ಪಾಟ್ನಾ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ (Land for Jobs Scam) ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರ ಪತ್ನಿ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ (Rabri Devi) ಹಾಗೂ ಮಗಳು ಮಿಸಾ ಅವರಿಗೆ ಸೇರಿದ ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ (Central Bureau of Investigation ) ಸೋಮವಾರ ದಾಳಿ ನಡೆಸಿದೆ. 8 ರಾಷ್ಟ್ರೀಯ ಪಕ್ಷಗಳ ಪ್ರಮುಖ ನಾಯಕರು ಕೇಂದ್ರ ಸರ್ಕಾರ (Central Government) ಕೇಂದ್ರದ ಹಲವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದ ಮಾರನೇ ದಿನವೇ ರಾಬ್ರಿ ದೇವಿ ಮನೆ ಮೇಲೆ ಸಿಬಿಐ ದಾಳಿ (CBI Raid) ನಡೆದಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಬಂಧನದ ಬೆನ್ನಲ್ಲೇ ವಿರೋಧ ಪಕ್ಷಗಳು ತನಿಖಾ ಏಜೆನ್ಸಿಗಳ ದುರ್ಬಳಕೆಯಾಗುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದರು. ಇದೀಗ ಸೋಮವಾರ ಬಿಹಾರದ ಪ್ರಮುಖ ನಾಯಕನಾಗಿರುವ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ದಾಳಿ ನಡೆಸಲಾಗಿದೆ.
ಉದ್ಯೋಗಕ್ಕಾಗಿ ಭೂಮಿ ಹಗರಣ
ಲಾಲೂ ಪ್ರಸಾದ್ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿತ್ತು. ಭೂಮಿಗೆ ಪ್ರತಿಯಾಗಿ ಅನರ್ಹ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗಗಳನ್ನು ನೀಡಲಾಗಿತ್ತು ಎಂಬ ಆರೋಪವಿದೆ. ಆ ವೇಳೆ ಬಿಹಾರದ ವಿವಿಧ ಭಾಗಗಳಲ್ಲಿನ ಪ್ರಮುಖ ಆಸ್ತಿಗಳನ್ನು ಯಾದವ್ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗಳು ಸ್ವಾಧೀನಪಡಿಸಿಕೊಂಡಿದ್ದವು. ಈ ಸಂಬಂಧ ಸಿಬಿಐಗೆ ಕೆಲವು ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್, ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ಮೀಸಾ ಮತ್ತು ಹೇಮಾ ಸೇರಿ ಇತರರನ್ನು ಸಿಬಿಐ ಹೆಸರಿಸಿದೆ. 2004 ರಿಂದ 2009 ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ನೀಡಿದ ಉದ್ಯೋಗಗಳಿಗೆ ಪ್ರತಿಯಾಗಿ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ತುಂಬಾ ಕಡಿಮೆ ದರದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ಮೇ 2022 ರಲ್ಲಿ ದಾಖಲಾದ ಎಫ್‌ಐಆರ್ ಆರೋಪಿಸಲಾಗಿದೆ.
ಲಾಲೂ ಕುಟುಂಬಕ್ಕೆ ಸಮನ್ಸ್
ದೆಹಲಿಯ ನ್ಯಾಯಾಲಯ ಫೆಬ್ರವರಿ 27 ರಂದು ಮಾಜಿ ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ರಾಬ್ರಿ ದೇವಿ ಮತ್ತು ಇತರ 14 ಜನರಿಗೆ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿತ್ತು. ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ಆರೋಪಿಗಳ ವಿರುದ್ಧ ಸಲ್ಲಿಸಲಾದ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದ್ದರು. ಇದರ ಬೆನ್ನಲ್ಲೇ ಸಿಬಿಐ ದಾಳಿ ನಡೆದಿದೆ.
ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದ ವಿಪಕ್ಷಗಳು
ಕೇಂದ್ರ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರುಪಯೋಗ ಪಡಿಸುತ್ತಿದೆ ಎಂದು ಆರೋಪಿಸಿ ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿಗಳಾದ ಕೆ ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ಸಹಿ ಹಾಕಿದ್ದು, ಜೊತೆಗೆ ವಿರೋಧ ಪಕ್ಷದ ನಾಯಕರುಗಳಾದ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಉದ್ದವ್ ಠಾಕ್ರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೂಡ ಈ ಪತ್ರಕ್ಕೆ ಸಹಿ ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ