ಲಂಡನ್: ರಾಹುಲ್ ಗಾಂಧಿಗೆ (Rahul Gandhi) ಬಂದೊದಗಿರುವ ಸಂಕಷ್ಟಗಳು ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕ ಈಗಾಗಲೇ ಮೋದಿ ಉಪನಾಮದ ವಿವಾದದಲ್ಲಿ (Modi Surname Comment) 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅಲ್ಲದೆ ಜನಪ್ರತಿನಿಧಿ ಕಾಯ್ದೆಯಡಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಅಲ್ಲದೆ ಈ ವಿವಾದದ ಮಧ್ಯೆ ಸಾವರ್ಕರ್ (Savarkar) ಹೆಸರು ಎಳೆದು ತಂದು ಸಾವರ್ಕರ್ ಮೊಮ್ಮಗ ಹಾಗೂ ಹಿಂದೂ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮಧ್ಯೆ ಮೋದಿ ಉಪನಾಮ ಕುರಿತು ಮಾಡಿದ ಭಾಷಣದಲ್ಲಿ ತಮ್ಮ ಹೆಸರನ್ನು ಬಳಸಿರುವುದಕ್ಕೆ ಬ್ರಿಟನ್ನಲ್ಲಿರುವ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ (IPL Founder Lalit Modi) ರಾಹುಲ್ ಗಾಂಧಿ ವಿರುದ್ಧ ಲಂಡನ್ ಕೋರ್ಟ್ನಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಏನು?
2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡುವ ವೇಳೆ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಟೀಕಿಸುವ ಬರದಲ್ಲಿ 'ಮೋದಿ ಸರ್‌ನೇಮ್' ಬಗ್ಗೆ ಆಕ್ಷೇಪಾರ್ಹ ಟೀಕೆ ಮಾಡಿದ್ದರು. ಎಲ್ಲಾ ಕಳ್ಳರಿಗೂ ಮೋದಿ ಎಂಬ ಒಂದೇ ಉಪನಾಮ ಇರುವುದು ಹೇಗೆ? ಎಂದು ಪ್ರಶ್ನಿಸಿದ್ದ ಅವರು, ನೀರವ್ ಮೋದಿ, ಲಲಿತ್ ಮೋದಿ ಹಾಗೂ ನರೇಂದ್ರ ಮೋದಿ.. ಇವರೆಲ್ಲರ ಹೆಸರಿನಲ್ಲಿಯೂ ಮೋದಿ ಎಂಬ ಸರ್‌ನೇಮ್ ಇದೆ ಎಂದು ಉದಾಹರಣೆ ನೀಡಿದ್ದರು.
ಲೋಕಸಭೆಯಿಂದ ಅನರ್ಹತೆ
ರಾಹುಲ್ ಗಾಂಧಿಯವರ ಈ ಹೇಳಿಕೆ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸೂರತ್‌ನಲ್ಲಿ ದೂರು ನೀಡಿ, ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ 2 ವರ್ಷಗಳ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.
ಟ್ವೀಟ್ ಮಾಡಿ ಲಲಿತ್ ಮೋದಿ ಕಿಡಿ
ಮೋದಿ ಸರ್‌ನೇಮ್ ಬಗ್ಗೆ ರಾಹುಲ್ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿರುವ ಲಲಿತ್ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. " ರಾಹುಲ್ ಸೇರಿದಂತೆ ಬಹುತೇಕ ಕಾಂಗ್ರೆಸ್ನವರು ನಾನು ಪರಾರಿಯಾಗಿದ್ದೇನೆ ಎಂದು ಪದೇ ಪದೇ ಹೇಳುವುದನ್ನು ನಾನು ನೋಡಿದ್ದೇನೆ. ಅದು ಏಕೆ? ಹೇಗೆ?. ಇಲ್ಲಿಯವರೆಗೆ ನಾನು ಯಾವಾಗ ಶಿಕ್ಷೆಗೆ ಒಳಗಾಗಿದ್ದೇನೆ? ಪಪ್ಪು ಅಲಿಯಾಸ್ ರಾಹುಲ್ ಗಾಂಧಿಯಂತೆ ನಾನು ಶಿಕ್ಷೆಗೆ ಗುರಿಯಾಗಿಲ್ಲ. ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಬೇರೆ ಕೆಲಸವಿಲ್ಲ ಎಂದು ಕಿಡಿಕಾರಿದ್ದಾರೆ.
i see just about every Tom dick and gandhi associates again and again saying i ama fugitive of justice. why ?How?and when was i to date ever convicted of same. unlike #Papu aka @RahulGandhi now an ordinary citizen saying it and it seems one and all oposition leaders have nothing…
— Lalit Kumar Modi (@LalitKModi) March 30, 2023
100 ಬಿಲಿಯನ್ ಡಾಲರ್‌ನಷ್ಟು ಆದಾಯ ಸೃಷ್ಟಿಸುತ್ತಿರುವ ಜಗತ್ತಿನ ಅತ್ಯಂತ ಅದ್ದೂರಿ ಕ್ರಿಕೆಟ್ ಲೀಗ್ಅನ್ನು ನಾನು ಸೃಷ್ಟಿ ಮಾಡಿದ್ದಾಗಿ ಹೇಳಿಕೊಂಡಿರುವ ಲಲಿತ್, ರಾಹುಲ್ ಗಾಂಧಿ ಕುಟುಂಬ ದೇಶಕ್ಕಾಗಿ ಮಾಡಿರುವುದಕ್ಕಿಂತಲೂ ಹೆಚ್ಚಿನದ್ದನ್ನು ತಮ್ಮ ಕುಟುಂಬ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸಲಿ ಎಂದು ಲಲಿತ್ ಮೋದಿ ಸವಾಲ್ ಹಾಕಿದ್ದಾರೆ.
ಯುಕೆ ಕೋರ್ಟ್ನಲ್ಲಿ ಕೇಸ್
ರಾಹುಲ್ ಗಾಂಧಿಯನ್ನು ಯುಕೆ ನ್ಯಾಯಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿದ್ದೇನೆ. ರಾಹುಲ್ ಗಾಂಧಿ ಕೋರ್ಟ್ಗೆ ಬರಬೇಕಾಗುತ್ತದೆ. ನಿಖರ ಸಾಕ್ಷಿಯೊಂದಿಗೇ ಬರಬೇಕು. ಅರ್ಧಂಬರ್ಧ ಮೂರ್ಖನಂತಾಗಿರುವ ರಾಹುಲ್ ಗಾಂಧಿ ಇಲ್ಲಿನ ಕೋರ್ಟ್ಗೆ ಬಂದು ನಿಂತು ತನ್ನನ್ನು ತಾನು ಸಂಪೂರ್ಣವಾಗಿ ಮೂರ್ಖನನ್ನಾಗಿಸಿಕೊಳ್ಳುವುದನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದಿರುವ ಲಲಿತ್ ಮೋದಿ, ಗಾಂಧಿ ಕುಟುಂಬ ಸೇರಿದಂತೆ ಹಲವರ ಹೆಸರುಗಳನ್ನು ಬರೆದು, ಇವರೆಲ್ಲಾ ಹೇಗೆ ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ ಎಂಬುದಕ್ಕೆ ನಾನು ಸಾಕ್ಷಿ ಕೊಡಬಲ್ಲೆ ಎಂದು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ