ಮುಂಬೈ: ನಿಯಮ ಉಲ್ಲಂಘನೆ ಮಾಡಿದ ಮಹಾರಾಷ್ಟ್ರದ (Maharashtra) ಆರು ಕೆಮ್ಮಿನ ಸಿರಪ್ (Cough Syrup) ತಯಾರಕ ಕಂಪನಿಗಳ ಪರವಾನಗಿಯನ್ನು (Licenses) ಸರ್ಕಾರ ಅಮಾನತುಗೊಳಿಸಿದೆ ಎಂದು ಸಚಿವ ಸಂಜಯ್ ರಾಥೋಡ್ (Sanjay Rathod) ಶುಕ್ರವಾರ ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷದ (BJP) ಶಾಸಕ ಆಶಿಶ್ ಶೇಲಾರ್ ( Ashish Shelar) ಮತ್ತು ಇತರರ ಪ್ರಶ್ನೆಗೆ ಉತ್ತರಿಸುವ ವೇಳೆ ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಅವರು ವಿಧಾನಸಭೆಯಲ್ಲಿ ಈ ಮಾಹಿತಿ ನೀಡಿದರು. ಆರು ಕಂಪನಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದು, ಅವುಗಳಲ್ಲಿ ನಾಲ್ಕಕ್ಕೆ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕ ಕಂಪನಿಗಳ ಪೈಕಿ 84 ಕಂಪನಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರವು ತನಿಖೆಯನ್ನು ಪ್ರಾರಂಭಿಸಿದೆ ಎಂದು ರಾಥೋಡ್ ಹೇಳಿದರು. ಜೊತೆಗೆ ನಿಯಮಗಳ ಉಲ್ಲಂಘನೆಗಾಗಿ 17 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು
ಉತ್ತರ ಪ್ರದೇಶದ ನೋಯ್ಡಾ ಮೂಲದ ಸಂಸ್ಥೆಯೊಂದು ತಯಾರಿಸಿದ ಕೆಮ್ಮಿನ ಸಿರಪ್ ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಗಿತ್ತು. ಈ ಆರೋಪದ ಬೆನ್ನಲ್ಲೇ ಸಂಸ್ಥೆಯ ಮೂವರು ಉದ್ಯೋಗಿಗಳನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಭಾರತದಿಂದ ಆಮದು ಮಾಡಿಕೊಳ್ಳಲಾದ ಕೆಮ್ಮು ಸಿರಪ್‌ಗಳಿಂದಾಗಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದರು. ಈ ವಿಚಾರವನ್ನು ಶಾಸಕ ಶೇಲಾರ್ ಉಲ್ಲೇಖಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ, ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಕಂಪನಿ ಹರಿಯಾಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಯಾವುದೇ ಉತ್ಪಾದನಾ ಘಟಕವನ್ನು ಹೊಂದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:Health Tips: ಮಕ್ಕಳ ಕೆಮ್ಮು ಕಡಿಮೆಯಾಗ್ತಿಲ್ವಾ? ಇಲ್ಲಿದೆ ಸಿಂಪಲ್ ಮನೆಮದ್ದು
ವಿದೇಶಕ್ಕೆ 514 ಸಂಸ್ಥೆಗಳಿಂದ ಔಷಧ ರಪ್ತು
ಶೇ 20 ರಷ್ಟು ತಯಾರಕರು ನಿಯಮಗಳ ಉಲ್ಲಂಘನೆಯ ಕಾರಣದಿಂದ ದಾಳಿಗಳನ್ನು ಎದುರಿಸಿದ್ದಾರೆ ಎಂದಾದರೆ, ಅವರು ಜನರ ಜೀವನದ ಜೊತೆ ಚೆಲ್ಲಾಟವಾಡುವಂತಿದೆ. ಹಾಗಾಗಿ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸಭಾಧ್ಯಕ್ಷ ಸಂಜಯ್ ಶಿರ್ಸತ್ ಹೇಳಿದರು.
ಈ ವೇಳೆ ಸಂಜಯ್ ರಾಥೋಡ್ ಅವರು ರಾಜ್ಯದಲ್ಲಿ 996 ಅಲೋಪತಿ ಔಷಧ ತಯಾರಕ ಸಂಸ್ಥೆಗಳಿದ್ದು, ಇವುಗಳಲ್ಲಿ 514 ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತವೆ ಎಂದು ಮಾಹಿತಿ ನೀಡಿದರು.
ಉಜ್ಬೇಕಿಸ್ತಾನದಲ್ಲಿ ಸಿರಪ್ ಕುಡಿದು ಮಕ್ಕಳು ಸಾವು, ಮೂವರ ಬಂಧನ
ಭಾರತದ ಔಷಧೀಯ ಸಂಸ್ಥೆ ಮರಿಯನ್ ಬಯೋಟೆಕ್ ತಯಾರಿಸುವ ಕೆಮ್ಮಿನ ಸಿರಪ್ ಸೇವಿಸಿ ಉಜ್ಬೇಕಿಸ್ತಾನದ ಹಲವು ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧಿ ಮಾರಾಟ ಮಾಡುತ್ತಿದ್ದ ಮೂವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಅತುಲ್ ರಾವತ್, ತುಹಿನ್ ಭಟ್ಟಾಚಾರ್ಯ ಮತ್ತು ಮೂಲ್ ಸಿಂಗ್ ಎಂಬುವವರನ್ನು ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬಂಧಿಸಲಾಗಿದೆ. 1940ರ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆಕ್ಟ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗೌತಮ ಬುದ್ಧ ನಗರ 3ನೇ ಹಂತದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18 ಮಕ್ಕಳ ನಿಧನದ ನಂತರ, ಮರಿಯನ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ಅನ್ನು ಮಕ್ಕಳಿಗೆ ನೀಡದಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ