ಪಾಟ್ನಾ(ಅ. 04): ಬಿಹಾರದಲ್ಲಿ ವಿಪಕ್ಷಗಳು ಒಗ್ಗಟ್ಟು ತೋರಿ ಸರ್ವಸಮ್ಮತ ರೀತಿಯಲ್ಲಿ ಸೀಟು ಹಂಚಿಕೆ ಮಾಡಿಕೊಂಡಿರುವಂತೆಯೇ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದಲ್ಲಿ ದೊಡ್ಡ ಬಿರುಕು ಮೂಡಿರುವುದು ಸ್ಪಷ್ಟಗೊಂಡಿದೆ. ಜೆಡಿಯು ಮತ್ತು ಎಲ್ಜೆಪಿ ನಡುವಿನ ಜಗಳ ಎನ್ಡಿಎ ಪಾಲಿಗೆ ಮುಳುವಾಗುವಂತೆ ತೋರುತ್ತಿದೆ. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದಿಂದ ಎಲ್ಜೆಪಿ ಹೊರಬರುವುದು ಬಹುತೇಕ ನಿಶ್ಚಿತವೆನಿಸಿದೆ. ಚುನಾವಣೆಯಲ್ಲಿ ಜೆಡಿಯು ಜೊತೆ ತಾನು ಸೇರುವುದಿಲ್ಲ ಎಂದು ಲೋಕ ಜನಶಕ್ತಿ ಪಕ್ಷ ಹೇಳಿದೆ. ನಿತೀಶ್ ಕುಮಾರ್ ನಾಯಕತ್ವದಲ್ಲಿ ಸ್ಪರ್ಧಿಸಲು ಲೋಕಜನಶಕ್ತಿ ಪಕ್ಷಕ್ಕೆ ಇಚ್ಛೆ ಇಲ್ಲ ಎಂದು ಆ ಪಕ್ಷದ ಮೂಲಗಳು ಹೇಳುತ್ತಿವೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್ಡಿಎ ಮೈತ್ರಿಕೂಟಕ್ಕೆ ನಾವು ಬದ್ಧವಾಗಿರುತ್ತೇವೆ. ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ನಡೆದ ಎಲ್ಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ, ಸಿಎಂ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಸ್ಪರ್ಧಿಸಲಾಗುವುದು ಎಂದು ಬಿಜೆಪಿ ವರಿಷ್ಠರು ಘೋಷಿಸಿ ಆಗಿದೆ. ಈ ಹಂತದಲ್ಲಿ ಎಲ್ಜೆಪಿ ಬೇರೆಯೇ ದಿಕ್ಕು ಹಿಡಿದಿರುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಹೈದರಾಬಾದ್ ಏರ್ಪೋರ್ಟ್ನಲ್ಲಿ 25 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನ ವಶಕ್ಕೆ
ಮೂರು ದಿನಗಳ ಹಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರನ್ನ ಭೇಟಿ ಮಾಡಿ ಸೀಟು ಹಂಚಿಕೆ ವಿಚಾರ ಚರ್ಚಿಸಿದ್ದರು. ಆ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಇರುವ ಮುನಿಸನ್ನ ಹೊರಹಾಕಿದ್ದಾರೆ. ಅಲ್ಲದೇ, 143 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಪಕ್ಷದೊಳಗೆ ಏಳುತ್ತಿದೆ ಎಂಬ ಸಂಗತಿಯನ್ನೂ ಪಾಸ್ವಾನ್ ತಿಳಿಸಿದ್ದರೆನ್ನಲಾಗಿದೆ.
ಕಳೆದ ಬಾರಿ, 2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಎನ್ಡಿಎಗೆ ವಿರುದ್ಧವಾಗಿ ಸ್ಪರ್ಧಿಸಿ ಜಯಭೇರಿ ಭಾರಿಸಿತ್ತು. ಬಿಜೆಪಿ ಜೊತೆ ಇದ್ದ ಎಲ್ಜೆಪಿ 42 ಸ್ಥಾನಗಳ ಪೈಕಿ ಎರಡರಲ್ಲಿ ಮಾತ್ರ ಗೆಲ್ಲಲು ಶಕ್ಯವಾಗಿತ್ತು. ಆಗಿನಿಂದಲೂ ಜೆಡಿಯು ಜೊತೆ ಎಲ್ಜೆಪಿ ಸಂಬಂಧ ಅಲುಗಾಟದಲ್ಲಿಯೇ ಇದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ವಿಪಕ್ಷಗಳ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ; ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ
ಈಗ ಬಿಹಾರದದಲ್ಲಿ ತಮ್ಮ ಎನ್ಡಿಎ ಮಿತ್ರಪಕ್ಷಗಳ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನ ಶಮನಗೊಳಿಸಲು ಜೆ.ಪಿ. ನಡ್ಡಾ ಜೊತೆ ಅಮಿತ್ ಶಾ ಕೂಡ ಅಂಗಳಕ್ಕೆ ಇಳಿದಿರುವುದನ್ನು ನೋಡಿದರೆ ಈ ಬೆಳವಣಿಗೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಂತೆ ಇದೆ. ಇಂದು ಬಿಹಾರ ವಿಧಾನಸಭಾ ಚುನಾವಣೆಗೆ ಎನ್ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಅತ್ತ, ಬಿಹಾರದ ವಿಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡಿವೆ. ಆರ್ಜೆಡಿ ನೇತೃತ್ವದಲ್ಲಿ ಕಾಂಗ್ರೆಸ್, ಎಡಪಕ್ಷಗಳು ಮಹಾಮೈತ್ರಿ ಮಾಡಿಕೊಂಡಿವೆ. ಆರ್ಜೆಡಿಯ ತೇಜಸ್ವಿ ಯಾದವ್ ಅವರನ್ನ ಸಿಎಂ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ