Lakhimpur Kheri Violence| ನಿನ್ನೆ ಕಾಣೆಯಾಗಿದ್ದ ಪತ್ರಕರ್ತ ಇಂದು ಸಾವು, 9ಕ್ಕೇರಿದ ಸಾವಿನ ಸಂಖ್ಯೆ, ಅಖಿಲೇಶ್ ಯಾದವ್ ಧರಣಿ!

ಘಟನೆಗೆ ಕಾರಣರಾದ ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್​ ಮೌರ್ಯ ಅವರನ್ನು ಕೂಡಲೇ ಆ ಸ್ಥಾನದಿಂದ ಕಿತ್ತೊಗೆಯಬೇಕು. ಅಲ್ಲದೆ, ಘಟನೆಯಲ್ಲಿ ಮೃತಪಟ್ಟ ಅಮಾಯಕ ರೈತರಿಗೆ ಕನಿಷ್ಟ 2 ಕೋಟಿ ಪರಿಹಾರ ನೀಡಬೇಕು ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.

ಧರಣಿ ನಡೆಸುತ್ತಿರುವ ಅಖಿಲೇಶ್ ಯಾದವ್.

ಧರಣಿ ನಡೆಸುತ್ತಿರುವ ಅಖಿಲೇಶ್ ಯಾದವ್.

  • Share this:
    ಲಖ್ನೋ (ಅಕ್ಟೋಬರ್ 04); ಭಾನುವಾರ ಉತ್ತರಪ್ರದೇಶದ (Uttara Pradesh) ಲಖೀಮ್​ಪುರ್​ (Lakhimpur Kheri Violence) ನಲ್ಲಿ ನಡೆದ ಹಿಂಸಾಚಾರದಲ್ಲಿ 4 ಜನ ರೈತರು ಸೇರಿದಂತೆ ಒಟ್ಟು 8 ಜನ ಮೃತಪಟ್ಟಿದ್ದರು. ಆದರೆ, ನಿನ್ನೆ ಘಟನೆಯ ನಂತರ ಕಾಣೆಯಾಗಿದ್ದ ಸ್ಥಳೀಯ ಪತ್ರಕರ್ತನೊಬ್ಬ ಇಂದು ಮೃತಪಟ್ಟಿರುವುದು ಧೃಡವಾಗಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿದೆ. ಈ ನಡುವೆ ಇಂದು ಮುಂಜಾನೆ ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಪ್ರಿಯಾಂಕ ಗಾಂಧಿಯನ್ನು ಬಂಧಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ, ಅಖಿಲೇಶ್ ಯಾದವ್ ಘಟನೆಯನ್ನು ಖಂಡಿಸಿ ರಸ್ತೆಗಿಳಿದು ಹೋರಾಟ ನಡೆಸಿದ ಪರಿಣಾಮ ಇದೀಗ ಅವರನ್ನೂ ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

    ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್​ ಮೌರ್ಯ ನಿನ್ನೆ ಉತ್ತರ ಪ್ರದೇಶದ ಲಖೀಮ್​ಪುರ್​ಗೆ ಆಗಮಿಸಿದ್ದರು. ಆದರೆ, ಅವರ ಈ ಭೇಟಿಯನ್ನು ತಡೆಯುವ ಸಲುವಾಗಿ ರೈತ ಪ್ರತಿಭಟನಾಕಾರರು ಹೆಲಿಪ್ಯಾಡ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅಜಯ್ ಮಿಶ್ರಾ ಸೇರಿದಂತೆ ಇನ್ನಿತರರು ರಸ್ತೆ ಮಾರ್ಗವಾಗಿಯೇ ಲಖಿಮಪುರಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಹಿಂದಿರುಗುತ್ತಿದ್ದ ವೇಳೆ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

    ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದ್ದಾರೆ. ಈ ಘಟನೆಯಲ್ಲಿ ಅನೇಕ ರೈತರು ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಹಿಂಸಾಚಾರದಲ್ಲಿ ಪೊಲೀಸರು ಸಹ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಈ ಘಟನೆ ನಂತರ ಲಖೀಮ್​ಪುರ್​ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ.

    ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕಾರ, ಮೃತಪಟ್ಟ ನಾಲ್ವರು ರೈತರನ್ನು ಸುಖ್ವಿಂದರ್ ಸಿಂಗ್ (20), ಸತ್ನಾಮ್ ಸಿಂಗ್ (20), ಹರಿ ಸಿಂಗ್ (35) ಮತ್ತು ಸುಬ್ಬ ಸಿಂಗ್ (65) ಎಂದು ಗುರುತಿಸಲಾಗಿದೆ. ಈ ಘಟನೆ ನಂತರ ಲಖೀಮ್​ಪುರ್​ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದ್ದು, ರೈತರು ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

    ಧರಣಿ ವೇಳೆ ಮಾಧ್ಯಮಗಳ ಎದುರು ತಮ್ಮ ಮಾತನಾಡಿರುವ ಮಾಜಿ ಸಿಎಂ ಅಖಿಲೇಶ್ ಯಾದವ್, "ಘಟನೆಗೆ ಕಾರಣರಾದ ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್​ ಮೌರ್ಯ ಅವರನ್ನು ಕೂಡಲೇ ಆ ಸ್ಥಾನದಿಂದ ಕಿತ್ತೊಗೆಯಬೇಕು. ಅಲ್ಲದೆ, ಘಟನೆಯಲ್ಲಿ ಮೃತಪಟ್ಟ ಅಮಾಯಕ ರೈತರಿಗೆ ಕನಿಷ್ಟ 2 ಕೋಟಿ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.

    ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿರುವ ಸಿಎಂ ಯೋಗಿ ಆದಿತ್ಯನಾಥ್, "ಇಂತಹ ಘಟನೆಗಳು ದುರದೃಷ್ಟಕರ. ಸರ್ಕಾರವು ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸಲಿದೆ. ಸಮಾಜ ವಿರೋಧಿಗಳ ಒಳಗೊಳ್ಳುವಿಕೆಯನ್ನು ಬೆಳಕಿಗೆ ತರುತ್ತದೆ. ಸಂಬಂಧಪಟ್ಟವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ.

    ಇದನ್ನೂ ಓದಿ: Lakhimpur Violence: ಲಖೀಮ್​ಪುರ್ ಹಿಂಸಾಚಾರ; ರೈತರ ಸಾವು, 13 ಜನರ ವಿರುದ್ಧ ಕೇಸ್..ಇಲ್ಲಿವರಗೆ ಆಗಿದ್ದೇನು?

    ಘಟನೆಯ ನಂತರ ಲಖೀಮ್​ಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹಿಂಸಾಚಾರ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಹೀಗಾಗಿ ಲಖೀಮ್​ಪುರ್​ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸುತ್ತಲಿನ ಗಡಿಗಳನ್ನು ಮುಚ್ಚಲಾಗಿದ್ದು, ಲಖೀಮ್​ಪುರ್​ಗೆ ಹೋಗುವ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
    Published by:MAshok Kumar
    First published: