• Home
  • »
  • News
  • »
  • national-international
  • »
  • Lakhimpur Kheri Violence: ನಿಷೇಧಾಜ್ಞೆ‌ ಇದ್ದರೇನಂತೆ, 3 ಜನ ಲಖಿಂಪುರ್​ಗೆ ಹೋಗುತ್ತೇವೆ; ರಾಹುಲ್ ಗಾಂಧಿ

Lakhimpur Kheri Violence: ನಿಷೇಧಾಜ್ಞೆ‌ ಇದ್ದರೇನಂತೆ, 3 ಜನ ಲಖಿಂಪುರ್​ಗೆ ಹೋಗುತ್ತೇವೆ; ರಾಹುಲ್ ಗಾಂಧಿ

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

ಹಾತ್ರಾಸ್ ಘಟನೆ ನಡೆದಾಗಲೂ ನಾವು ಅಲ್ಲಿಗೆ ಹೋಗಿದ್ದರಿಂದ ತನಿಖೆ ಆಯಿತು. ಈಗಲೂ ಲಖೀಂಪುರ್ ಖೇರಿಗೆ ತೆರಳುವ ಹಿಂದೆ ಮೃತಪಟ್ಟ ರೈತರನ್ನು ಸಂತೈಸುವ ಮತ್ತು ತನಿಖೆ ಆಗುವಂತೆ ಒತ್ತಾಯಿಸುವ ಉದ್ದೇಶ ಮಾತ್ರ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

  • Share this:

 ನವದೆಹಲಿ(ಅ. 6): ಪ್ರತಿಭಟನೆ ಮಾಡುತ್ತಿದ್ದ ರೈತರ ಮಾರಣಹೋಮ ನಡೆದಿರುವ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ (Lakhimpur Kheri Violence ) ತೆರಳಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (AICC Former President Rahul Gandhi) ನೇತೃತ್ವದ ಐವರ ನಿಯೋಗಕ್ಕೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ (Uttar Pradesh BJP Government) ನಿರಾಕರಿಸಿದೆ. ಲಖೀಂಪುರ್ ಖೇರಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕಾಂಗ್ರೆಸ್ ನಿಯೋಗದ ಭೇಟಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದಕ್ಕೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ ಅವರು 'ನಿಷೇಧಾಜ್ಞೆ ಇದ್ದರೆ ನಾಲ್ಕಕ್ಕಿಂತ ಹೆಚ್ಚು ಜನ ಹೋಗುವಂತಿಲ್ಲ, ನಾವು ಮೂರು ಜನ ಲಖೀಂಪುರ್ ಖೇರಿಗೆ ಹೋಗುತ್ತೇವೆ' ಎಂದು ಹೇಳಿದ್ದಾರೆ.


ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel), ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Chief Minister Charanjith Sing Channi) ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (K.C. Venugopal) ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ (Ranadeep Sing Surjewala) ಅವರೊಂದಿಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ (AICC Head Quarter) ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಅವರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಪ್ರತಿಪಕ್ಷದ ನಾಯಕರು ಹಿಂಸಾಚಾರ ನಡೆದ ಸ್ಥಳಕ್ಕೆ ಹೋಗುವುದನ್ನು ತಡೆಯಲಾಗಿತ್ತು. ಹಿಂದೆ ಹಾತ್ರಾಸ್ ಘಟನೆ (Hathras Incident) ನಡೆದಾಗಲೂ ಹೀಗೆ ಮಾಡಿದ್ದರು. ನಾವು ಅಲ್ಲಿಗೆ ಹೋಗಿದ್ದರಿಂದ ಆ ಘಟನೆ ಬಗ್ಗೆ ತನಿಖೆ ಆಯಿತು. ಈಗಲೂ ಲಖೀಂಪುರ್ ಖೇರಿಗೆ ತೆರಳುವ ಹಿಂದೆ ಮೃತಪಟ್ಟ ರೈತರನ್ನು ಸಂತೈಸುವ ಮತ್ತು ತನಿಖೆ ಆಗುವಂತೆ ಒತ್ತಾಯಿಸುವ ಉದ್ದೇಶ ಮಾತ್ರ ಇದೆ ಎಂದು ಹೇಳಿದರು.


ರಾಹುಲ್ ಗಾಂಧಿ ನೇತೃತ್ವದಲ್ಲಿ ಮೊದಲಿಗೆ ಐವರ ನಿಯೋಗ ತೆರಳುವ ಯೋಜನೆ ಇತ್ತು. ನಿಯೋಗದಲ್ಲಿ ಭೂಪೇಶ್ ಬಘೇಲ್, ಚರಣಜಿತ್ ಸಿಂಗ್ ಚನ್ನಿ, ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ (Rajasthan Deputy Chief Minister Sachin Pilot) ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Uttar Pradesh Congress In Charge and AICC General Secretary Priyanka Gandhi Vadra) ಕೂಡ ಇರಬೇಕಿತ್ತು. ಆದರೆ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಪೊಲೀಸರು (Uttar Pradesh Police) ಗೃಹ ಬಂಧನದಲ್ಲಿ (House Arrest) ಇರಿಸಿರುವುದರಿಂದ ಅವರ ಬದಲಿಗೆ ಕೆ.ಸಿ. ವೇಣುಗೋಪಾಲ್ ತೆರಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗ ರಾಹುಲ್ ಗಾಂಧಿ, ಭೂಪೇಶ್ ಬಘೇಲ್ ಮತ್ತು ಚರಣಜಿತ್ ಸಿಂಗ್ ಚನ್ನಿ ಮಾತ್ರ ತೆರಳಲಿದ್ದಾರೆ.


ಇದನ್ನೂ ಓದಿ:Lakhimpur Kheri Violence: ಇಂದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಲಖಿಂಪುರ ಖೇರಿಗೆ ಭೇಟಿ


ನಿಯೋಗವು ಮಧ್ಯಾಹ್ನ 12.30ಕ್ಕೆ ಲಕ್ನೋ ವಿಮಾನ ನಿಲ್ದಾಣ (Lucknow Airport) ತಲುಪಲಿದ್ದ ಅಲ್ಲಿಂದ ರಸ್ತೆ ಮಾರ್ಗವಾಗಿ ಲಖಿಂಪುರ ಖೇರಿಗೆ ತೆರಳಲಿದೆ. ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ‌ ಹೇಳಲಿದೆ. ಮೊನ್ನೆ ಲಖೀಂಪುರ ಖೇರಿಗೆ ತೆರಳಲು ಲಕ್ನೋಗೆ ಆಗಮಿಸಿದ್ದ ಛತ್ತೀಸಗಢ ಸಿಎಂ ಭೂಪೇಶ್ ಬಾಘೇಲ್ ಅವರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿ ತಡೆದಿದ್ದರು. ಪೊಲೀಸರ ನಡೆ ಖಂಡಿಸಿ ಸಿಎಂ ಭೂಪೇಶ್ ಬಾಘೇಲ್ ವಿಮಾನ ನಿಲ್ದಾಣದಲ್ಲಿಯೇ ಕುಳಿತು ಧರಣಿ ನಡೆಸಿದ್ದರು. ಇದಲ್ಲದೆ ಪಂಜಾಬ್ ಕಾಂಗ್ರೆಸ್ ನಿಯೋಗಕ್ಕೂ (Punjab Congress Delegation) ಉತ್ತರ ಪ್ರದೇಶ ಪೊಲೀಸರು ಲಖಿಂಪುರ ಖೇರಿಗೆ ತೆರಳಲು ನಿರ್ಬಂಧಿಸಿದ್ದರು.


ಪತ್ರಿಕಾಗೋಷ್ಠಿಯಲ್ಲಿ ಲಖೀಂಪುರ್ ಹಿಂಸಾಚಾರದ ಬಗ್ಗೆ ಕಿಡಿ ಕಾರಿದ ರಾಹುಲ್ ಗಾಂಧಿ, ದೇಶದಲ್ಲಿ ಈಗ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆ. ಏಕೆಂದರೆ ದೇಶದಲ್ಲಿ ಭಯಂಕರ ಲೂಟಿ ಆಗುತ್ತಿದೆ. ಜನರ ಹಣ ಮತ್ತು ರೈತರ ಭೂಮಿಯನ್ನು ಲೂಟಿ ಮಾಡಲಾಗುತ್ತಿದೆ.‌ ಅದನ್ನು ಯಾರೂ ಕೇಳಬಾರದೆಂದು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ.‌ ಬಿಜೆಪಿ ಮತ್ತು‌ ಆರ್ ಎಸ್ ಎಸ್ ರೈತರನ್ನು ನಿಯಂತ್ರಿಸಲು ಯತ್ನಿಸುತ್ತಿವೆ. ರೈತರನ್ನು ಮಾತ್ರವಲ್ಲ ಎಲ್ಲರನ್ನೂ ‌ನಿಯಂತ್ರಿಸಲು ಯತ್ನಿಸುತ್ತಿವೆ. ಕೇಂದ್ರ ಸರ್ಕಾರ ಹಂತಹಂತವಾಗಿ ರೈತರನ್ನು ಮುಗಿಸುತ್ತಿದೆ. ವ್ಯವಸ್ಥಿತವಾಗಿ ಮುಗಿಸುತ್ತಿದೆ. ಮೊದಲಿಗೆ ಭೂಸ್ವಾಧೀನ ಕಾನೂನು ತಿದ್ದುಪಡಿ ತಂದರು. ನಂತರ ರೈತ ವಿರೋಧಿ‌ 3 ಕೃಷಿ ಕಾಯಿದೆಗಳನ್ನು ತಂದರು. ಈಗ ರೈತರ ಮೇಲೆ ದಾಳಿ ಮಾಡಿ ಬಲಿ ಪಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪ್ರಿಯಾಂಕಾ ಗಾಂಧಿಗೆ ವಕೀಲರ ಭೇಟಿಗೂ ಅವಕಾಶ ನಿರಾಕರಣೆ


ಪಿಸಿ ಗೆಸ್ಟ್ ಹೌಸ್ ನಲ್ಲಿ ಗೃಹ ಬಂಧನದಲ್ಲಿ ಇರಿಸಲ್ಪಟ್ಟಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರ ಪ್ರದೇಶದ ಪೊಲೀಸರು ವಕೀಲರ ಭೇಟಿಗೂ ಅವಕಾಶ ಮಾಡಿಕೊಡುತ್ತಿಲ್ಲ. ಈ ಬಗ್ಗೆ ಮಂಗಳವಾರ ಸಂಜೆ ಫೋನ್ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ‌ ಅವರು, 'ಲಖೀಂಪುರ್ ಖೇರಿ ಹಿಂಸಾಚಾರದ ರೂವಾರಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ (Union Home Minister (MoS) Ajay Mishra) ಮತ್ತು ಅವರ ಪುತ್ರ ಆಶೀಶ್ ಮಿಶ್ರಾ ಬಂಧನ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನನ್ನನ್ನು ಇಲ್ಲಿರಿಸಿ 38 ಗಂಟೆ ಕಳೆದ್ರೂ ಎಫ್‍ಐಆರ್ (FIR) ಕಾಪಿ ನೀಡುತ್ತಿಲ್ಲ ಏಕೆ? ವಕೀಲರನ್ನು ಸಂಪರ್ಕಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.


'ರೈತರಿಗಾಗಿ ನೀವೆಲ್ಲರೂ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದೀರಿ. ರೈತರೇ ಭೂಮಿಯ ದೇವರು. ರೈತರು ಭೂಮಿಗೆ ರಕ್ತ ಹರಿಸಿ ಬೆಳೆ ಬೆಳೆಯುತ್ತಾರೆ. ಇಂದೂ ರೈತರ ಮಕ್ಕಳು ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಸರ್ಕಾರ ಜನರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ರೈತರನ್ನು ಭೇಟಿಯಾಗಲು ಹೊರಟ ಒಬ್ಬ ಮಹಿಳೆಯನ್ನು ಬಿಜೆಪಿ ಸರ್ಕಾರ ತಡೆದು ನಿಲ್ಲಿಸಿದೆ. ಸ್ವತಂತ್ರ ದಿನಾಚರಣೆಯ ಅಮೃತಮಹೋತ್ಸವ ಆಚರಣೆಗಾಗಿ ಲಕ್ನೋಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರೈತರ ಕಣ್ಣೀರು ಒರೆಸಲು ಬರಲಿಲ್ಲ ಏಕೆ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.


ಗೆಸ್ಟ್ ಹೌಸ್ ಮುಂದೆ ಕಾಂಗ್ರೆಸ್ ಪ್ರತಿಭಟನೆ


ಪ್ರಿಯಾಂಕಾ ಗಾಂಧಿ ಅವರನ್ನು ಇರಿಸಲಾಗಿರುವ ಗೆಸ್ಟ್ ಹೌಸ್ ತಾತ್ಕಾಲಿಕ ಜೈಲಿನ ರೀತಿ ಬದಲಾಗಿದೆ. ಅಲ್ಲಿಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇತ್ತ ಗೆಸ್ಟ್ ಹೌಸ್ ಮುಂಭಾಗ ಜಮಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಅಲ್ಲಿಯೇ ಅಡುಗೆ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ


ಲಖೀಂಪುರ ಖೇರಿ ಹಿಂಸಾಚಾರದ ಕುರಿತು ಇಂದು ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಸನ್ನಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amith Sha) ಅವರನ್ನು ಭೇಟಿಯಾಗಲಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಪಂಜಾಬ್ ನಿಂದ ಲಖಿಂಪುರ ಖೇರಿ ಅವರಿಗೆ ಪಾದಯಾತ್ರೆ ಮಾಡುವೆ ಎಚ್ಚರಿಕೆ ನೀಡಿದ್ದಾರೆ.‌ ಮಾಜಿ ಕೇಂದ್ರ ಸಚಿವ ಪಿ .ಚಿದಂಬರಂ (P. Chidambarm), ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar), ಶಿವಸೇನೆ ಸಂಸದ ವಕ್ತಾರ ಸಂಜಯ್ ರಾವತ್ (Sanjay Rawath),  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮತ್ತಿತರರು ಘಟನೆಗೆ ಕಾರಣವಾದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Published by:Latha CG
First published: