ನನ್ನ ಮಗನ ಗಲ್ಲಿಗೇರಿಸಿ, ಬೆಂಕಿ ಹಚ್ಚಿ ಸಾಯಿಸಿ; ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವನ ತಾಯಿಯ ಆಕ್ರೋಶದ ನುಡಿ

ನನಗೂ ಒಬ್ಬಳು ಮಗಳಿದ್ದಾಳೆ. ಹೆಣ್ಣು ಹೆತ್ತವರ ಸಂಕಟ ಏನೆಂದು ನಾನೂ ಅನುಭವಿಸಿದ್ದೇನೆ. ಒಂದುವೇಳೆ ಈಗ ನನ್ನ ಮಗ ಮಾಡಿದ್ದೇ ಸರಿ ಎಂದು ನಾನು ಸಮರ್ಥಿಸಿಕೊಂಡರೆ ಜೀವನಪರ್ಯಂತ ಆ ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಲೇ ಇರುತ್ತದೆ ಎಂದು ಹೈದರಾಬಾದ್​ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯ ತಾಯಿ ಹೇಳಿದ್ದಾರೆ.

Sushma Chakre | news18-kannada
Updated:December 1, 2019, 12:47 PM IST
ನನ್ನ ಮಗನ ಗಲ್ಲಿಗೇರಿಸಿ, ಬೆಂಕಿ ಹಚ್ಚಿ ಸಾಯಿಸಿ; ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವನ ತಾಯಿಯ ಆಕ್ರೋಶದ ನುಡಿ
ಪ್ರಾತಿನಿಧಿಕ ಚಿತ್ರ
  • Share this:
ಹೈದರಾಬಾದ್​ (ಡಿ. 1): ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ತೆಲಂಗಾಣದ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಒಂದರ ಹಿಂದೊಂದು ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ಇಂತಹ ಹೀನ ಕೃತ್ಯ ನಡೆಸಿರುವ ಮಗನ ಬಗ್ಗೆ ಸ್ವತಃ ತಾಯಿಯೇ ಅಸಹ್ಯ ಪಟ್ಟುಕೊಂಡಿದ್ದು, ನನ್ನ ಮಗ ಹೈದರಾಬಾದ್​ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಸಾಬೀತಾದರೆ ಆತನನ್ನು ಕೂಡ ಗಲ್ಲಿಗೇರಿಸಲಿ ಎಂದು ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಟೈಮ್ಸ್​ ಆಫ್​ ಇಂಡಿಯಾ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಪಶುವೈದ್ಯೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿ. ಚನ್ನಕೇಶವುಲು ತಾಯಿ ಶ್ಯಾಮಲಾ, 'ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗ ಹೆಣ್ಣುಮಕ್ಕಳ ಜೊತೆ ಇಷ್ಟು ಕೀಳಾಗಿ ವರ್ತಿಸುತ್ತಾನೆ ಎಂದುಕೊಂಡಿರಲಿಲ್ಲ. ಅವನು ಪಶುವೈದ್ಯೆಗೆ ಮಾಡಿದಂತೆ ಆತನನ್ನೂ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಬಿಡಿ. ಇಂತಹ ಹೇಯ ಕೃತ್ಯ ಮಾಡಿದ ಆತನನ್ನು ಗಲ್ಲಿಗೇರಿಸಿ' ಎಂದು ನೋವಿನಿಂದ ತಮ್ಮ ಸಂಕಟವನ್ನು ಹೊರಹಾಕಿದ್ದಾರೆ.

ಹೈದರಾಬಾದ್ ಸಾಮೂಹಿಕ ಅತ್ಯಾಚಾರ- ಕೊಲೆ ಪ್ರಕರಣ; ಎಫ್​ಐಆರ್ ದಾಖಲಿಸಲು ವಿಳಂಬ ಮಾಡಿದ ಮೂವರು ಪೊಲೀಸರು ಅಮಾನತು

ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಾಲ್ ಮಂಡಲ್ ಎಂಬ ಊರಿನವನಾದ ಚನ್ನಕೇಶವುಲು ಕೂಡ ಹೈದರಾಬಾದ್​ನ 27 ವರ್ಷದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಲ್ಲೊಬ್ಬ. ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಕರೆದುಕೊಂಡು ಹೋದ ನಂತರ ಆತನ ತಂದೆ ಅವಮಾನದಿಂದ ಊರು ಬಿಟ್ಟು ಹೋಗಿದ್ದಾರೆ. ತನಗೆ ಇಂತಹ ಮಗ ಹುಟ್ಟಿದನಲ್ಲ ಎಂದು ತಾಯಿ ಕೊರಗುತ್ತಾ ಕಣ್ಣೀರು ಹಾಕುತ್ತಿದ್ದಾರೆ.

ನನಗೂ ಮಗಳಿದ್ದಾಳೆ..:

'ನನ್ನ ಮಗ ಇಂತಹ ತಪ್ಪು ಮಾಡಿದನಲ್ಲ ಎಂಬ ಆಘಾತವನ್ನೇ ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಂಥದ್ದರಲ್ಲಿ ಇವರ ಕೃತ್ಯಕ್ಕೆ ಬಲಿಯಾಗಿರುವ ಆ ವೈದ್ಯೆಯ ಮನೆಯವರಿಗೆ ಯಾವ ರೀತಿಯ ನೋವಾಗಿದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನನಗೂ ಒಬ್ಬಳು ಮಗಳಿದ್ದಾಳೆ. ಹೆಣ್ಣು ಹೆತ್ತವರ ಸಂಕಟ ಏನೆಂದು ನಾನೂ ಅನುಭವಿಸಿದ್ದೇನೆ. ಒಂದುವೇಳೆ ಈಗ ನನ್ನ ಮಗ ಮಾಡಿದ್ದೇ ಸರಿ ಎಂದು ನಾನು ಸಮರ್ಥಿಸಿಕೊಂಡರೆ ಜೀವನಪರ್ಯಂತ ಆ ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಲೇ ಇರುತ್ತದೆ. ನನ್ನ ಸುತ್ತಮುತ್ತಲಿನವರು ಕೂಡ ನಾನು ಸಾಯುವವರೆಗೂ ನನ್ನನ್ನು ದ್ವೇಷಿಸುತ್ತಾರೆ' ಎನ್ನುವ ಮೂಲಕ ಆರೋಪಿ ಚನ್ನಕೇಶವುಲು ಅವರ ತಾಯಿ ಶ್ಯಾಮಲಾ ಮೃತ ಯುವತಿಯ ಮನೆಯವರಿಗೆ ಬಹಿರಂಗವಾಗಿ ಕ್ಷಮಾಪಣೆ ಕೋರಿದ್ದಾರೆ.

55 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ 22ರ ಯುವಕ; ಮುಖದ ಮೇಲೆ ಉಗಿದಿದ್ದಕ್ಕೆ ಕತ್ತು ಸೀಳಿ ಹತ್ಯೆ'5 ತಿಂಗಳ ಹಿಂದೆ ನನ್ನ ಮಗ ಇಷ್ಟಪಟ್ಟ ಹುಡುಗಿಯೊಂದಿಗೆ ಆತನಿಗೆ ಮದುವೆ ಮಾಡಿದ್ದೆವು. ಇಲ್ಲಿಯವರೆಗೆ ಯಾವ ವಿಷಯದಲ್ಲೂ ಆತನ ಮೇಲೆ ನಾವು ಒತ್ತಡ ಹೇರಿಲ್ಲ. ಆತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ, ತುಂಬ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೆವು. ಪ್ರತಿ 6 ತಿಂಗಳಿಗೊಮ್ಮೆ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಆದರೀಗ ಅಂತಹ ಮಗನೇ ನಾವು ತಲೆ ಎತ್ತಿ ಬಾಳದಂತೆ ಮಾಡಿದ್ದಾನೆ. ಒಂದು ಅಮಾಯಕ ಹೆಣ್ಣಿನ ಮಾನ ಮಾತ್ರವಲ್ಲದೆ ಪ್ರಾಣವನ್ನೂ ತೆಗೆದಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಬೇಸರ ಹೊರಹಾಕಿದ್ದಾರೆ.

ಏನಿದು ಘಟನೆ?:

ಗುರುವಾರ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದರಿಂದ ಪಶುವೈದ್ಯೆ ಮನೆಗೆ ಹೊರಡುವುದು ತಡವಾಗಿತ್ತು. ಕೆಲಸ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಪಶುವೈದ್ಯೆಯ ಸ್ಕೂಟಿ ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಕೆಟ್ಟು ನಿಂತಿತ್ತು. ರಾತ್ರಿಯಾಗಿದ್ದರಿಂದ ಭಯವಾಗಿ ಮನೆಗೆ ಕರೆ ಮಾಡಿದ್ದ ವೈದ್ಯೆ ತನ್ನ ಅಕ್ಕನಿಗೆ ನಡೆದ ಘಟನೆ ವಿವರಿಸಿದ್ದಳು. ಅಲ್ಲೇ ಸ್ವಲ್ಪ ದೂರದಲ್ಲಿ ಲಾರಿಗಳು ನಿಂತಿದ್ದು, ಅದರ ಚಾಲಕರು ತನ್ನತ್ತಲೇ ನೋಡುತ್ತಿದ್ದಾರೆ. ಅವರು ತನಗೇನಾದರೂ ಮಾಡಬಹುದು ಎಂಬ ಭಯವಾಗುತ್ತಿದೆ ಎಂದು ಕೂಡ ಫೋನ್​ನಲ್ಲಿ ಹೇಳಿದ್ದಳು.

ಅದಾದ ಸ್ವಲ್ಪ ಹೊತ್ತಿನಲ್ಲಿ ಸ್ಕೂಟಿ ಸರಿಯಾಯಿತಾ? ಎಂದು ಕೇಳಲು ಮನೆಯವರು ಫೋನ್ ಮಾಡಿದಾಗ ಆಕೆಯ ಮೊಬೈಲ್ ನಾಟ್​ ರೀಚಬಲ್ ಬರುತ್ತಿತ್ತು. ಇದರಿಂದ ಮನೆಯವರು ಗಾಬರಿಯಾಗಿದ್ದರು. ಆಕೆ ಮನೆಗೂ ಬಾರದೆ, ಸಂಪರ್ಕಕ್ಕೂ ಸಿಗದ ಕಾರಣ ಕುಟುಂಬದವರು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮಾರನೇ ದಿನ ರಸ್ತೆ ಬದಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.
First published: December 1, 2019, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading