HOME » NEWS » National-international » LET KUMBH MELA BE SYMBOLIC PM NARENDRA MODI REQUESTS SAINTS SNVS

ಕುಂಭಮೇಳ ಸಾಂಕೇತಿಕವಾಗಿರಲಿ ಎಂದು ಪ್ರಧಾನಿ ಕೋರಿಕೆ; ಮುಂದಿನ ಶಾಹಿ ಸ್ನಾನ ಬೇಡವೆಂದು ಸಂತರ ಮನವಿ

ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಇದೀಗ ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ಮಾತ್ರ ಆಚರಿಸಿ ಎಂಬ ಕೋರಿಕೆಯನ್ನು ಸಾಧು ಸಂತರಿಗೆ ಪ್ರಧಾನಿ ಮಾಡಿದ್ದಾರೆ.

news18
Updated:April 17, 2021, 11:51 AM IST
ಕುಂಭಮೇಳ ಸಾಂಕೇತಿಕವಾಗಿರಲಿ ಎಂದು ಪ್ರಧಾನಿ ಕೋರಿಕೆ; ಮುಂದಿನ ಶಾಹಿ ಸ್ನಾನ ಬೇಡವೆಂದು ಸಂತರ ಮನವಿ
ಕುಂಭ ಮೇಳದಲ್ಲಿ ಪಾಲ್ಗೊಂಡಿರುವ ಸಾಧು ಸಂತರು
  • News18
  • Last Updated: April 17, 2021, 11:51 AM IST
  • Share this:
ನವದೆಹಲಿ(ಏ. 17): ಲಕ್ಷಾಂತರ ಮಂದಿ ಒಂದೆಡೆ ಸೇರುವ ಕುಂಭಮೇಳ ಇದೀಗ ಕೊರೋನಾ ಹಾಟ್ ಸ್ಪಾಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಬೇಗನೇ ಮೊಟಕುಗೊಳಿಸಬೇಕೆಂಬ ಅಭಿಪ್ರಾಯಗಳು ಗಟ್ಟಿಯಾಗಿ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳವನ್ನು ಕೇವಲ ಸಾಂಕೇತಿಕವಾಗಿ ಆಚರಿಸುವಂತೆ ಸಾಧು ಸಂತರಿಗೆ ಮನವಿ ಮಾಡಿದ್ದಾರೆ. ಪ್ರಧಾನಿ ಕೋರಿಕೆಗೆ ಸಾಧುಗಳು ಕೂಡ ಸ್ಪಂದಿಸುವ ಸಾಧ್ಯತೆ ಇದ್ದು, ಕುಂಭಮೇಳವನ್ನು ಬೇಗನೇ ಮುಗಿಸುವ ನಿರೀಕ್ಷೆ ಇದೆ. ಕುಂಭದ ಅತಿದೊಡ್ಡ ಅಖಾಡವೆನಿಸಿದ ಜುನಾ ಅಖಾಡದ ಮಹಾಮಂಡಳೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಅವರು ಕುಂಭಮೇಳದಲ್ಲಿ ಭಕ್ತಾದಿಗಳು ಮುಂದಿನ ಶಾಹಿ ಸ್ನಾನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದು ಕುಂಭಮೇಳ ಬೇಗನೇ ಮುಕ್ತಾಯಕ್ಕೆ ನಾಂದಿ ಹಾಡುವ ಪ್ರಕ್ರಿಯೆಗೆ ಎಡೆ ಮಾಡಿಕೊಡಬಹುದು.

“ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವಧೇಶಾನಂದ್ ಗಿರಿ ಜೀ ಜೊತೆ ಇಂದು ನಾನು ಫೋನ್ ಮುಖಾಂತರ ಮಾತನಾಡಿದೆ. ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದೆ. ಎಲ್ಲಾ ಸಾಧು ಸಂತರು ಆಡಳಿತದೊಂದಿಗೆ ಸಹಕರಿಸುತ್ತಿದ್ದಾರೆ. ಇದಕ್ಕೆ ಅವರೆಲ್ಲರಿಗೂ ಆಭಾರಿಯಾಗಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಟ್ವೀಟ್ ಮಾಡಿದ್ದಾರೆ.

ಹಾಗೆಯೇ, ಮತ್ತೊಂದು ಟ್ವೀಟ್ ಮಾಡಿದ ಅವರು, “ಈಗಾಗಲೇ ಎರಡು ಶಾಹಿ ಸ್ನಾನ ಆಗಿ ಹೋಗಿದೆ. ಈಗ ಕುಂಭಕ್ಕೆ ಕೊರೋನಾ ಸಂಕಟ ಇದೆ. ಸಾಂಕೇತಿಕವಾಗಿ ಕುಂಭವನ್ನು ಆಚರಿಸಬೇಕೆಂದು ನಾನು ಪ್ರಾರ್ಥಿಸಿದ್ದೇನೆ. ಇದರಿಂದ ಈ ಸಂಕಟ ವಿಮೋಚನೆಗೆ ನಡೆಯುತ್ತಿರುವ ಹೋರಾಟಕ್ಕೆ ಒಂದು ಶಕ್ತಿ ಸಿಗಲಿದೆ” ಎಂದು ಮೋದಿ ಇಳಿಸಿದ್ದಾರೆ.

ಪ್ರಧಾನಿಯವರ ಟ್ವೀಟ್​ಗೆ ಸ್ಪಂದಿಸಿರುವ ಸ್ವಾಮಿ ಅವಧೇಶಾನಂದ ಅವರು, ಕೋವಿಡ್ ಕಾರಣದಿಂದ ಮುಂದಿನ ಶಾಹಿ ಸ್ನಾನಕ್ಕೆ ಭಕ್ತಗಣಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಬಾರದು. ನಿಯಮಗಳ ಉಲ್ಲಂಘನೆ ಮಾಡಬಾರದು ಎಂದು ಕೋರಿ ಟ್ವೀಟ್ ಮೂಲಕವೇ ಭಕ್ತರಿಗೆ ಮನವಿ ಮಾಡಿದ್ದಾರೆ.ಪ್ರತಿ 12 ವರ್ಷಕ್ಕೊಮ್ಮೆ ಮಹಾ ಕುಂಭಮೇಳ ಬರುತ್ತದೆ. ಈ ಬಾರಿ ಉತ್ತರ ಪ್ರದೇಶದ ಹರಿದ್ವಾರದಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಮಹಾಕುಂಭ ಮೇಳವು ಜನವರಿಯಿಂದ ಏಪ್ರಿಲ್​ವರೆಗೂ ಚಾಲನೆಯಲ್ಲಿರುತ್ತದೆ. ಈ ವರ್ಷ ಕೋವಿಡ್ ಕಾರಣದಿಂದ ಏಪ್ರಿಲ್ 1ರಿಂದ 30ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಒಟ್ಟು ಸಾಧು ಸಂತರ 13 ಅಖಾಡಗಳು ಸೇರಿ ಈ ಕುಂಭ ಮೇಳವನ್ನು ನಡೆಸುತ್ತಿವೆ. ಈ ಒಂದೊಂದು ಅಖಾಡಕ್ಕೂ ದೊಡ್ಡ ಸಂಖ್ಯೆಯಲ್ಲಿ ಸಾಧು ಸಂತರು ಜೋಡಿಸಿಕೊಂಡಿರುತ್ತಾರೆ. ಈ ಬಾರಿಯ ಕುಂಭ ಮೇಳದಲ್ಲಿ ಈಗಾಗಲೇ ಮೂರು ಬಾರಿ ಶಾಹಿ ಸ್ನಾನ ಆಗಿದೆ. ಏಪ್ರಿಲ್ 14ರಂದು ನಡೆದ ಶಾಹಿ ಸ್ನಾನ ಅತ್ಯಂತ ಪವಿತ್ರದ್ದೆಂದು ಪರಿಗಣಿಸಲಾಗಿದೆ. ಅಂದು ಹೆಚ್ಚೂಕಡಿಮೆ 10 ಲಕ್ಷ ಮಂದಿ ಗಂಗಾ ನದಿಯಲ್ಲಿ ಮಿಂದು ಪುನೀತರಾಗಿದ್ದಾರೆ. ದುರದೃಷ್ಟಕ್ಕೆ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಹಲವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಬ್ಬ ಸಾಧು ಕೂಡ ಮೃತಪಟ್ಟಿದ್ದಾರೆ. ಈ ಬೆಳವಣಿಗೆ ಆದ ಬೆನ್ನಲ್ಲೇ ನಿರಂಜನಿ ಅಖಾಡ ಕುಂಭ ಮೇಳದಿಂದ ಹಿಂದಕ್ಕೆ ಸರಿಯುವುದಾಗಿ ಹೇಳಿತು. ಇದಕ್ಕೆ ಆನಂದ ಮತ್ತು ಶ್ರೀ ಪಂಚಾಯತಿ ಅಖಾಡಗಳು ಬೆಂಬಲ ವ್ಯಕ್ತಪಡಿಸಿವೆ. ಇವು ಮೂರು ಶೈವ ಪಂಥದ ಅಖಾಡಗಳಾಗಿವೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕರ್ಫ್ಯೂ: ವಲಸಿಗರಿಗೆ, ನಿರುದ್ಯೋಗಿಗಳಿಗೆ ಆಹಾರ ವಿತರಿಸಿದ ಅರ್ಥ್ ಕೆಫೆ

ಆದರೆ, ಬೈರಾಗಿ ಪಂಥ (ವೈಷ್ಣವ) ಅಖಾಡಗಳಾದ ದಿಗಂಬರ, ನಿರ್ವಾಣಿ ಮತ್ತು ನಿರ್ಮೋಹಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ನಿರಂಜನಿ ಅಖಾಡ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದು ಸರಿಯಲ್ಲ. ಎಲ್ಲಾ 13 ಅಖಾಡಗಳು ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಏಕಾಏಕಿ ಕುಂಭಮೇಳದಿಂದ ಈ ಅಖಾಡಗಳು ಹಿಂದಕ್ಕೆ ಸರಿಯಲು ಆಗುವುದಿಲ್ಲ ಎಂದು ಇವು ಪ್ರತಿಪಾದಿಸಿವೆ.

ಬೈರಾಗಿ ಪಂಥದ ಅಖಾಡಗಳಿಗೆ ಏಪ್ರಿಲ್ 21 ಮತ್ತು ಏಪ್ರಿಲ್ 27 ಬಹಳ ಪವಿತ್ರ ದಿನವೆನಿಸಿದೆ. ಹಾಗೆಯೇ, ಕುಂಭಮೇಳವನ್ನು ನಾನು ನಿರ್ಧರಿಸಲು ಆಗುವುದಿಲ್ಲ. ಗ್ರಹಗತಿಗಳು ನಿರ್ಧರಿಸುತ್ತವೆ ಎಂದು ಹೇಳಿರುವ ಇವರು, ತಮ್ಮ ಶಾಹಿ ಸ್ನಾನಗಳು ಮುಂದುವರಿಯುತ್ತವೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ವಿಪರ್ಯಾಸವೆಂದರೆ ಕೋವಿಡ್​ಗೆ ಬಲಿಯಾದ ಮಹಾಮಂಡಲೇಶ್ವರ ಕಪಿಲ್ ದೇವ್ ದಾಸ್ ಅವರು ನಿರ್ವಾನಿ ಅಖಾಡಕ್ಕೆ ಸೇರಿದವರಾಗಿದ್ದಾರೆ.

ಇನ್ನು ಪ್ರಧಾನಿ ಅವರು ಟ್ವೀಟ್ ಮಾಡಿರುವ ಸ್ವಾಮಿ ಅವಧೇಶಾನಂದ ಅವರು ಜುನಾ ಅಖಾಡಕ್ಕೆ ಸೇರಿದವರಾಗಿದ್ದಾರೆ. ಈ ಜುನಾ ಅಖಾಡವು ಕುಂಭ ಮೇಳದ 13 ಅಖಾಡಗಳಲ್ಲಿ ಅತಿ ದೊಡ್ಡ ಗುಂಪು ಎನಿಸಿದೆ. ಹೀಗಾಗಿ, ಜುನಾ ಅಖಾಡದವರ ಅಭಿಪ್ರಾಯಕ್ಕೆ ಬೇರೆ ಅಖಾಡಗಳ ಸಹಮತ ಸಹಜವಾಗಿಯೇ ಇರುತ್ತದೆ. ನಾಲ್ಕನೇ ಶಾಹಿ ಸ್ನಾನದ ಒಳಗೆಯೇ ಕುಂಭಮೇಳವನ್ನು ಮೊಟಕುಗೊಳಿಸಲಾಗುತ್ತದಾ ಎಂಬುದನ್ನು ಕಾದುನೋಡಬೇಕು.
Published by: Vijayasarthy SN
First published: April 17, 2021, 11:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories