ದೆಹಲಿ(ಜು.07): ವರ್ಣರಂಜಿತ ರಾಜಕಾರಣಿ ಹಾಗೂ ರಾಷ್ಟ್ರೀಯ ಜನತಾದಳ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Rastriya Janata Dal President Lalu Prasad Yadav) ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಲಾಲು ಪ್ರಸಾದ್ ಯಾದವ್ ಅವರನ್ನು ಬುಧವಾರ ರಾತ್ರಿ ಪಾಟ್ನಾ (Patna) ಆಸ್ಪತ್ರೆಯಿಂದ ವಿಮಾನದ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ (AIMS Hospital) ಸ್ಥಳಾಂತರ ಮಾಡಲಾಗಿದೆ. ಲಾಲು ಪ್ರಸಾದ್ ಯಾದವ್ ಅವರು ಇತ್ತೀಚೆಗೆ ಬಚ್ಚಲ ಮನೆಯಲ್ಲಿ ಬಿದ್ದಿದ್ದರು. ಅದರಿಂದ ಅವರ ಮೂಳೆ ಮುರಿದಿತ್ತು. ಇದಲ್ಲದೆ ಇನ್ನೂ ಹಲವು ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ
ಲಾಲು ಪ್ರಸಾದ್ ಅವರನ್ನು ಬುಧವಾರ ರಾತ್ರಿ 9.35ರ ಸುಮಾರಿಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ. 74 ವರ್ಷದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಆರೋಗ್ಯದ ಮೇಲೆ ಈಗ ತಜ್ಞ ವೈದ್ಯರ ತಂಡ ನಿಗಾ ಇರಿಸಿದೆ. ಲಾಲು ಪ್ರಸಾದ್ ಅವರ ಅವರ ಪತ್ನಿ ರಾಬ್ರಿ ದೇವಿ, ಕಿರಿಯ ಪುತ್ರ ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಹಿರಿಯ ಪುತ್ರಿ ಹಾಗೂ ರಾಜ್ಯಸಭಾ ಸದಸ್ಯೆ ಮಿಸಾ ಭಾರತಿ ಆಸ್ಪತ್ರೆಗೆ ಧಾವಿಸಿದ್ದಾರೆ.
ಚಲನೆ ಸಾಧ್ಯವಾಗುತ್ತಿಲ್ಲ: ತೇಜಸ್ವಿ
ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ಲಾಲು ಪ್ರಸಾದ್ ಅವರು ತಮ್ಮ ಮನೆಯಲ್ಲಿ ಬಿದ್ದ ನಂತರ ಭುಜ ಸೇರಿದಂತೆ ಮೂರು ಸ್ಥಳಗಳಲ್ಲಿ ಮುರಿತಕ್ಕೆ ಒಳಗಾಗಿದ್ದಾರೆ. ದೇಹವು "ಲಾಕ್" ಆಗಿರುವುದರಿಂದ ತೊಂದರೆಗಳು ಹೆಚ್ಚಾಗಿವೆ. ಅವರಿಂದ ಈಗ ಯಾವುದೇ ರೀತಿಯ ಚಲನೆ ಸಾಧ್ಯವಾಗುತ್ತಿಲ್ಲ. ಸೋಮವಾರ ಲಾಲು ಪ್ರಸಾದ್ ಆಯ ತಪ್ಪಿ ಬಿದ್ದು ನೋವು ಮಾಡಿಕೊಂಡಿದ್ದರು. ಗಾಯಗೊಂಡ 24 ಗಂಟೆಗಳ ನಂತರ ಅವರನ್ನು ಪಾಟ್ನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ಲಾಲು ಆರೋಗ್ಯ ವಿಚಾರಿಸಿದ ನಿತೀಶ್
ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ತೀರ ಹದಗೆಟ್ಟ ಹಿನ್ನೆಲೆಯಲ್ಲಿ ಒಂದು ಕಾಲದ ಅವರ ಜೊತೆಗಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಪಾಟ್ನಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇದಾದ ಬಳಿಕ ಲಾಲು ಪ್ರಸಾದ್ ಯಾದವ್ ಅವರನ್ನು ದೆಹಲಿಗೆ ಸ್ಥಳಾಂತರ ಮಾಡಲಾಗಿದೆ. ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಈಗ ಸ್ವಲ್ಪ ಸುಧಾರಿಸಿದೆ ಎಂದು ಲಾಲು ಪ್ರಸಾದ್ ಅವರ ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಹೇಳಿದ್ದಾರೆ.
ಶೀಘ್ರವೇ ಚೇತರಿಕೆ: ರಾಬ್ಡಿ ದೇವಿ
ರಾಷ್ಟ್ರೀಯ ಜನತಾದಳ ಪಕ್ಷದ ಕಾರ್ಯಕರ್ತರು ಮತ್ತು ಲಾಲು ಪ್ರಸಾದ್ ಯಾದವ್ ಅವರ ಬೆಂಬಲಿಗರಿಗೆ ಸಂದೇಶ ರವಾನಿಸಿರುವ ರಾಬ್ರಿ ದೇವಿ ಅವರು, "ಚಿಂತಿಸಬೇಡಿ, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಾರೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸಬೇಕು" ಎಂದು ಹೇಳಿದ್ದಾರೆ.
ಇದನ್ನೂ ಓದಿ: Smriti Irani: ಸ್ಮೃತಿ ಇರಾನಿ ಇನ್ಮೇಲೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆಯೂ ಹೌದು
ತಾಯಿ ಮಾತಿಗೆ ದನಿ ಗೂಡಿಸಿದ ತೇಜಸ್ವಿ ಯಾದವ್, "ನಾವು ಲಾಲು ಪ್ರಸಾದ್ ಯಾದವ್ ಅವರನ್ನು ದೆಹಲಿಯ ಏಮ್ಸ್‌ಗೆ ಸ್ಥಳಾಂತರಿಸಿದ್ದೇವೆ. ಏಕೆಂದರೆ ಅವರ ವೈದ್ಯಕೀಯ ಇತಿಹಾಸವನ್ನು ಚೆನ್ನಾಗಿ ತಿಳಿದಿರುವ ವೈದ್ಯರೊಂದಿಗೆ ಇಲ್ಲಿ ಉತ್ತಮ ಚಿಕಿತ್ಸೆ ನೀಡಬಹುದು" ಎಂದು ಹೇಳಿದ್ದಾರೆ.
ಸಾಧ್ಯವಾದರೆ ಸಿಂಗಪೂರ್ ನಲ್ಲಿ ಚಿಕಿತ್ಸೆ: ತೇಜಸ್ವಿ
ಮೇವು ಹಗರಣ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿರುವ ಪ್ರಸಾದ್ ಕಳೆದ ತಿಂಗಳು ಕಿಡ್ನಿ ಕಸಿ ಮಾಡಿಸಿಕೊಳ್ಳಲು ವಿದೇಶಕ್ಕೆ ತೆರಳಲು ಜಾರ್ಖಂಡ್ ಹೈಕೋರ್ಟ್‌ನಿಂದ ಅನುಮತಿ ಪಡೆದಿದ್ದರು. 2ರಿಂದ 4 ವಾರಗಳಲ್ಲಿ ಅವರು ಅಂತರರಾಷ್ಟ್ರೀಯ ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಾಗುವುದಾದರೆ ನಾವು ಲಾಲು ಪ್ರಸಾದ್ ಯಾದವ್ ಅವರನ್ನು ಸಿಂಗಾಪುರಕ್ಕೆ ಕರೆದೊಯ್ಯದು ಚಿಕಿತ್ಸೆ ಕೊಡಿಸಬಹುದು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ