ನವದೆಹಲಿ: ದೆಹಲಿಯಲ್ಲಿರುವ (New Delhi) ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (Enforcement Directorate) ಪ್ರಧಾನ ಕಚೇರಿಯ ಎಲ್ಲಾ ಲಾಕ್‌ಅಪ್‌ಗಳನ್ನು (Lockups) ಬಂಧಿತ ಆರೋಪಿಗಳು (Arrested Accused) ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಇದೀಗ ಹೊಸದಾಗಿ ಬಂಧಿತ ಆರೋಪಿಗಳನ್ನು ಇರಿಸಿಕೊಳ್ಳಲು ಜಾಗವಿಲ್ಲ. ಹೊಸ ಆರೋಪಿಗಳನ್ನು ಕಸ್ಟಡಿಯಲ್ಲಿಟ್ಟು ವಿಚಾರಣೆ ಮಾಡಲು ಇಡಿ ಕೂಡ ಲಾಕಪ್‌ಗಳು ಖಾಲಿಯಾಗಲು ಕಾಯುತ್ತಿದೆ. ಇದೇ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪುತ್ರಿ ಕವಿತಾ (K.Kavitha) ಅವರನ್ನು ವಿಚಾರಣೆ ಬಳಿಕ ಬಂಧಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು.
ಮಾರ್ಚ್ 16ರಂದು ನಡೆದ ವಿಚಾರಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸ್ವತಃ ಕೆ.ಕವಿತಾ ನಿರಾಕರಿಸಿ ಕೆಲ ದಾಖಲೆಗಳೊಂದಿಗೆ ಕೇಂದ್ರ ಕಚೇರಿಗೆ ತಮ್ಮ ವಕೀಲರನ್ನು ಕಳುಹಿಸಿ ಈ ಊಹಾಪೋಹಕ್ಕೆ ತೆರೆ ಎಳೆದಿದ್ದರು. ಆದರೂ ಕವಿತಾರನ್ನು ಬಂಧಿಸಿದರೂ ಅವರನ್ನು ಎಲ್ಲಿ ಇರಿಸಲಾಗುತ್ತದೆ ಎಂಬುದು ಕೂಡ ಚರ್ಚೆಯಾಗಿತ್ತು. ಏಕೆಂದರೆ ಎಲ್ಲಾ ನಾಲ್ಕು ಲಾಕಪ್‌ಗಳು ಭರ್ತಿಯಾಗಿದ್ದು, ಮುಂದಿನ ವಾರದಲ್ಲಿ ಖಾಲಿಯಾಗುವ ಸಾಧ್ಯತೆಯಿದೆ.
ದೇಶದ ಅತಿದೊಡ್ಡ ಏಜೆನ್ಸಿಯಾಗಿರುವ ಇಡಿ
ಇಡಿ ತನಿಖಾ ಸಂಸ್ಥೆ ದೇಶಾದ್ಯಂತ ಭ್ರಷ್ಟಾಚಾರಿಗಳ ಪಾಲಿಗೆ ಸಿಂಹಸ್ವಪ್ನವಾಗುತ್ತಿದೆ. ಏಕೆಂದರೆ ಕಳೆದ ಕೆಲವು ವರ್ಷಗಳಲ್ಲಿ, ಇಡಿ ತನಿಖೆ, ಆರೋಪಿಗಳ ಬಂಧನ , ಕಸ್ಟಡಿ ವಿಚಾರಣೆ ಸೇರಿದಂತೆ ನಡೆಸುತ್ತಿರುವ ದಾಳಿಗಳು ಹಲವು ಪಟ್ಟು ಹೆಚ್ಚಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಳೆದ ವರ್ಷ ಚಿಕ್ಕದಾಗಿದ್ದ ತನ್ನ ಪ್ರಧಾನ ಕಚೇರಿಯನ್ನ ಬದಲಾಯಿಸಿದೆ. ಅಂದರೆ ನವದೆಹಲಿ ಜಿಲ್ಲೆಯ ಖಾನ್ ಮಾರ್ಕೆಟ್ ಕಟ್ಟಡವನ್ನು ಬಿಟ್ಟು, ಇಡಿ ಪ್ರಧಾನ ಕಚೇರಿಯನ್ನು ಜನಪಥ್‌ನಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದೆ.
ಇದನ್ನೂ ಓದಿ: Manish Sisodia Arrest: ದೆಹಲಿ ಡಿಸಿಎಂಗೆ ‘ಮದ್ಯ’ದ ಕುತ್ತು, ಸಿಬಿಐನಿಂದ ಮನೀಶ್ ಸಿಸೋಡಿಯಾ ಅರೆಸ್ಟ್
ಈ ಹೊಸ ಕಟ್ಟಡದಲ್ಲಿ ನಾಲ್ಕು ಲಾಕಪ್‌ಗಳನ್ನು ಮಾಡಲಾಗಿದೆ. ಇದರಲ್ಲಿ ಬಂಧಿತ ಆರೋಪಿಗಳನ್ನು ಇರಿಸಿಕೊಂಡು ನಂತರ ಹಗಲಿನಲ್ಲಿ ವಿಚಾರಣೆ ನಡೆಸುತ್ತಾರೆ. ಇತ್ತೀಚಿನ ಪರಿಸ್ಥಿತಿ ಏನಪ್ಪಾ ಅಂದ್ರೆ, ಇಡಿ ಹೆಡ್ ಕ್ವಾರ್ಟರ್ಸ್ ಅಡಿಯಲ್ಲಿರುವ ನಾಲ್ಕೂ ಲಾಕಪ್ ಗಳು ಭರ್ತಿಯಾಗಿವೆ. ಮುಂದಿನ ವಾರ ಇಡಿ ಬೇರೆ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇರುವುದರಿಂದ ಕೆಲವು ಬಂಧಿತರಿಗೆ ಬಿಡುಗಡೆ ಭಾಗ್ಯ ಸಿಗಬಹುದು ಎನ್ನಲಾಗಿದೆ.
ಲಾಕಪ್ಗಳಲ್ಲಿ ಉನ್ನತ ರಾಜಕಾರಣಿಗಳು
ಪ್ರಸ್ತುತ ಇಡಿ ಕಚೇರಿಯಲ್ಲಿರುವ ನಾಲ್ಕು ಲಾಕಪ್ಗಳಲ್ಲಿ ಪ್ರಸಿದ್ಧ ಹಾಗೂ ಉನ್ನತ ರಾಜಕಾರಣಿಗಳು ಇದ್ದಾರೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಟಿಎಂಸಿ ಪಕ್ಷದ ಹಿರಿಯ ನಾಯಕ ಅನುಬ್ರತಾ ಮಂಡಲ್ , ದೆಹಲಿ ಅಬಕಾರಿ ನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಸೇರಿದಂತೆ ಹಲವು ಉನ್ನತ ವ್ಯಕ್ತಿಗಳನ್ನು ಇಡಿ ಬಂಧಿಸಿದೆ. ಇಡಿ ಪ್ರಧಾನ ಕಛೇರಿಯಲ್ಲಿದೆ. ಇದಲ್ಲದೆ, ಪಶ್ಚಿಮ ಬಂಗಾಳದ ನಿವಾಸಿ ಮತ್ತು ಟಿಎಂಸಿ ನಾಯಕ ಅನುಬ್ರತಾ ಮಂಡಲ್ ಅವರ ಚಾರ್ಟರ್ಡ್ ಅಕೌಂಟೆಂಟ್, ಮನೀಶ್ ಕೊಠಾರಿ ಅವರನ್ನು ಸಹ ಇಲ್ಲಿಯೇ ಇರಿಸಲಾಗಿದೆ.
ಬಂಧಿತರು ಮಾತನಾಡುವ ಹಾಗಿಲ್ಲ
ಇಡಿ ವಶದಲ್ಲಿರುವ ಈ ಆರೋಪಿಗಳನ್ನು ಪ್ರತ್ಯೇಕ ಲಾಕ್‌ಅಪ್‌ಗಳಲ್ಲಿ ಇರಿಸಲಾಗಿದ್ದು, ಇವರು ಯಾರು ಪರಸ್ಪರ ಮಾತುಕತೆ ನಡೆಸುವಂತಿಲ್ಲ. ಆದರೆ, ಈ ಹಿಂದೆ ಹಳೆಯ ಇಡಿ ಕೇಂದ್ರ ಕಚೇರಿಯಲ್ಲಿ ಲಾಕಪ್ ವ್ಯವಸ್ಥೆ ಇರಲಿಲ್ಲ, ಹೀಗಾಗಿ ದಿನವಿಡೀ ವಿಚಾರಣೆ ನಡೆಸಿದ ನಂತರ ಆರೋಪಿಯನ್ನು ರಾತ್ರಿ ಸ್ಥಳೀಯ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗುತ್ತಿತ್ತು. ನಂತರ ಬೆಳಿಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಹೆಚ್ಚಿನ ವಿಚಾರಣೆಗಾಗಿ ಇಡಿ ಪ್ರಧಾನ ಕಚೇರಿಗೆ ಕರೆತರುತ್ತಿದ್ದರು. ಇದೀಗ ಇ.ಡಿ ಪ್ರಧಾನ ಕಚೇರಿಯಲ್ಲಿ ಲಾಕಪ್‌ಗಳನ್ನು ನಿರ್ಮಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ನಂತರ ಇಡಿ ಕೇಂದ್ರ ಕಚೇರಿಯ ಲಾಕ್‌ಅಪ್‌ನಲ್ಲಿ ಇರಿಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ