ಬಹುಕೋಟಿ ಮೇವು ಹಗರಣ ಸಂಬಂಧ ಜೈಲಿನಲ್ಲಿರುವ ಆರ್‌ಜೆಡಿ ಸರ್ವೋಚ್ಚ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಇಂದು ಜಾರ್ಖಂಡ್ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮೇವು ಹಗರಣದ ದುಮ್ಕಾ ಖಜಾನೆ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ಗೆ ಇಂದು ಜಾಮೀನು ನೀಡಿದೆ. ಕಳೆದ ಎರಡೂವರೆ ವರ್ಷಗಳಿಂದ ಜೈಲಿನಲ್ಲಿರುವ ಲಾಲು ಪ್ರಸಾದ್ ಯಾದವ್ ಜೈಲಿನಿಂದ ಹೊರಗೆ ಬರಲಿದ್ದಾರೆ.
ಆರ್‌ಜೆಡಿ ನಾಯಕ ಮತ್ತು ಲಾಲು ಅವರ ಪುತ್ರ ತೇಜಶ್ವಿ ಯಾದವ್ ಅವರು ತಮ್ಮ ತಂದೆಗೆ ಜಾಮೀನು ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ತಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿತ್ತು ಎಂದು ಹೇಳಿದರು.
‘ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಲಾಲು ಜಿ ಅವರು ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಮುಗಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ. ನಾವು ಹೈಕೋರ್ಟ್‌ಗೆ ಧನ್ಯವಾದ ಅರ್ಪಿಸುತ್ತೇವೆ. ಅವರನ್ನು ಏಮ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಜಾಮೀನು ಪಡೆದಿರುವುದು ನಮಗೆ ಸಂತೋಷವಾಗಿದೆ. ಆದರೆ ಅವರ ಆರೋಗ್ಯದ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ತೇಜಶ್ವಿ ಯಾದವ್ ತಿಳಿಸಿದ್ದಾರೆ.
ಅನಾರೋಗ್ಯಪೀಡಿತರಾಗಿರುವ ಲಾಲು ಪ್ರಸಾದ್ ಯಾದವ್ ಅವರು ಪ್ರಸ್ತುತ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಮ್ಕಾ ಖಜಾನೆ ಪ್ರಕರಣ ಸಂಬಂಧ ಲಾಲು ಯಾದವ್ ಶಿಕ್ಷೆಗೊಳಗಾಗಿದ್ದರು. ಇದೀಗ ಆ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಅವರ ಜಾಮೀನು ಪ್ರಕ್ರಿಯೆ ಬಾಕಿ ಉಳಿದಿದೆ.
ಇದನ್ನು ಓದಿ: Bus Strike | ಸರ್ಕಾರಕ್ಕೆ ಸೋಮವಾರದವರೆಗು ಗಡುವು, ಆಗಲೂ ಸ್ಪಂದಿಸದಿದ್ದರೆ ಜೈಲ್ ಭರೋ ಚಳವಳಿ ಆರಂಭ; ಕೋಡಿಹಳ್ಳಿ ಚಂದ್ರಶೇಖರ್
ಲಾಲು ಪ್ರಸಾದ್ ಯಾದವ್ ಅವರು ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಅಂದರೆ ಎರಡೂವರೆ ವರ್ಷಗಳನ್ನು ಪೂರೈಸಿದ್ದರಿಂದ ಅವರಿಗೆ ದುಮ್ಕ ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಕೀಲರ ಮನವಿಯನ್ನು ಪುರಸ್ಕರಿಸಿರುವ ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರು ಜಾಮೀನು ನೀಡಿದ್ದಾರೆ. ಇದರಿಂದ ಲಾಲು ಪ್ರಸಾದ್ ಯಾದವ್ ಜೈಲಿನಿಂದ ಹೊರಬರುವ ಹಾದಿ ಸುಗಮಗೊಂಡಿದೆ.
ಜಾಮೀನು ಅವಧಿಯಲ್ಲಿ ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ. ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಿಸಬಾರದು ಎಂದು ಕೋರ್ಟ್ ತಿಳಿಸಿದೆ. ಇದೇ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಇತರೆ ಮೂರು ಪ್ರಕರಣಗಳಲ್ಲಿ ಅವರು ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ದುಮ್ಕಾ ಖಜಾನೆಯಿಂದ 90ರ ದಶಕದಲ್ಲಿ ಕಾನೂನುಬಾಹಿರವಾಗಿ 3.13 ಕೋಟಿ ರೂ ಹಣ ಪಡೆದಿದ್ದ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ