• Home
 • »
 • News
 • »
 • national-international
 • »
 • Farmers Protest: ಹರಿಯಾಣ ಸಿಎಂ ವಿರುದ್ಧ ಪ್ರತಿಭಟಿಸಿದ ರೈತರ ಮೇಲೆ ಪೊಲೀಸರಿಂದ ಲಾಠಿಚಾರ್ಚ್​

Farmers Protest: ಹರಿಯಾಣ ಸಿಎಂ ವಿರುದ್ಧ ಪ್ರತಿಭಟಿಸಿದ ರೈತರ ಮೇಲೆ ಪೊಲೀಸರಿಂದ ಲಾಠಿಚಾರ್ಚ್​

ರೈತರ ಮೇಲೆ ಲಾಠಿಚಾರ್ಚ್​ ನಡೆಸಿದ ಪೊಲೀಸರು.

ರೈತರ ಮೇಲೆ ಲಾಠಿಚಾರ್ಚ್​ ನಡೆಸಿದ ಪೊಲೀಸರು.

ಗುರುವಾರ ಕೂಡ ಹರಿಯಾಣದ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಹೆಲಿಕಾಪ್ಟರ್‌ ಮೂಲಕ ಹಿಸಾರ್‌ ತಲುಪಿದ್ದು, ಅವರನ್ನು ಪ್ರತಿಭಟನಾ ನಿರತ ರೈತರು ಘೆರಾವ್ ಹಾಕಿ, ಹೆಲಿಕಾಪ್ಟರ್ ಇಳಿಯಲು ಬಿಡದ ಕಾರಣ ಅದು ಬಂದ ದಾರಿಯಲ್ಲೇ ವಾಪಾಸ್ ಹೋದ ಘಟನೆ ನಡೆದಿತ್ತು.

 • Share this:

  ಹರಿಯಾಣ (ಏಪ್ರಿಲ್ 04); ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರ ಕಳೆದ ನಾಲ್ಕು ತಿಂಗಳಿನಿಂದ ಸತತ ಹೋರಾಟ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡತೆ ಕಾಣಿಸುತ್ತಿಲ್ಲ. ಈ ನಡುವೆ ಪಂಜಾಬ್ ಮತ್ತು ಹರಿಯಾಣದಲ್ಲಿ ಹೋರಾಟ ತೀವ್ರವಾಗಿದ್ದು, ಹರಿಯಾಣ ಸಿಎಂ ಮನೋಹರ್​ ಲಾಲ್ ಕಟ್ಟರ್​ ಎಲ್ಲೇ ಹೋದರೂ ಅಲ್ಲಿನ ರೈತರು ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. ಇಂದು ಸಹ ಮನೋಹರ್​ ಲಾಲ್ ಕಟ್ಟರ್​ ಕಾರ್ಯಕ್ರಮದ ನಿಮಿತ್ತ ರೋಹ್ಟಕ್​ಗೆ ತೆರಳಿದ್ದರು. ಈ ವೇಳೆ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಚ್​ನಲ್ಲಿ ಇಬ್ಬರು ವೃದ್ಧ ರೈತರು ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.


  ರೋಹ್ಟಕ್ ನಗರದ ಹೊರವಲಯದಲ್ಲಿರುವ ಬಾಬಾ ಮಸ್ನಾಥ್ ಮಠದ ಬಳಿ ಪ್ರತಿಭಟನಾನಿರತ ರೈತರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆದಿತ್ತು. ರೋಹ್ಟಕ್‌ನಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಕ್ರಮವನ್ನು ವಿರೋಧಿಸಿ ಜಿಂದ್ ಜಿಲ್ಲೆಯ ವಿವಿಧ ಕಡೆಗಳಲ್ಲಿ ರೈತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ.
  ಶನಿವಾರ, ಸ್ಥಳೀಯ ಬಿಜೆಪಿ ಸಂಸದ ಅರವಿಂದ್ ಶರ್ಮಾ ಅವರ ತಂದೆಯ ಸಂತಾಪ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ರೋಹ್ಟಕ್‌ಗೆ ಭೇಟಿ ನೀಡಿದ್ದರು. ಅವರ ಭೇಟಿ ವಿರೋಧಿಸಿ, ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಪ್ರತಿಭಟನೆ ನಡೆಸುತ್ತಿದ್ದರು.


  ಆದರೆ, ರೈತರ ಆಕ್ರಮಣಕಾರಿ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಹೆಲಿಕಾಪ್ಟರ್‌ಅನ್ನು ಸ್ಥಳೀಯ ಪೊಲೀಸ್ ಲೈನ್ಸ್‌ನಲ್ಲಿ ಇಳಿಸಲಾಗಿತ್ತು. ಬಿಗಿ ಭದ್ರತೆಯ ಮಧ್ಯೆ ಖಟ್ಟರ್ ಅವರನ್ನು ಬೇರೆ ಮಾರ್ಗದ ಮೂಲಕ ಸಂತಾಪ ಸಭೆಗೆ ಕರೆದೊಯ್ಯಲಾಗಿತ್ತು.


  ಈ ಸಮಯದಲ್ಲಿ ಹೆಲಿಕಾಪ್ಟರ್‌ ಇಳಿಯುವಿಕೆಗೆ ಸ್ವಲ್ಪ ಸಮಯದ ಮೊದಲು ಕಪ್ಪು ಧ್ವಜಗಳನ್ನು ಹೊತ್ತ ಹಲವಾರು ರೈತರು ಹೆಲಿಪ್ಯಾಡ್‌ ಕಡೆಗೆ ಸಾಗುತ್ತಿದ್ದರು. ತಕ್ಷಣ ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿ, ಈ ವೇಳೆ ಘರ್ಷಣೆ ಉಂಟಾಗಿತ್ತು.


  ಸಂಘಿ ಗ್ರಾಮದ ರಾಜ್ ಸಿಂಗ್ (73) ಮತ್ತು ರೋಹ್ಟಕ್ ಜಿಲ್ಲೆಯ ಬಸಂತ್‌ಪುರ್‌ ಗ್ರಾಮದ ಈಶ್ವರ್ (80) ಪೊಲೀಸ್ ಲಾಠಿಚಾರ್ಜ್ ವೇಳೆ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.


  ಇದನ್ನೂ ಓದಿ: Rahul Gandhi: ಎಲೆಕ್ಷನ್ ಕಮಿಷನ್; ಚುನಾವಣಾ ಆಯೋಗದ ವಿರುದ್ಧ ಎರಡೇ ಪದದ ಟ್ವೀಟ್​ನಲ್ಲಿ ಕಿಡಿಕಾರಿದ ರಾಹುಲ್ ಗಾಂಧಿ


  ರೈತರ ಮೇಲಿನ ಲಾಠಿಚಾರ್ಜ್ ಖಂಡಿಸಿ, ಕಪ್ಪು ಧ್ವಜಗಳನ್ನು ಹೊತ್ತ ರೈತರು ಬಿಜೆಪಿ ಕಚೇರಿಯಲ್ಲಿ ಜಮಾಯಿಸಿದ್ದರಿಂದ ಸಿರ್ಸಾ ಸಂಸದೆ ಸುನೀತಾ ದುಗ್ಗಲ್ ಅವರು ಫತೇಹಾಬಾದ್ ಭೇಟಿಯನ್ನು ರದ್ದುಗೊಳಿಸಿದ್ದಾರೆ.


  ಗುರುವಾರ ಕೂಡ ಹರಿಯಾಣದ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಹೆಲಿಕಾಪ್ಟರ್‌ ಮೂಲಕ ಹಿಸಾರ್‌ ತಲುಪಿದ್ದು, ಅವರನ್ನು ಪ್ರತಿಭಟನಾ ನಿರತ ರೈತರು ಘೆರಾವ್ ಹಾಕಿ, ಹೆಲಿಕಾಪ್ಟರ್ ಇಳಿಯಲು ಬಿಡದ ಕಾರಣ ಅದು ಬಂದ ದಾರಿಯಲ್ಲೇ ವಾಪಾಸ್ ಹೋದ ಘಟನೆ ನಡೆದಿತ್ತು.

  Published by:MAshok Kumar
  First published: