Lakhimpur Kheri Massacre| ಲಖೀಂಪುರ್​ ಹತ್ಯಾಕಾಂಡ; 10 ದಿನಗಳ ಬಳಿಕ ಘಟನಾ ಸ್ಥಳಕ್ಕೆ ಬಿಜೆಪಿ ಸಚಿವ, ಮೃತ ರೈತ ಕುಟುಂಬಗಳ ಭೇಟಿಗೆ ನಿರಾಕರಣೆ!

ಮೃತ ರೈತ ಕುಟುಂಬಗಳ ಪ್ರತಿಕ್ರಿಯೆ ಏನೇ ಇರಬಹುದು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ರೈತ ಕುಟುಂಬಗಳನ್ನು ಭೇಟಿ ಮಾಡಬೇಕಿತ್ತು. ಆದರೆ, ಸಚಿವ ಬ್ರಿಜೇಶ್ ಪಾಠಕ್ ಅವರ ಈ ವರ್ತನೆ ಅಕ್ಷಮ್ಯ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಕಿಡಿಕಾರಿದ್ದಾರೆ.

ಲಖೀಂಪುರ್​ ಖೇರಿಗೆ ಭೇಟಿ ನೀಡಿರುವ ಉತ್ತರ ಪ್ರದೇಶ ಕಾನೂನು ಸಚಿವ ಬ್ರಿಜೇಶ್ ಪಾಠಕ್.

ಲಖೀಂಪುರ್​ ಖೇರಿಗೆ ಭೇಟಿ ನೀಡಿರುವ ಉತ್ತರ ಪ್ರದೇಶ ಕಾನೂನು ಸಚಿವ ಬ್ರಿಜೇಶ್ ಪಾಠಕ್.

 • Share this:
  ಲಕ್ನೋ (ಅಕ್ಟೋಬರ್​ 14); ಉತ್ತರ ಪ್ರದೇಶದ ಲಖೀಂಪುರ್​ ಖೇರಿ ರೈತ ಹತ್ಯಾಕಾಂಡ (Lakhimpur Kheri Massacre) ನಡೆದ 10 ದಿನಗಳಾಗಿವೆ. ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್​ ಮಿಶ್ರಾ (Ajay Mishra) ಅವರ ಮಗ ಆಶೀಶ್ ಮಿಶ್ರಾ (Ashish Mishra) ಹಾರು ಹರಿಸಿದ್ದ ಕಾರಣ ಸ್ಥಳದಲ್ಲೇ 4 ಜನ ರೈತರು ಮೃತಪಟ್ಟಿದ್ದರು. ಅಲ್ಲದೆ, ಘಟನೆಯ ನಂತರ ನಡೆದ ಗಲಭೆಯಲ್ಲಿ ಪತ್ರಕರ್ತ ಸೇರಿದಂತೆ 4 ಜನ ಮೃತಪಟ್ಟಿದ್ದರು. ಒಟ್ಟು 9 ಜನರ ಸಾವಿಗೆ ಕಾರಣವಾದ ಈ ಘಟನೆಯ ನೇರ ಆರೋಪಿ ಬಿಜೆಪಿ ಸಚಿವ ಅಜಯ್ ಮಿಶ್ರಾ ಮತ್ತು ಆತನ ಮಗ ಆಶೀಶ್ ಮಿಶ್ರಾ ಎನ್ನಲಾಗಿದೆ. ಈ ಘಟನೆ ದೇಶದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಸ್ವತಃ ಸುಪ್ರೀಂ ಕೋರ್ಟ್ (Supreme Court) ಮಧ್ಯಪ್ರವೇಶ ಮಾಡಿರುವ ಕಾರಣ ಆಶೀಶ್ ಮಿಶ್ರಾ ವಿರುದ್ಧ ಕೇಸ್​ ದಾಖಲಿಸಿ ಬಂದಿಸಲಾಗಿದೆ. ಆದರೆ, ಘಟನೆ ನಡೆದು 10 ದಿನ ಕಳೆದರೂ ಸಹ ಯಾವೊಬ್ಬ ಬಿಜೆಪಿ (BJP) ನಾಯಕನೂ ಸಹ ಈ ಗ್ರಾಮಕ್ಕೆ ಭೇಟಿ ನೀಡಲು ಮುಂದಾಗಿರಲಿಲ್ಲ. ಆದರೆ, ಬುಧವಾರ ಉತ್ತರಪ್ರದೇಶ ಸರ್ಕಾರದ ಕಾನೂನು ಸಚಿವ ಬ್ರಿಜೇಶ್ ಪಾಠಕ್ (Brijesh Pathak) ಮೊದಲ ಬಾರಿಗೆ ಲಖೀಂಪುರ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮೃತ ರೈತರ ಮನೆಗಳಿಗೆ ಭೇಟಿ ನೀಡಿಲ್ಲ ಎನ್ನಲಾಗಿದೆ.

  ಘಟನಾ ಸ್ಥಳಕ್ಕೆ ಬಿಜೆಪಿ ಸಚಿವರ ಭೇಟಿ:

  ರೈತ ಹೋರಾಟಗಾರರನ್ನು ಕೊಲ್ಲಲ್ಪಟ್ಟ ಲಖೀಂಪುರ್ ಖೇರಿಯಲ್ಲಿ ಇನ್ನೂ ಪ್ರಕ್ಷುಬ್ಧತೆ ಇಳಿದಂತೆ ಕಾಣುತ್ತಿಲ್ಲ. ಆಡಳಿತರೂಢ ಬಿಜೆಪಿ ಸರ್ಕಾರದ ಮೇಲೆ ರೈತರ ಆಕ್ರೋಶ ತಣಿದಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಸಚಿವ ಬ್ರಿಜೇಶ್ ಪಾಠಕ್​ ಬುಧವಾರ ಲಖೀಂಪುರ್​ಗೆ ಭೇಟಿ ನೀಡಿದ್ದರು.

  ಆದರೆ, ಅವರು ಘಟನೆಯಲ್ಲಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತರಾದ ಶಭಂ ಮಿಶ್ರಾ ಮತ್ತು ಅಜಯ್ ಮಿಶ್ರಾ ಕಾರು ಚಾಲಕ ಹರಿ ಓಂ ಮಿಶ್ರಾ ಅವರ ಮನೆಗಳಿಗೆ ಮಾತ್ರ ಭೇಟಿ ನೀಡಿದ್ದಾರೆ. ಮೃತ ರೈತರ ಕುಟುಂಬಗಳನ್ನು ಭೇಟಿ ಮಾಡದೆ ತೆರಳಿರುವುದು ರೈತ ಸಮುದಾಯದ ನಡುವೆ ಮತ್ತಷ್ಟು ಆಕ್ರೋಶ ಮಡುಗಟ್ಟಲು ಕಾರಣವಾಗಿದೆ ಎನ್ನಲಾಗಿದೆ.

  ಇದನ್ನೂ ಓದಿ: Ashish Mishra Denied Bail| ಲಖೀಂಪುರ್​ ರೈತ ಹತ್ಯಾಕಾಂಡ; ಆಶೀಶ್ ಮಿಶ್ರಾಗೆ ಜಾಮೀನು ನಿರಾಕರಣೆ, ಮತ್ತಿಬ್ಬರ ಬಂಧನ

  ಪರಿಸ್ಥಿತಿ ಹತೋಟಿಗೆ ಬಂದ ನಂತರ ಭೇಟಿ;

  ತಮ್ಮ ಭೇಟಿಯ ಬಗ್ಗೆ ಪತ್ರಕರ್ತರ ಜೊತೆಗೆ ಮಾತನಾಡಿರುವ ಸಚಿವ ಬ್ರಿಜೇಶ್ ಪಾಠಕ್, "ಲೀಖಿಂಪುರ್​ಗೆ ಭೇಟಿ ನೀಡಿ ಮೃತ ಬಿಜೆಪಿ ಕಾರ್ಯಕರ್ತರ ಮನೆಗೆ ತೆರಳಿದ್ದೆ. ಆದರೆ, ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ನಿಶಾದ್ ಸುಂದರ್​ ಮತ್ತು ಪತ್ರಕರ್ತ ರಾಮನ್ ಕಶ್ಯಪ್ ಮನೆ ಪಕ್ಕದ ಜಿಲ್ಲೆಯಲ್ಲಿರುವ ಕಾರಣ ಅಲ್ಲಿಗೆ ತೆರಳಲು ಸಾಧ್ಯವಾಗಿಲ್ಲ. ಪರಿಸ್ಥಿತಿ ತಿಳಿಯಾದ ನಂತರ ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೂ ಭೇಟಿ ನೀಡಿ ಮಾತುಕತೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.

  ಅಲ್ಲದೆ, "ನಾನು ಮೃತ ಕುಟುಂಬಗಳಿಗೆ ಸಾಂತ್ವನ ಹೇಳಲು ಮತ್ತು ನ್ಯಾಯಯುತ ತನಿಖೆಯ ಭರವಸೆ ನೀಡಲು ಭೇಟಿ ನೀಡಿದ್ದೇನೆ. ಭದ್ರತಾ ಬೆದರಿಕೆ ಇರುವುದರಿಂದ ಆಯುಧ ಪರವಾನಗಿ ಸೇರಿದಂತೆ ಕುಟುಂಬಗಳು ಕೆಲವು ಬೇಡಿಕೆಗಳನ್ನು ಹೊಂದಿದ್ದವು. ಅದನ್ನು ನಿಯಮಗಳ ಪ್ರಕಾರ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದೇನೆ" ಎಂದು ಹೇಳಿದ್ದಾರೆ.

  ಇದನ್ನೂ ಓದಿ: Lakhimpur Kheri Massacre: ಯೂತ್ ಕಾಂಗ್ರೆಸ್ಸಿನಿಂದ ದೆಹಲಿಯಲ್ಲಿ ಪಂಜಿನ ಮೆರವಣಿಗೆ, ಕೇಂದ್ರ ಸಚಿವರ ವಜಾಕ್ಕೆ ಆಗ್ರಹ

  ಸಚಿವ  ವರ್ತನೆಗೆ ವಿರೋಧ ಪಕ್ಷಗಳ ಟೀಕೆ;

  ವಿರೋಧ ಪಕ್ಷಗಳು ಬ್ರಿಜೇಶ್ ಪಾಠಕ್ ಅವರ ಭೇಟಿಯನ್ನು ಟೀಕಿಸಿವೆ. ರೈತ ನಾಯಕ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್​ ಸಹ ಸಚಿವರ ಈ ವರ್ತನೆಯನ್ನು ಖಂಡಿಸಿದ್ದು, "ಬಿಜೆಪಿ ಸಚಿವರು ಘಟನೆ ನಡೆದು ತುಂಬಾ ತಡವಾಗಿ ಲಖೀಂಪುರ್​ಗೆ ಭೇಟಿ ನೀಡಿದ್ದಾರೆ. ಮೃತ ರೈತ ಕುಟುಂಬಗಳ ಪ್ರತಿಕ್ರಿಯೆ ಏನೇ ಇರಬಹುದು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮೃತ ರೈತ ಕುಟುಂಬಗಳನ್ನು ಭೇಟಿ ಮಾಡಬೇಕಿತ್ತು. ಆದರೆ, ಸಚಿವ ಬ್ರಿಜೇಶ್ ಪಾಠಕ್ ಅವರ ಈ ವರ್ತನೆ ಅಕ್ಷಮ್ಯ" ಎಂದು ಕಿಡಿಕಾರಿದ್ದಾರೆ.
  Published by:MAshok Kumar
  First published: