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಸಿತ್ತು ಎಂಬುದಾಗಿ ತಿಳಿಸಿದ್ದಾರೆ.
ಸೇತುವೆ ತೆರೆದ ಸ್ಥಿತಿಯಲ್ಲಿ ಇದ್ದಂತಹ ಭಂಗಿಯ ಫೋಟೋಗಳನ್ನು ಆ ಸಮಯದಲ್ಲಿ ಹೆಚ್ಚಿನ ಮಾಧ್ಯಮಗಳು ಸೆರೆಹಿಡಿದಿದ್ದವು. ಸೇತುವೆಯ ಭಾಗಗಳು ಇನ್ನೇನು ಕೆಳಕ್ಕೆ ಬೀಳಲಿವೆ ಎಂಬ ರೀತಿಯಲ್ಲಿ ಚಿತ್ರಗಳು ಭಯಾನಕವಾಗಿದ್ದವು. ಸೇತುವೆಯ ಎರಡೂ ಭಾಗಗಳು ಮೇಲ್ಮುಖವಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಸ್ಥಗಿತಗೊಂಡಿದ್ದವು. ಇದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಲಂಡನ್ ಸೇತುವೆ ಕೆಳಕ್ಕೆ ಬೀಳಲಿದೆ ಎಂಬ ಮಕ್ಕಳ ಹಾಡಿನ ಅದೇ ಧಾಟಿಯಲ್ಲಿ ನೆಟ್ಟಿಗರು ಸೇತುವೆಯ ಈ ಸ್ಥಿತಿ ಸಾಮಾಜಿಕ ತಾಣದಲ್ಲಿ ಕಮೆಂಟ್ಗಳ ಮೂಲಕ ಹಂಚಿಕೊಂಡು ವೈರಲ್ ಮಾಡಿದ್ದರು.
ಟವರ್ ಬ್ರಿಡ್ಜ್ 244 ಮೀಟರ್ ಉದ್ದವಿದ್ದು ಇದರ ಗೋಪುರವು 65 ಮೀಟರ್ ಎತ್ತರ ಹೊಂದಿದೆ. ಈ ಸೇತುವೆಯ ನಿರ್ಮಾಣವನ್ನು 1886 ಹಾಗೂ 1894ರ ನಡುವೆ ಮಾಡಲಾಯಿತು. ಈ ಸೇತುವೆ ಥೇಮ್ಸ್ ನದಿಯ ಮೇಲ್ಭಾಗದಲ್ಲಿದ್ದು ಲಂಡನ್ ನಗರ ಹಾಗೂ ಸೌತ್ ವಾರ್ಕ್ ಸಂಪರ್ಕಿಸುತ್ತದೆ. ಸೇತುವೆಯ ವಿಶೇಷವೆಂದರೆ ಎರಡು ಭಾಗಗಳನ್ನಾಗಿ (ಸೇತುವೆಯ ಬಾಹುಗಳು) 83 ಡಿಗ್ರಿಗಳಷ್ಟು ಮೇಲಕ್ಕೇರಿಸಿ ನದಿಯಲ್ಲಿ ಹಡಗು, ದೋಣಿ ಇತ್ಯಾದಿ ಜಲಸಾರಿಗೆ ವಾಹನಗಳನ್ನು ಸಂಚರಿಸಲು ಅವಕಾಶ ಮಾಡಿಕೊಡಬಹುದು.
ಇದು ಲಂಡನ್ ನಗರದ ಹೆಗ್ಗುರುತು ಎಂಬ ಅಂಶದಲ್ಲಿ ಸಂದೇಹವೇ ಇಲ್ಲ. ಆದರೆ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕುರಿತು ಹಲವಾರು ಟೀಕಾಕಾರರು ವ್ಯಂಗ್ಯ ಹಾಗೂ ಕುಹಕದ ಮಾತುಗಳನ್ನಾಡಿದ್ದಾರೆ. ಇದೊಂದು ಅನಗತ್ಯ ಆಡಂಬರದ ಸಂಕೇತ ಎಂಬುದಾಗಿ ಬಣ್ಣಿಸಿದ್ದಾರೆ. ಸಂಜೆಯ ಹೊತ್ತಿನಲ್ಲಿ ಲಂಡನ್ ನಗರವೇ ವಿದ್ಯುತ್ ದೀಪಗಳಿಂದ ಝಗಮಗಿಸುವ ಸಮಯದಲ್ಲಿ ಟವರ್ ಬ್ರಿಡ್ಜ್ ಕೂಡ ಕಣ್ಣಿಗೆ ಆಹ್ಲಾದಮಯವಾದ ನೋಟವನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ